ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, “ಮುಂದಿನ ಐದು ವರ್ಷಗಳ ಕಾಲ ನಮ್ಮ ತಂದೆಯವರೇ ಮುಖ್ಯಮಂತ್ರಿ ಆಗಿರುತ್ತಾರೆ. ಈ ಬಗ್ಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ” ಎಂದು ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, “ಮುಂದಿನ ಐದು ವರ್ಷ ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನೇ ಗೌರವದಿಂದ ಸ್ವೀಕರಿಸೋಣ” ಎಂದು ತೀಕ್ಷ್ಣ ಟಾಂಗ್ ನೀಡಿದ್ದಾರೆ.
ಅಧಿಕಾರ ಹಂಚಿಕೆ ಕುರಿತಾಗಿ ಶಾಸಕ ಬಸವರಾಜು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಡಿಕೆಶಿ, “ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕಾದವರು ದೆಹಲಿಯವರು” ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆಗೆ ನಡೆದ ಪ್ರಯತ್ನಗಳಿಗೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ. ಹೀಗಾಗಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರಿಯುವುದು ಖಚಿತ ಎಂದು ಹೇಳಿದರು. ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ, ನಾಯಕತ್ವ ಚರ್ಚೆ ಮಾಧ್ಯಮಗಳಲ್ಲಷ್ಟೇ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮುಡಾ ಪ್ರಕರಣದಲ್ಲಿ ತಮ್ಮ ತಾಯಿಗೆ ನ್ಯಾಯಾಲಯದಿಂದ ಕ್ಲೀನ್ ಚೀಟ್ ಸಿಕ್ಕಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಜೊತೆಗೆ ಇವಿಎಂ ರದ್ದುಗೊಳಿಸಿ, ಎಲ್ಲಾ ಚುನಾವಣೆಗಳಲ್ಲೂ 'ಬ್ಯಾಲೆಟ್ ಪೇಪರ್' ಬಳಕೆಗೆ ಮರಳಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.