Jan 25, 2026 Languages : ಕನ್ನಡ | English

ಮಿಲಿಯನ್ ವೀಕ್ಷಣೆಯತ್ತ ಲ್ಯಾಂಡ್ ಲಾರ್ಡ್ ಜಬರ್ದಸ್ತ್ ಟ್ರೈಲರ್ - ಸಿನಿ ಪ್ರಿಯರಿಂದ ಬಾರಿ ಮೆಚ್ಚುಗೆ

ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ಉಡುಗೊರೆಯಾಗಿ ನಿನ್ನೆಯಷ್ಟೇ ‘ಲ್ಯಾಂಡ್‌ಲಾರ್ಡ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಖಡಕ್ ಡೈಲಾಗ್ಸ್, ಮಾಸ್ ಪರ್ಫಾಮನ್ಸ್, ಹಳ್ಳಿ ಜನರ ನೋವು-ನಲಿವಿನ ಕಥೆ ಒಟ್ಟಾರೆ ಟ್ರೈಲರ್ ಚಿತ್ರಕ್ಕೆ ಶಕ್ತಿಯುತ ನೋಟ ನೀಡುತ್ತದೆ. ಮೊದಲ ನೋಟದಲ್ಲೇ ಪ್ರೇಕ್ಷಕರ ಗಮನ ಸೆಳೆದಿರುವ ಈ ಟ್ರೈಲರ್, ಜನವರಿ 23ರಂದು ತೆರೆಗೆ ಬರಲಿರುವ ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಲ್ಯಾಂಡ್‌ಲಾರ್ಡ್’ ಟ್ರೈಲರ್: ದುನಿಯಾ ವಿಜಯ್ ಆಕ್ಷನ್ ಪ್ಯಾಕ್ಡ್ ಗಿಫ್ಟ್
ಲ್ಯಾಂಡ್‌ಲಾರ್ಡ್’ ಟ್ರೈಲರ್: ದುನಿಯಾ ವಿಜಯ್ ಆಕ್ಷನ್ ಪ್ಯಾಕ್ಡ್ ಗಿಫ್ಟ್

ಚಿತ್ರದಲ್ಲಿ ದುನಿಯಾ ವಿಜಯ್, ರಾಚಯ್ಯ ಎಂಬ ಹಳ್ಳಿ ಕೂಲಿಕಾರ್ಮಿಕನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ತನ್ನವರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಾಗುವ ಈ ಪಾತ್ರ, ಹಳ್ಳಿಯ ಜನರ ಹೋರಾಟ ಮತ್ತು ಬದುಕಿನ ಪ್ರತಿಬಿಂಬವಾಗಿದೆ. ರಾಚಯ್ಯನ ಪತ್ನಿ ನಿಂಗವ್ವ ಪಾತ್ರದಲ್ಲಿ ರಚಿತಾ ರಾಮ್ ಮಿಂಚಿದ್ದರೆ, ತಾಯಿ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಖಡಕ್ ನಟನೆ ತೋರಿಸಿದ್ದಾರೆ. ವಿಜಯ್ ಪುತ್ರಿ ರಿತನ್ಯಾ, ರಾಚಯ್ಯನ ಮಗಳು ಭಾಗ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೊಲೀಸ್ ಕಾನ್ಸ್‌ಸ್ಟೇಬಲ್ ಪಾತ್ರದ ಮೂಲಕ ಕಥೆಗೆ ತಿರುವು ನೀಡುವಂತೆ ಕಾಣುತ್ತಿದೆ.  

ಇಷ್ಟು ದಿನ ಹೀರೋ ಆಗಿ ಕಾಣಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ, ಈ ಬಾರಿ ಕ್ರೂರ ಜಮೀನ್ದಾರನಾಗಿ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಟ ವಿಜಯ್ ಮತ್ತು ರಾಜ್ ನಡುವಿನ ಜಿದ್ದಾಜಿದ್ದಿನ ಹೋರಾಟ, ಪ್ರೇಕ್ಷಕರಿಗೆ ಕಿಕ್ ಕೊಡಲಿದೆ. ಅವರಿಬ್ಬರ ಮುಖಾಮುಖಿ, ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ. ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಮತ್ತು ಕೆ.ವಿ ಪ್ರಕಾಶ್ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಬಿಜಿಎಂ ಹೈಲೆಟ್ ಆಗಿದೆ. ಸ್ವಾಮಿ ಜೆ ಗೌಡ ಛಾಯಾಗ್ರಹಣ, ಹಳ್ಳಿಯ ನೈಜ ಸೊಗಡನ್ನು ತೆರೆಗೆ ತರಲು ಸಹಾಯ ಮಾಡಿದೆ. ಮಾಸ್ತಿ ಬರೆದ ಡೈಲಾಗ್ಸ್ ಒಂದೊಂದಾಗಿ ಸಿಡಿಯುತ್ತಿದ್ದು, “ನಮ್ಮ ಹಕ್ಕುಗಳನ್ನ ಪಡ್ಕೊಳ್ಳಕ್ಕ ಭಿಕ್ಷೆ ಬೇಡ್ಕೂದ್ದು ಎದ್ಗಳಿಗೆ ಒದ್ದು ಕಿತ್ಕೊಬೇಕು” ಎಂಬ ವಿಜಯ್ ಡೈಲಾಗ್, “20 ವರ್ಷಗಳ ಬೆಂಕಿ ಆರಬೇಕು ಅಂದ್ರೆ, ರಕ್ತದ ಕೋಡಿ ಹರಿಯಲೇಬೇಕು” ಎಂಬ ಉಮಾಶ್ರೀ ಡೈಲಾಗ್—ಎಲ್ಲವೂ ಮನಸ್ಸಿಗೆ ಸ್ಪಂದಿಸುತ್ತವೆ.

80-90ರ ದಶಕದಲ್ಲಿ ಕೋಲಾರ ಸುತ್ತಮುತ್ತಲ ಭಾಗದಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ‘ಲ್ಯಾಂಡ್‌ಲಾರ್ಡ್’ ಚಿತ್ರ ಕಟ್ಟಿಕೊಡಲಾಗಿದೆ. ಅಲ್ಲಿನ ಭಾಷೆಯ ಸೊಗಡನ್ನು ಬಳಸಿಕೊಂಡು, ಕಥೆಗೆ ನೈಜತೆಯ ಸ್ಪರ್ಶ ನೀಡಲಾಗಿದೆ. ನಿರ್ದೇಶಕ ಜಡೇಶ್, ಈ ಹಿಂದೆ ‘ಜಂಟಲ್‌ಮನ್’ ಮತ್ತು ‘ಗುರು-ಶಿಷ್ಯರು’ ಚಿತ್ರಗಳನ್ನು ಕಟ್ಟಿಕೊಟ್ಟಿದ್ದರು. ಎರಡೂ ಸಿನಿಮಾಗಳು ಯಶಸ್ವಿಯಾಗಿದ್ದರಿಂದ, ‘ಲ್ಯಾಂಡ್‌ಲಾರ್ಡ್’ ಮೇಲಿನ ನಿರೀಕ್ಷೆ ಸಹಜವಾಗಿಯೇ ಹೆಚ್ಚಿದೆ.  

ದುನಿಯಾ ವಿಜಯ್ ಆಕ್ಷನ್ ಮಾಸ್ ಪ್ರಿಯರಿಗೆ ‘ಲ್ಯಾಂಡ್‌ಲಾರ್ಡ್’ ಹಬ್ಬವೇ ಸರಿ. ಉಮಾಶ್ರೀ, ರಚಿತಾ ರಾಮ್, ರಿತನ್ಯಾ ಎಲ್ಲರೂ ಶಕ್ತಿಯುತ ಅಭಿನಯಗಳನ್ನು ನೀಡಿದ್ದಾರೆ. ರಾಜ್ ಬಿ ಶೆಟ್ಟಿ ಖಳನಾಯಕನಾಗಿ ನೀಡಿರುವ ವಿಲಕ್ಷಣ ನಟನೆ, ಚಿತ್ರದ ಬಿಗ್ ಸರ್‌ಪ್ರೈಸ್. ಟ್ರೈಲರ್ ನೋಡಿದರೆ, 40 ವರ್ಷಗಳ ಹಿಂದಿನ ಕಾಲಘಟ್ಟವನ್ನು ತೆರೆಗೆ ತರಲು ತಂಡ ಎಷ್ಟು ಶ್ರಮಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ಸಿನಿಮಾ ಬಗ್ಗೆ ಕುತೂಹಲ ತಾರಕಕ್ಕೇ ಏರಿದ್ದು, ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ. 

Latest News