ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಪ್ರೇಮ್ ಎಂದರೆ ಒಂದು ಬ್ರ್ಯಾಂಡ್. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಏನಾದರೂ ಆಗಲಿ, ಅವರ ಸಿನಿಮಾದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗುತ್ತವೆ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಪ್ರೇಮ್ ಅವರಿಗೆ ಜನರ ನಾಡಿಮಿಡಿತ ಚೆನ್ನಾಗಿ ಗೊತ್ತು. ಆದರೆ, ಧ್ರುವ ಸರ್ಜಾ ಅಭಿನಯದ 'KD' ಸಿನಿಮಾದ ಹೊಸ ಹಾಡೊಂದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. 'ಸರ್ಸೆ ನಿನ್ನ ಸೆರಗ ಸರ್ಸೆ' ಎಂಬ ಈ ಹಾಡಿನ ಸಾಹಿತ್ಯ ಕೇಳಿ ಸ್ವತಃ ಪ್ರೇಮ್ ಅವರ ಅಭಿಮಾನಿಗಳೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
'KD' ಸಿನಿಮಾ ಏಪ್ರಿಲ್ 30ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಅರ್ಜುನ್ ಜನ್ಯಾ ಸಂಗೀತ ನೀಡಿರುವ ಈ ಸಿನಿಮಾದ ಮೊದಲ ಮೂರು ಹಾಡುಗಳಾದ 'ಶಿವ ಶಿವ', 'ಸೆಟ್ ಆಗಲ್ಲ' ಮತ್ತು 'ಅಣ್ತಮ್ಮ ಜೋಡೆತ್ತು' ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು. ಜನರು ಪ್ರೇಮ್ ಅವರ ಮ್ಯೂಸಿಕ್ ಸೆನ್ಸ್‌ಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ, ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ನಟಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿರುವ ಸ್ಪೆಷಲ್ ಹಾಡು ಮಾತ್ರ ಎಲ್ಲವನ್ನೂ ಹಾಳುಮಾಡಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಹಾಡಿಗೆ ಸಾಹಿತ್ಯ ಬರೆದವರು ಸ್ವತಃ ಪ್ರೇಮ್. ಆದರೆ, ಇದರಲ್ಲಿ ಬಳಸಿರುವ ಸಾಲುಗಳು ಅಶ್ಲೀಲತೆಯಿಂದ ಕೂಡಿವೆ ಮತ್ತು ಡಬಲ್ ಮೀನಿಂಗ್ ನೀಡುತ್ತವೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ.. ತುತಿಕ್ದಂಗ್ ಒಳಗೆ ಇಳಿಸಿ" ಎನ್ನುವಂತಹ ಸಾಲುಗಳು ಅತ್ಯಂತ ಕೆಟ್ಟದಾಗಿವೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. "ಜೋಗಿ ಸಿನಿಮಾದಲ್ಲಿ 'ಬೇಡುವೆನು ವರವನ್ನು' ಎನ್ನುವ ಅದ್ಭುತ ಹಾಡು ಬರೆದಿದ್ದ ಪ್ರೇಮ್ ಅವರೇನಾ ಇಂತಹ ಸಾಹಿತ್ಯ ಬರೆದಿರುವುದು?" ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ರವಿಚಂದ್ರನ್, ಶಿಲ್ಪಾ ಶೆಟ್ಟಿ ಮತ್ತು ರಮೇಶ್ ಅರವಿಂದ್ ಅಂತಹ ದೊಡ್ಡ ನಟರು ಈ ಚಿತ್ರದಲ್ಲಿದ್ದಾರೆ. ಹೀಗಿರುವಾಗ, ಕೇವಲ ಪ್ರಚಾರಕ್ಕಾಗಿ ಅಥವಾ ಮಾಸ್ ಪ್ರೇಕ್ಷಕರನ್ನು ಸೆಳೆಯಲು ಇಂತಹ ಕೀಳುಮಟ್ಟದ ಸಾಹಿತ್ಯ ಮತ್ತು ನೃತ್ಯದ ಮೊರೆ ಹೋಗುವುದು ಸರಿಯಲ್ಲ ಎಂಬುದು ಸಿನಿಮಾ ಪ್ರೇಮಿಗಳ ಅಭಿಪ್ರಾಯ. ಹಾಡಿನಲ್ಲಿ ನೋರಾ ಫತೇಹಿ ಅವರ ನೃತ್ಯದ ಸ್ಟೆಪ್ಸ್‌ಗಳು ಕೂಡ ಅತಿಯಾದವು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.
Nora Fatehi 🔥 Sanjay Dutt
— aanandaaudio (@aanandaaudio) March 15, 2026
Ultimate dance combo!
Chandrabose lyrics ✍️ @boselyricist
Mangli voice 🎤 @iamMangli
Volume up… feel the heat! 🔊🔥
Watch Now on #KDTheDevil @aanandaaudiohttps://t.co/E9fFzYbyLU - KANNADAhttps://t.co/3Qou52zPpt - HINDIhttps://t.co/ox32kDGcIb -… pic.twitter.com/RI6FOu38lX
ನಾಲ್ಕು ವರ್ಷಗಳಿಂದ ಈ ಸಿನಿಮಾದ ಕೆಲಸಗಳು ನಡೆಯುತ್ತಿವೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ 'KD'ಗೆ ಈ ಹಾಡು ಒಂದು ಕಪ್ಪುಚುಕ್ಕೆಯಾಗುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾದಲ್ಲಿ ಕಥೆಗಿಂತ ಇಂತಹ ವಿವಾದಾತ್ಮಕ ಹಾಡುಗಳೇ ಹೆಚ್ಚು ಸದ್ದು ಮಾಡುತ್ತಿರುವುದು ಚಿತ್ರತಂಡಕ್ಕೆ ಹಿನ್ನಡೆಯಾಗಬಹುದು. ಕನ್ನಡಿಗರ ಸಂಸ್ಕೃತಿಗೆ ದಕ್ಕೆ ತರುವಂತಹ ಸಾಹಿತ್ಯವನ್ನು ಪ್ರೇಮ್ ಅವರು ತಿದ್ದಿಕೊಳ್ಳಬೇಕು ಎಂದು ಹಿರಿಯ ಸಿನಿಪ್ರೇಮಿಗಳು ಸಲಹೆ ನೀಡುತ್ತಿದ್ದಾರೆ.