ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ವಿವಾದ ಶುರುವಾಗಿದೆ. ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ ಆರೋಪಗಳ ವಿರುದ್ಧ ಇದೀಗ ನಿರ್ದೇಶಕ ಪ್ರೇಮ್ ಅಧಿಕೃತವಾಗಿ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕನಕಪುರ ಶ್ರೀನಿವಾಸ್, ಚಿತ್ರರಂಗದಲ್ಲಿರುವ ಬಹುತೇಕರು ತನ್ನನ್ನು ಮೋಸ ಮಾಡಿದ್ದಾರೆ ಎಂದು ಹೇಳಿದ್ದರು. ತಮಗೆ ಹೊರತುಪಡಿಸಿ ಉಳಿದವರೆಲ್ಲರೂ ತಪ್ಪಿತಸ್ಥರು ಎಂಬ ರೀತಿಯಲ್ಲಿ ಮಾತನಾಡಿದ ಅವರು, ನಿರ್ದೇಶಕ ಪ್ರೇಮ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸೇರಿದಂತೆ ಕೆಲವರ ಹೆಸರನ್ನೂ ಉಲ್ಲೇಖಿಸಿ ಆರೋಪ ಮಾಡಿದ್ದರು. ಈ ಹೇಳಿಕೆಗಳು ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಹಿನ್ನೆಲೆ, ನಿರ್ದೇಶಕ ಪ್ರೇಮ್ ಖುದ್ದಾಗಿ ಫಿಲಂ ಚೇಂಬರ್‌ಗೆ ತೆರಳಿ, ನೂತನ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಪ್ರೇಮ್, “ನಾನು ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ ನನ್ನ ವೃತ್ತಿಜೀವನದಲ್ಲಿ ಯಾವುದೇ ಕಳಂಕ ಇಲ್ಲದೆ ಕೆಲಸ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ. 2004ರಲ್ಲಿ ಕನಕಪುರ ಶ್ರೀನಿವಾಸ್ ಅವರು ಸಿನಿಮಾ ನಿರ್ದೇಶನಕ್ಕಾಗಿ ತಮ್ಮನ್ನು ಸಂಪರ್ಕಿಸಿ 9 ಲಕ್ಷ ರೂಪಾಯಿ ಮುಂಗಡ ನೀಡಿದ್ದರು ಎಂದು ಪ್ರೇಮ್ ಹೇಳಿದ್ದಾರೆ. ಅದಾದ ನಂತರ ಸಿನಿಮಾ ಮಾಡಲು ಆಫೀಸ್ ತೆರೆಯಲಾಗಿದ್ದು, ತಂಡ ಕಟ್ಟಿಕೊಂಡು ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲಾಗಿತ್ತು. ಆದರೆ ಬಳಿಕ ನಿರ್ಮಾಪಕರಿಂದ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಂದು ವರ್ಷ ಕಾಲ ತಮ್ಮ ಹಾಗೂ ತಂಡದ ಸಮಯ ವ್ಯರ್ಥವಾಗಿದ್ದು, ಆಫೀಸ್ ಮತ್ತು ತಂಡದ ಎಲ್ಲಾ ಖರ್ಚುಗಳನ್ನು ತಾವೇ ಭರಿಸಿದ್ದಾರೆ. ಇದರಿಂದ 15 ರಿಂದ 20 ಲಕ್ಷ ರೂಪಾಯಿ ವೈಯಕ್ತಿಕ ನಷ್ಟವಾಗಿದೆ ಎಂದು ಪ್ರೇಮ್ ತಿಳಿಸಿದ್ದಾರೆ. ಜೊತೆಗೆ, ಈ ಕಾರಣದಿಂದ ಹಲವು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಕೂಡ ಹೇಳಿಕೊಂಡಿದ್ದಾರೆ. ಪ್ರೇಮ್ ಹಣ ಪಡೆದು ಸಿನಿಮಾ ಮಾಡಿಲ್ಲ ಎಂಬ ಆರೋಪಗಳನ್ನು ಕನಕಪುರ ಶ್ರೀನಿವಾಸ್ ಸಾರ್ವಜನಿಕವಾಗಿ ಮಾಡಿದ್ದರು. ಇದೇ ಹೇಳಿಕೆಗಳ ವಿರುದ್ಧ ಈಗ ಪ್ರೇಮ್ ಕಾನೂನು ಕ್ರಮದ ದಾರಿ ಹಿಡಿದಿದ್ದಾರೆ,
ಈ ವಿಚಾರದಲ್ಲಿ ಫಿಲಂ ಚೇಂಬರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.