ಖ್ಯಾತ ನಟಿ ನೋರಾ ಫತೇಹಿ ಮತ್ತು ಬಾಲಿವುಡ್‌ನ ಖಳನಾಯಕ ಸಂಜಯ್ ದತ್ ಅಭಿನಯದ ಹೊಸ ಹಾಡು ‘ಸರ್ಕೆ ಚುನರ್ ತೇರಿ ಸರ್ಕೆ’ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮುಂಬರುವ ಚಿತ್ರ 'ಕೆಡಿ: ದ ಡೆವಿಲ್' ಚಿತ್ರದ ಈ ಹಾಡು ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿವೆ. ನೋರಾ ಫತೇಹಿ ಅವರ ನೃತ್ಯಕ್ಕೆ ಹೆಸರುವಾಸಿಯಾಗಿದ್ದರೂ, ಈ ಬಾರಿ ಜನರು ಅವರ ನೃತ್ಯಕ್ಕಿಂತ ಹೆಚ್ಚಾಗಿ ಹಾಡಿನ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಹಾಡಿನಲ್ಲಿ ಬಳಸಿರುವ ಪದಗಳು ಅತ್ಯಂತ ಅಸಭ್ಯವಾಗಿವೆ ಮತ್ತು ಡಬಲ್ ಮೀನಿಂಗ್ ನಿಂದ ಕೂಡಿದೆ ಎಂಬುದು ನೆಟ್ಟಿಗರ ಪ್ರಮುಖ ಆರೋಪ ಮಾಡ್ತಿದ್ದಾರೆ. ಸುಮಾರು 3 ನಿಮಿಷ 54 ಸೆಕೆಂಡುಗಳ ಈ ಹಾಡಿನಲ್ಲಿ ನೋರಾ ಫತೇಹಿ ಮತ್ತು ಸಂಜಯ್ ದತ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ತಮ್ಮ ಹಳೆಯ ಸ್ಟೈಲ್‌ನಲ್ಲಿ ಅಬ್ಬರಿಸಿದ್ದರೆ, ನೋರಾ ತಮ್ಮ ಎನರ್ಜಿಟಿಕ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಹಾಡಿನ ಆರಂಭದ ಸಾಲುಗಳೇ ಬಹಳ ಆಕ್ಷೇಪಾರ್ಹವಾಗಿವೆ ಎಂದು ಜನರು ಹೇಳುತ್ತಿದ್ದಾರೆ.
ಹಾಡನ್ನು ಡ್ಯಾನ್ಸ್ ಬಾರ್ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಪ್ರೋಮೋ ಬಿಡುಗಡೆಯಾದಾಗಲೇ ನೋರಾ ಅವರ ಉಡುಪಿನ ಬಗ್ಗೆ ಚರ್ಚೆ ನಡೆದಿತ್ತು. ಹಾಡಿನಲ್ಲಿ ನೋರಾ ಅವರ ‘ಹುಕ್ ಸ್ಟೆಪ್’ ಒಂದರಲ್ಲಿ ಅವರು ತಮ್ಮ ಸೆರಗನ್ನು ಪದೇ ಪದೇ ಕೆಳಗೆ ಬೀಳಿಸಿ ಮತ್ತೆ ಎತ್ತುವಂತೆ ತೋರಿಸಲಾಗಿದೆ. ಈ ದೃಶ್ಯವು ವೀಕ್ಷಕರಿಗೆ ಅತಿಯಾದ ಅಶ್ಲೀಲತೆಯಂತೆ ಭಾಸವಾಗಿದೆ. ಈ ಹಿಂದೆ ನೋರಾ ಅನೇಕ ಐಟಂ ಸಾಂಗ್‌ಗಳಲ್ಲಿ ಮಿಂಚಿದ್ದರೂ, ಈ ಹಾಡಿನಷ್ಟು ಟೀಕೆಗೆ ಒಳಗಾಗಿರಲಿಲ್ಲ.
ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಾಡಿನ ವಿರುದ್ಧ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ಒಬ್ಬರು, "ಬಾಲಿವುಡ್ ಈಗ ಭೋಜಪುರಿ ಹಾಡುಗಳಿಗಿಂತಲೂ ಕೆಟ್ಟದಾದ ಸಾಹಿತ್ಯವನ್ನು ಬಳಸುತ್ತಿದೆ" ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು, "ಸಂಜಯ್ ದತ್ ಅವರಂತಹ ಹಿರಿಯ ನಟರು ಇಂತಹ ಅಶ್ಲೀಲ ಸಾಹಿತ್ಯವಿರುವ ಹಾಡಿನಲ್ಲಿ ನಟಿಸುವ ಅವಶ್ಯಕತೆ ಏನಿತ್ತು?" ಎಂದು ಪ್ರಶ್ನಿಸಿದ್ದಾರೆ. ಕೆಲವು ಬಳಕೆದಾರರು ಈ ಹಾಡನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಅರ್ಜುನ್ ಜನ್ಯ ಅವರು ಈ ಹಾಡಿಗೆ ಸಂಗೀತ ನೀಡಿದ್ದು, ರಕೀಬ್ ಆಲಂ ಸಾಹಿತ್ಯ ಬರೆದಿದ್ದಾರೆ. ಕೇವಲ ಮನರಂಜನೆಯ ಹೆಸರಿನಲ್ಲಿ ಇಂತಹ ಪದಗಳನ್ನು ಬಳಸುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಜನರ ಅಭಿಪ್ರಾಯ. ನೋರಾ ಅವರ ಡ್ಯಾನ್ಸ್ ಇಷ್ಟಪಡುವ ಅವರ ಅಭಿಮಾನಿಗಳು ಕೂಡ ಈ ಬಾರಿ ಸಾಹಿತ್ಯದ ವಿಚಾರದಲ್ಲಿ ಮೌನವಾಗಿದ್ದಾರೆ ಅಥವಾ ಅಸಮಾಧಾನ ಹೊಂದಿದ್ದಾರೆ. ಒಟ್ಟಾರೆಯಾಗಿ, 'ಕೆಡಿ: ದ ಡೆವಿಲ್' ಚಿತ್ರದ ಈ ಹಾಡು ಪ್ರಚಾರಕ್ಕಿಂತ ಹೆಚ್ಚಾಗಿ ವಿವಾದದ ಮೂಲಕವೇ ಸುದ್ದಿಯಾಗುತ್ತಿದೆ. ಸಿನಿಮಾದ ಮೇಲಿರುವ ನಿರೀಕ್ಷೆಯ ನಡುವೆ ಈ ವಿವಾದವು ಚಿತ್ರತಂಡಕ್ಕೆ ಹೇಗೆ ಪೆಟ್ಟು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.