ಬಾಲಿವುಡ್‌ನ ಐಕಾನ್ ಧರ್ಮೇಂದ್ರ ಅವರು ಪ್ರೀತಿಯಿಂದ "ಹೀ-ಮ್ಯಾನ್" ಮತ್ತು "ಧರಮ್ ಪಾಜಿ" ಎಂದು ಕರೆಯಲ್ಪಡುವವರು, ಅವರ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಇದೀಗ ನ್ಯೂಸ್ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಅವರ ನಿಧನವು ಭಾರತೀಯ ಸಿನೆಮಾದ ಒಂದು ದಂತಕಥೆಯ ಯುಗದ ಅಂತ್ಯವನ್ನು ಸೂಚಿಸುತ್ತದೆ. ಆರು ದಶಕಗಳಿಗಿಂತ ಹೆಚ್ಚು ಕಾಲದ ಅವರ ಸಿನೆಮಾ ಜೀವನದಲ್ಲಿ ಅನೇಕ ಮರೆಯಲಾಗದ ಪಾತ್ರಗಳನ್ನು ಅವರು ನಟಿಸಿ ನಿರ್ವಹಿಸಿದ್ದರು.
ನಟ ಧರ್ಮೇಂದ್ರ ಸಿಂಗ್ ದಿಯೋಲ್ ಎಂಬ ಹೆಸರಿನಲ್ಲಿ ಜನಿಸಿದ ಇವರು ಈಗ ಮುಂಬೈ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಅವರ ಪತ್ನಿ ಹೆಮಾ ಮಾಲಿನಿ ಪವನ್ ಹನ್ಸ್ ಸ್ಮಶಾನಕ್ಕೆ ಅಂತಿಮ ವಿದಾಯ ಹೇಳಲು ಆಗಮಿಸಿದ್ದು, ಪುತ್ರಿ ಈಶಾ ದಿಯೋಲ್ ಕೂಡ ಶ್ಮಶಾನಕ್ಕೆ ಆಗಮಿಸಿದ್ದಾರೆ. ಕುಟುಂಬವು ಅಂತಿಮ ವಿಧಿ ವಿಧಾನಗಳಿಗೆ ಸಿದ್ಧತೆ ನಡೆಸುತ್ತಿದ್ದು, ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಸಹೋದ್ಯೋಗಿಗಳು ಅಂತಿಮ ಗೌರವ ಸಲ್ಲಿಸಲು ಸೇರಿದ್ದಾರೆ.
ಇಂದು ಬೆಳಿಗ್ಗೆ ಧರ್ಮೇಂದ್ರ ಅವರ ಮುಂಬೈ ನಿವಾಸಕ್ಕೆ ಆಂಬ್ಯುಲೆನ್ಸ್ ಆಗಮಿಸಿದಾಗ ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ಆತಂಕ ಹೆಚ್ಚಿತ್ತು. ಮನೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಕೆಲವೇ ದಿನಗಳ ಹಿಂದೆ ಅವರು ಆರೋಗ್ಯ ಸಮಸ್ಯೆಯಿಂದ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಅವರ ಆರೋಗ್ಯ ಹದಗೆಟ್ಟ ಪರಿಣಾಮವಾಗಿ ಇಂದು ನಿಧನರಾಗಿದ್ದಾರೆ. ಕುಟುಂಬದಿಂದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.
ಈ ದುಃಖದ ಸುದ್ದಿ ಕೇಳಿ ಅನೇಕ ಬಾಲಿವುಡ್ ನಟರು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಮುಂಬೈ ನಿವಾಸಕ್ಕೆ ಆಗಮಿಸಿ ಗೌರವ ಸಲ್ಲಿಸಿದ್ದಾರೆ. ಮನೆಯಲ್ಲಿ ಈ ದುಃಖದ ವಾತಾವರಣ ಕಂಡು ಬಂದ ಹಿನ್ನೆಲೆಯಲ್ಲಿ ಗಂಭೀರ ವಾತಾವರಣ ನಿರ್ಮಾಣವಾಗಿದ್ದು, ಅಭಿಮಾನಿಗಳು ಮತ್ತು ಶುಭಾಶಯಕರು ಸಹ ಅಂತಿಮ ವಿದಾಯ ಹೇಳಲು ಆಗಮಿಸುತ್ತಿದ್ದಾರೆ.
ಇವರ ಸಿನೆಮಾ ಜೀವನ ನೋಡುವುದಾದರೆ 1950ರ ದಶಕದ ಕೊನೆಯಲ್ಲಿ ಆರಂಭವಾದ ಧರ್ಮೇಂದ್ರ ಅವರ ಸಿನೆಮಾ ಜೀವನವು "ಶೋಲೇ", "ಫೂಲ್ ಔರ್ ಪಥರ್", "ಚುಪ್ಕೆ ಚುಪ್ಕೆ", "ಸತ್ಯಕಾಮ್", "ಸೀತಾ ಔರ್ ಗೀತಾ", "ಯಾದೋನ್ ಕಿ ಬಾರಾತ್" ಮುಂತಾದ ಅನೇಕ ಐಕಾನಿಕ್ ಚಿತ್ರಗಳ ಮೂಲಕ ಭಾರತೀಯ ಸಿನೆಮಾದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಆ್ಯಕ್ಷನ್, ರೋಮ್ಯಾನ್ಸ್, ಕಾಮಿಡಿ ಮತ್ತು ಭಾವನಾತ್ಮಕ ನಾಟಕಗಳಲ್ಲಿ ಅವರ ಅಭಿನಯವನ್ನು ಪ್ರೇಕ್ಷಕರು ಸಮಾನವಾಗಿ ಮೆಚ್ಚಿಕೊಂಡಿದ್ದರು.
ಇವರ ನಿಧನವು ಭಾರತೀಯ ಸಿನೆಮಾ ಕ್ಷೇತ್ರದಲ್ಲಿ ತುಂಬಲಾರದ ನಷ್ಟ ಆಗಿದೆ. ದೇಶದಾದ್ಯಂತ ಶ್ರದ್ಧಾಂಜಲಿಗಳು ಹರಿದು ಬರುತ್ತಿದ್ದು, ಭಾರತವು ತನ್ನ ಮಹಾನ್ ಸಿನೆಮಾ ದಂತಕಥೆಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ ಎನ್ನಬಹುದು. ಧರ್ಮೇಂದ್ರ ಅವರ ಪತ್ನಿ ಹೆಮಾ ಮಾಲಿನಿ, ಮೊದಲ ಪತ್ನಿ ಪ್ರಕಾಶ್ ಕೌರ್, ಪುತ್ರರು ಸನ್ನಿ ದಿಯೋಲ್ ಮತ್ತು ಬಾಬಿ ದಿಯೋಲ್, ಪುತ್ರಿಯರಾದ ಈಶಾ ದಿಯೋಲ್ ಮತ್ತು ಅಹನಾ ದಿಯೋಲ್ ಇವರನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಅವರ ಅಪಾರ ಕೃತಿಗಳು ಮುಂದಿನ ಪೀಳಿಗೆಗಳಿಗೆ ಪ್ರೇರಣೆ ನೀಡುತ್ತವೆ ಮತ್ತು ಪ್ರೇಕ್ಷಕರನ್ನು ಇನ್ನೂ ಹಲವು ವರ್ಷಗಳ ಕಾಲ ಆಕರ್ಷಿಸುತ್ತವೆ ಎನ್ನಬಹುದು.