Dec 16, 2025 Languages : ಕನ್ನಡ | English

ಬಿಗ್‘ಬಿಗೂ ಮುನ್ನ ದೊಡ್ಡ ಸ್ಟಾರ್ ಧರ್ಮೇಂದ್ರ!! ವಿಷ್ಣು ಸ್ಟೈಲ್ ಕಾಪಿ ಮಾಡ್ತಿದ್ರು ಎಂದ ಸುಂದರ್ ರಾಜ್

ಭಾರತೀಯ ಚಲನ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ಇತ್ತೀಚೆಗೆ ಆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಡಿಸೆಂಬರ್ 8ರಂದು ಅವರಿಗೆ 90 ವರ್ಷ ತುಂಬುದರಲ್ಲಿತ್ತು. ಆದರೆ ವಿಧಿ ಅವರನ್ನು ಅದಕ್ಕಿಂತ ಮುಚಿತವಾಗಿಯೇ ತನ್ನತ್ತ ಕರೆಸಿಕೊಂಡಿದ್ದು ಬೇಸರದ ಸಂಗತಿ. ಅವರ ಅಗಲಿಕೆಯಿಂದ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Dharmendra
Dharmendra

ಇವರ ಚಿತ್ರರಂಗ ಪ್ರವೇಶ ನಿಜಕ್ಕೂ ಅದ್ಭುತ. 1960ರಲ್ಲಿ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಧರ್ಮೇಂದ್ರ ಅವರು ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ‘ಅನ್‌ಪಧ್’, ‘ಬಂದಿನಿ’, ‘ಅನುಪಮಾ’, ‘ಆಯಾ ಸಾವನ್ ಝೂಮ್ ಕೆ’ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಸಕತ್ ನಟನಾಶೈಲಿಯ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದವರು. ನಟ ಅಮಿತಾಬ್ ಬಚ್ಚನ್ ಅವರು ಚಿತ್ರರಂಗಕ್ಕೆ ಬರುವ ಮುನ್ನವೇ ನಟ ಧರ್ಮೇಂದ್ರ ಅವರು ಸೂಪರ್ ಸ್ಟಾರ್ ಆಗಿದ್ದರು. ‘ಧರಮ್ ವೀರ್’, ‘ಚುಪ್ಕೆ ಚುಪ್ಕೆ’, ‘ಮೇರಾ ಗಾಂವ್ ಮೇರಾ ದೇಶ್’, ‘ಡ್ರೀಮ್ ಗರ್ಲ್’ ಮುಂತಾದ ಚಿತ್ರಗಳು ಅವರಿಗೆ ಅಪಾರ ಖ್ಯಾತಿ ತಂದವು.

ಧರ್ಮೇಂದ್ರ ಭಾರತೀಯ ಚಿತ್ರರಂಗದ ಅನೇಕ ನಟ ನಟಿಯರಿಗೆ ನೆಚ್ಚಿನ ನಟರಾಗಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ಅವರು ಕೂಡ ಧರ್ಮೇಂದ್ರ ಅವರ ಅಭಿಮಾನಿಯಾಗಿದ್ದರು. ನ್ಯಾಷನಲ್ ಕಾಲೇಜಿನಲ್ಲಿ ಓದಿದ ವಿಷ್ಣು ಹಾಗೂ ಸುಂದರ್ ರಾಜ್, ಧರ್ಮೇಂದ್ರ ಮೇಲಿನ ಅಭಿಮಾನವನ್ನು ಹತ್ತಿರದಿಂದ ಕಂಡಂತಹ ನಟರು. ವಿಷ್ಣು ಅವರ ಡ್ಯಾನ್ಸ್ ಹಾಗೂ ಸ್ಟೈಲ್‌ನ್ನು, ಶಮ್ಮಿ ಕಪೂರ್ ಕಾಪಿ ಮಾಡಿದ್ದರು, ಧರ್ಮೇಂದ್ರ ಅವರ ವಾಕಿಂಗ್ ಸ್ಟೈಲ್‌ನ್ನು ವಿಷ್ಣುವರ್ಧನ್ ಕಾಪಿ ಮಾಡುತ್ತಿದ್ದರು ಎಂದು ಸುಂದರ್ ರಾಜ್ ನೆನಪಿಸಿಕೊಂಡಿದ್ದಾರೆ.

ಸುಂದರ್ ರಾಜ್ ಧರ್ಮೇಂದ್ರ ಅವರ ಸಿನಿಮಾಗಳನ್ನು ಚಿಕ್ಕಂದಿನಿಂದಲೇ ನೋಡುತ್ತಾ ಬೆಳೆದವರು. ಅವರು ಧರ್ಮೇಂದ್ರ ಅವರನ್ನು “ಜಂಟಲ್‌ಮನ್” ಹಾಗೂ “ಶೋಮ್ಯಾನ್” ಎಂದು ವರ್ಣಿಸಿದ್ದಾರೆ. ‘ಶೋಲೆ’ ಚಿತ್ರವನ್ನು ಅವರು ಕಲ್ಟ್ ಸಿನಿಮಾ ಎಂದು ಕರೆದಿದ್ದಾರೆ. ವಯಸ್ಸಾದರೂ ತಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಧರ್ಮೇಂದ್ರ ಅವರ ಜೀವನಶೈಲಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿತ್ತು ಎಂದು ನಟ ಸುಂದರ್ ರಾಜ್ ಅವರು ಹೇಳಿದ್ದಾರೆ ಎನ್ನಲಾಗಿದೆ. 

ನಟ ವಿಷ್ಣುವರ್ಧನ್ ಹಾಗೂ ಧರ್ಮೇಂದ್ರ ಅವರ ಫೋಟೊ ವೈರಲ್ ಆಗಿರುವುದಕ್ಕೆ ಸುಂದರ್ ರಾಜ್ ಪ್ರತಿಕ್ರಿಯಿಸಿ, ಅದು ಬಹುಶಃ ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ತೆಗೆದಿರಬಹುದು ಎಂದಿದ್ದಾರೆ. ಬಾಂಬೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಧರ್ಮೇಂದ್ರ ಅವರನ್ನು ಭೇಟಿಯಾದ ನೆನಪನ್ನು ಹಂಚಿಕೊಂಡ ಅವರು, "ಅಭಿಮಾನ ಎನ್ನುವುದು ಯಾಕೆ ಬರುತ್ತದೆ ಎಂದು ಹೇಳುವುದು ಕಷ್ಟ. ಯಾವತ್ತೂ ಧರ್ಮೇಂದ್ರ ಜಿಮ್‌ಗೆ ಹೋದವರಲ್ಲ. ಆದರೆ ಕಟ್ಟುಮಸ್ತು ದೇಹ. ಮೂಲತಃ ಪಂಜಾಬಿ, ಎಲ್ಲೆ ಇದ್ದರೂ ಎದ್ದು ನಿಂತು ಗೌರವ ಕೊಡಬೇಕು ಎನಿಸುವಂತಹ ಒಳ್ಳೆಯ ಪರ್ಸನಾಲಿಟಿ ಅವರದ್ದು, ಅಮಿತಾಬ್ ಬಚ್ಚನ್‌ಗಿಂತ ಸೀನಿಯರ್ ನಟ ಧರ್ಮೇಂದ್ರ. 60ರ ದಶಕದಲ್ಲೇ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ನಿರ್ಮಿಸಿಕೊಂಡಿದ್ದರು” ಎಂದು ಅವರ ಅಗಲಿಕೆ ಬಳಿಕ ಈ ವಿಚಾರವನ್ನು ಸುಂದರ್ ರಾಜ್ ಮೆಲುಕು ಹಾಕಿದ್ದಾರೆ.