ಆರ್‌ಸಿಬಿಗೆ ಸತತ ಎರಡನೇ IPL ಟ್ರೋಫಿ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಕಿಂಗ್ ಕೊಹ್ಲಿಗೆ ಇಂಜುರಿ!!

ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ. ಭಾರತ ಕ್ರಿಕೆಟ್ ಲೋಕದ ರನ್ ಮಷಿನ್, ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಅವರು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ (ODI) ಸರಣಿಯಿಂದ ಹೊರಬಿದ್ದಿದ್ದಾರೆ. ಹ್ಯಾಮ್‌ಸ್ಟ್ರಿಂಗ್ ಗಾಯದ (Hamstring Injury) ಸಮಸ್ಯೆಯಿಂದಾಗಿ ಅವರು ಈ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ (BCCI) ಮೂಲಗಳು ಅಧಿಕೃತವಾಗಿ ಖಚಿತಪಡಿಸಿವೆ.

ಟೀಮ್ ಇಂಡಿಯಾಗೆ ಭಾರಿ ಆಘಾತ | Photo Credit: https://x.com/rushiii_12
ಟೀಮ್ ಇಂಡಿಯಾಗೆ ಭಾರಿ ಆಘಾತ | Photo Credit: https://x.com/rushiii_12

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ರೋಚಕ ಒನ್ ಡೇ ಸರಣಿಯು ಜೂನ್ 13 ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಆದರೆ ಸರಣಿ ಶುರುವಾಗುವ ಮುನ್ನವೇ ಕೊಹ್ಲಿ ಗಾಯಗೊಂಡಿರುವುದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಬಿಸಿಸಿಐ ಹೇಳಿದ್ದೇನು?

ವಿರಾಟ್ ಕೊಹ್ಲಿ ಅವರ ಗಾಯದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, "ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆಯಿಂದಾಗಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಸಂಪೂರ್ಣ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರಿಗೆ ಸದ್ಯ ವಿಶ್ರಾಂತಿ ಮತ್ತು ಚಿಕಿತ್ಸೆಯ ಅಗತ್ಯವಿದೆ," ಎಂದು ತಿಳಿಸಿದ್ದಾರೆ.

ಈಗಾಗಲೇ 37 ವರ್ಷ ವಯಸ್ಸಾಗಿದ್ದರೂ ಯುವಕರಿಗೂ ಸವಾಲು ಹಾಕುವಂತಹ ಫಿಟ್‌ನೆಸ್ ಹೊಂದಿರುವ ಕೊಹ್ಲಿ, ಇತ್ತೀಚಿನ ದಿನಗಳಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದು ತೀರಾ ಅಪರೂಪ. ಆದರೆ ಸತತ ಕ್ರಿಕೆಟ್ ಆಟದ ಒತ್ತಡದಿಂದಾಗಿ ಅವರಿಗೆ ಈ ಇಂಜುರಿ ಫೇಸ್ ಮಾಡಬೇಕಾಗಿ ಬಂದಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿಗೆ ಸತತ ಎರಡನೇ ಟ್ರೋಫಿ ತಂದುಕೊಟ್ಟಿದ್ದ ಕಿಂಗ್ ಕೊಹ್ಲಿ!

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಖತ್ ಫಾರ್ಮ್‌ನಲ್ಲಿದ್ದರು. ರನ್ ಮಳೆ ಹರಿಸಿದ್ದ ಕೊಹ್ಲಿ, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಕೊಹ್ಲಿ ಅವರೇ ವಿನ್ನಿಂಗ್ ರನ್ ಬಾರಿಸಿ ಆರ್‌ಸಿಬಿ ಅಭಿಮಾನಿಗಳನ್ನು ಸಂಭ್ರಮದ ಕಡಲಲ್ಲಿ ತೇಲಿಸಿದ್ದರು. ಐಪಿಎಲ್ ಮುಗಿದ ಬೆನ್ನಲ್ಲೇ ಕೊಹ್ಲಿ ಗಾಯದ ಸಮಸ್ಯೆಗೆ ಸಿಲುಕಿರುವುದು ಫ್ಯಾನ್ಸ್‌ಗೆ ತೀವ್ರ ನಿರಾಶೆ ಮೂಡಿಸಿದೆ.

ಕೊಹ್ಲಿ ಇಲ್ಲದ ಸರಣಿ ಕಳೆಗುಂದಲಿದೆಯೇ?

ವಿರಾಟ್ ಕೊಹ್ಲಿ ಅವರು ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಒಂದು ಫಾರ್ಮ್ಯಾಟ್‌ಗೆ (ಏಕದಿನ ಕ್ರಿಕೆಟ್) ಮಾತ್ರ ಸೀಮಿತವಾಗಿದ್ದರೂ, ವಿಶ್ವಾದ್ಯಂತ ಅವರಿಗಿರುವ ಕ್ರೇಜ್ ಹಾಗೂ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಅವರು ಮೈದಾನಕ್ಕಿಳಿದರೆ ಸ್ಟೇಡಿಯಂ ಹೌಸ್‌ಫುಲ್ ಆಗುತ್ತದೆ. ಈಗ ಅವರು ಅಫ್ಘಾನಿಸ್ತಾನ ಸರಣಿಯಿಂದ ಹೊರಬಿದ್ದಿರುವುದರಿಂದ, ಇಡೀ ಸರಣಿಯ ಕಳೆ ಕೊಂಚ ಕುಂದಲಿದೆ ಎನ್ನಬಹುದು. ಕೊಹ್ಲಿ ಬ್ಯಾಟಿಂಗ್ ನೋಡಲು ಕಾಯುತ್ತಿದ್ದ ಧರ್ಮಶಾಲಾ ಮತ್ತು ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಸದ್ಯ ನಿರಾಶೆಯಾಗಿದೆ.

ರೋಹಿತ್ ಶರ್ಮಾ ಆಡುವುದು ಕೂಡ ಡೌಟ್?

ಮತ್ತೊಂದೆಡೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಲಭ್ಯತೆಯ ಮೇಲೂ ಈಗ ಅನುಮಾನ ಮೂಡಿದೆ. ಐಪಿಎಲ್ ಆಡುವಾಗ ರೋಹಿತ್ ಶರ್ಮಾ ಅವರಿಗೂ ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆ ಕಾಡಿತ್ತು. ಈ ಕಾರಣಕ್ಕಾಗಿಯೇ ಅವರು ಐಪಿಎಲ್‌ನ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು.

ಅಫ್ಘಾನಿಸ್ತಾನ ಸರಣಿಯ ಟೀಮ್ ಸೆಲೆಕ್ಷನ್ ವೇಳೆ ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆಯಾದರೂ, ಅದು ಅವರ ಫಿಟ್‌ನೆಸ್ ಆಧಾರದ ಮೇಲೆ ನಿರ್ಧಾರವಾಗಲಿದೆ ಎಂದು ಬಿಸಿಸಿಐ ಹೇಳಿತ್ತು. ಹಾಗಾಗಿ, ರೋಹಿತ್ ಶರ್ಮಾ ಸಂಪೂರ್ಣ ಸರಣಿಗೆ ಲಭ್ಯವಿರುತ್ತಾರಾ ಅಥವಾ ಅವರೂ ಕೂಡ ವಿಶ್ರಾಂತಿ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಒಂದು ವೇಳೆ ರೋಹಿತ್ ಕೂಡ ಮಿಸ್ ಆದ್ರೆ, ಅಫ್ಘಾನಿಸ್ತಾನ ವಿರುದ್ಧ ಭಾರತ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿಯಬೇಕಾಗುತ್ತದೆ.

Latest News