ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನೋ ಮಾಯಾವಿ ಬಂದ್ಮೇಲೆ ಯಾರದ್ದೇ ಮುಖಕ್ಕೆ ಯಾರದ್ದೇ ಧ್ವನಿ ಮ್ಯಾಚ್ ಮಾಡಿ ನಕಲಿ ವಿಡಿಯೋ ಮಾಡೋದು ಸಖತ್ ಈಸಿ ಆಗ್ಬಿಟ್ಟಿದೆ. ಇತ್ತೀಚೆಗಷ್ಟೇ ಐಪಿಎಲ್ 2026ನೇ ಸೀಸನ್ ಮುಕ್ತಾಯಗೊಂಡ ಬೆನ್ನಲ್ಲೇ, ಸೋಶಿಯಲ್ ಮೀಡಿಯಾದಲ್ಲಿ ಇಂತದ್ದೇ ಒಂದು ಡೀಪ್‌ಫೇಕ್ ವಿಡಿಯೋ ಭಾರಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ್ ರಾಯಲ್ಸ್ (RR) ತಂಡದ 'ವಂಡರ್ ಕಿಡ್' ಎಂದೇ ಫೇಮಸ್ ಆಗಿರೋ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ, ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಬಗ್ಗೆ ಸಖತ್ ಕೇವಲವಾಗಿ ಮಾತನಾಡಿದ್ದಾನೆ ಅನ್ನೋ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು. ಆದರೆ ಇದರ ಬೆನ್ನಲ್ಲೇ ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ರಂಗಕ್ಕಿಳಿದು ಅಸಲಿ ಸತ್ಯ ಏನೆಂದು ಜಗತ್ತಿಗೆ ಸಾರಿದ್ದಾರೆ!
ವೈರಲ್ ವಿಡಿಯೋದಲ್ಲಿ ಏನಿತ್ತು ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಆ ವಿಡಿಯೋ ಕ್ಲಿಪ್‌ನಲ್ಲಿ, ಹರ್ಷ ಭೋಗ್ಲೆ ಅವರು ವೈಭವ್ ಸೂರ್ಯವಂಶಿಗೆ "ನೀನು ವಿರಾಟ್ ಕೊಹ್ಲಿ ತರ 'ಕಿಂಗ್' ಆಗೋಕೆ ಇಷ್ಟ ಪಡ್ತೀಯಾ?" ಅಂತ ಪ್ರಶ್ನೆ ಕೇಳ್ತಾರೆ. ಅದಕ್ಕೆ ಸೂರ್ಯವಂಶಿ, "ಕೊಹ್ಲಿ ಒಬ್ಬ 'ಸ್ಲೋ' ಮತ್ತು 'ಸೆಲ್ಫಿಶ್' (ಸ್ವಾರ್ಥಿ) ಪ್ಲೇಯರ್" ಅಂತ ದುರಹಂಕಾರದಿಂದ ಕಮೆಂಟ್ ಮಾಡಿದ ಹಾಗೆ ಎಡಿಟ್ ಮಾಡಲಾಗಿತ್ತು. ಇದನ್ನು ನೋಡಿ ವಿರಾಟ್ ಕೊಹ್ಲಿ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ ಆಗಿದ್ರು. ಬಾಲಕ ಸೂರ್ಯವಂಶಿಗೆ ನೆಟ್ಟಿಗರು ಕ್ಲಾಸ್ ತಗೊಳ್ಳೋಕೆ ಶುರು ಮಾಡಿದ್ರು.
ಹರ್ಷ ಭೋಗ್ಲೆ ಕೊಟ್ಟ ಖಡಕ್ ಕ್ಲಾರಿಟಿ!
ವಿಷಯ ಸೀರಿಯಸ್ ಆಗ್ತಾ ಇದ್ದಂತೆ ಹರ್ಷ ಭೋಗ್ಲೆ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಾಕಿ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
"ನನ್ನ ಮತ್ತು ವೈಭವ್ ಸೂರ್ಯವಂಶಿ ಅವರ ಒಂದು ನಕಲಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಹರಿಬಿಡಲಾಗಿದೆ. ಅದರಲ್ಲಿ ವೈಭವ್‌ನನ್ನು ತುಂಬಾ ಅಸಭ್ಯ ಮತ್ತು ದುರಹಂಕಾರಿ ಹುಡುಗ ಅನ್ನೋ ತರ ಬಿಂಬಿಸಲಾಗಿದೆ. ನಾನಂತೂ ಆ ತರಹದ ಯಾವುದೇ ಪ್ರಶ್ನೆಯನ್ನು ಅವನಿಗೆ ಕೇಳಿಲ್ಲ, ಅವನು ಆ ತರಹದ ಉತ್ತರವನ್ನೂ ಕೊಟ್ಟಿಲ್ಲ. ಇದು ತೀರಾ ಕ್ರೂರ ಮತ್ತು ವಿಕೃತ ಮನಸ್ಸಿನ ಚೇಷ್ಟೆಯ ಕೆಲಸ. ಅದರಲ್ಲೂ ಇಂಟರ್ವ್ಯೂಗಳಲ್ಲಿ ತುಂಬಾ ನಮ್ರತೆಯಿಂದ, ಗೌರವದಿಂದ ಮಾತನಾಡುವ ಒಬ್ಬ ಪುಟ್ಟ ಮಗುವಿನ ತೇಜೋವಧೆ ಮಾಡುವುದು ಖಂಡಿತಾ ಸರಿಯಲ್ಲ" ಎಂದು ಹರ್ಷ ಭೋಗ್ಲೆ ಬೇಸರ ಹೊರಹಾಕಿದ್ದಾರೆ.
ಫೈನಲ್ ಪಂದ್ಯದ ನಂತರ ನಡೆದಿದ್ದೇ ಬೇರೆ!
ಅಸಲಿಗೆ, ಐಪಿಎಲ್ 2026 ರ ಫೈನಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದಿತ್ತು. ಮ್ಯಾಚ್ ಮುಗಿದ ಮೇಲೆ ಐಪಿಎಲ್ ಆಫೀಶಿಯಲ್ ಅಕೌಂಟ್‌ನಲ್ಲಿ ಒಂದು ಕ್ಯೂಟ್ ವಿಡಿಯೋ ಶೇರ್ ಆಗಿತ್ತು. ಅದರಲ್ಲಿ ವಿರಾಟ್ ಕೊಹ್ಲಿ ತಾವಾಗಿಯೇ ಬಂದು ವೈಭವ್ ಸೂರ್ಯವಂಶಿಗೆ 'ವೆಲ್ ಪ್ಲೇಯಡ್, ಯಂಗ್ ಮ್ಯಾನ್' ಎಂದು ಬೆನ್ನು ತಟ್ಟಿದ್ದರು. 15 ವರ್ಷದ ಆ ಪುಟ್ಟ ಹುಡುಗ ಕೂಡ ಆರ್‌ಸಿಬಿ ಲೆಜೆಂಡ್ ಕೊಹ್ಲಿ ಅವರಿಗೆ ಕೈಜೋಡಿಸಿ ಸಖತ್ ರೆಸ್ಪೆಕ್ಟ್ ಕೊಟ್ಟಿದ್ದ.
This is that video 😭😭😭😭😭 https://t.co/UVZaAle5Oz pic.twitter.com/3qZ7Q9jWI0
— Harshit (@knight_17_) June 2, 2026
ಕೊಹ್ಲಿ ಮೆಚ್ಚಿದ 'ಸ್ಪೆಷಲ್' ಕಿಡ್ ಸೂರ್ಯವಂಶಿ
ಈ ಸೀಸನ್‌ನ ಐಪಿಎಲ್‌ನಲ್ಲಿ ಸೂರ್ಯವಂಶಿ ಬರೋಬ್ಬರಿ 776 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡಿದ್ದಾನೆ. ಆತ ಪ್ರಶಸ್ತಿ ಸ್ವೀಕರಿಸಲು ಸ್ಟೇಜ್ ಮೇಲೆ ಹೋಗುತ್ತಿದ್ದಾಗ, ಕೊಹ್ಲಿ ಅವರು ಪಕ್ಕದಲ್ಲೇ ಇದ್ದ ತಮ್ಮ ಹಳೇ ಗೆಳೆಯ ಎಬಿ ಡಿವಿಲಿಯರ್ಸ್ ಹತ್ತಿರ "ಈ ಮಗು ತುಂಬಾ ಸ್ಪೆಷಲ್ ಗುರು, ಇವನು ಅದ್ಭುತವಾಗಿ ಬ್ಯಾಟಿಂಗ್ ಮಾಡ್ತಾನೆ" ಅಂತ ಮನಸಾರೆ ಹೊಗಳಿದ್ದರು.
ಹೀಗೆ ವಿರಾಟ್ ಕೊಹ್ಲಿ ಮತ್ತು ಸೂರ್ಯವಂಶಿ ನಡುವೆ ಇಷ್ಟೊಂದು ಪ್ರೀತಿ, ಗೌರವ ಇರುವಾಗ, ಸೋಶಿಯಲ್ ಮೀಡಿಯಾದ ಕೆಲವು ಕಿಡಿಗೇಡಿಗಳು ವೀವ್ಸ್ ಮತ್ತು ಲೈಕ್ಸ್‌ಗಾಗಿ ಇಬ್ಬರ ನಡುವೆ ಬೆಂಕಿ ಹಚ್ಚಲು ಈ ತರಹದ ಅಸಹ್ಯಕರ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ.