Mar 18, 2026 Languages : ಕನ್ನಡ | English

IPL ಇತಿಹಾಸದಲ್ಲೇ ದಾಖಲೆ ಬರೆದ RCB ಡೀಲ್ - ಮಣಿಪಾಲ್ ಗ್ರೂಪ್ ವರ್ಸಸ್ ಇಕ್ಯೂಟಿ ನಡುವೆ ಶುರುವಾಯ್ತು ಬಿಗ್ ಫೈಟ್!!

ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈಗ ಮಾರಾಟಕ್ಕಿದೆ. 19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಈ ಸುದ್ದಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ ಈ ತಂಡದ ಮಾಲೀಕತ್ವವನ್ನು 'ಡಿಯಾಜಿಯೋ' ಸಂಸ್ಥೆ ಹೊಂದಿದೆ. ಆದರೆ, ಈಗ ಈ ತಂಡವನ್ನು ಖರೀದಿಸಲು ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬಂದಿವೆ. ಆರಂಭದಲ್ಲಿ ಒಟ್ಟು ಏಳು ಕಂಪನಿಗಳು ಈ ರೇಸ್‌ನಲ್ಲಿದ್ದವು, ಆದರೆ ಈಗ ಅಂತಿಮವಾಗಿ ಕೇವಲ ಎರಡು ಪ್ರಮುಖ ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಮಾರ್ಚ್ 28ಕ್ಕೆ ಐಪಿಎಲ್ ಕಿಕ್ ಸ್ಟಾರ್ಟ್
ಮಾರ್ಚ್ 28ಕ್ಕೆ ಐಪಿಎಲ್ ಕಿಕ್ ಸ್ಟಾರ್ಟ್

ವರದಿಗಳ ಪ್ರಕಾರ, ಸ್ವೀಡನ್ ಮೂಲದ ಖಾಸಗಿ ಷೇರು ಸಂಸ್ಥೆಯಾದ "ಇಕ್ಯೂಟಿ" (EQT) ಸದ್ಯಕ್ಕೆ ಈ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಈ ಕಂಪನಿಯು ಆರ್‌ಸಿಬಿ ತಂಡವನ್ನು ಖರೀದಿಸಲು ಬರೋಬ್ಬರಿ 2.1 ಶತಕೋಟಿ ಡಾಲರ್ ಅಂದರೆ ಸುಮಾರು 19,386 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಬಿಡ್ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಇದು ಐಪಿಎಲ್ ಇತಿಹಾಸದಲ್ಲೇ ಒಂದು ದಾಖಲೆ ಮೊತ್ತದ ವ್ಯವಹಾರವಾಗುವ ಸಾಧ್ಯತೆಯಿದೆ.

ಇನ್ನೊಂದು ಕಡೆ, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಡಾ. ರಂಜನ್ ಪೈ ಅವರು ಕೂಡ ಈ ಖರೀದಿಯಲ್ಲಿ ಆಸಕ್ತಿ ತೋರಿಸಿದ್ದಾರೆ. ಅವರು ಏಕಾಂಗಿಯಾಗಿ ಬಾರದೆ, ಅಮೆರಿಕದ ಪ್ರಸಿದ್ಧ ಹೂಡಿಕೆ ಸಂಸ್ಥೆ ಕೆಕೆಆರ್ (KKR) ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಸಂಸ್ಥೆಗಳ ಜೊತೆಗೂಡಿ ತಂಡವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಎರಡು ಕಂಪನಿಗಳ ನಡುವೆ ಈಗ ಅಂತಿಮ ಹಣಾಹಣಿ ನಡೆಯುತ್ತಿದೆ.

ಆರಂಭದಲ್ಲಿ ಮಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಮಾಲೀಕರಾದ ಅವ್ರಾಮ್ ಗ್ಲೇಜರ್ ಅವರ ಲ್ಯಾನ್ಸರ್ ಕ್ಯಾಪಿಟಲ್ ಸಂಸ್ಥೆಯು 16,616 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿತ್ತು. ಆದರೆ ನಂತರದ ದಿನಗಳಲ್ಲಿ ಅವರು ಈ ರೇಸ್‌ನಿಂದ ಹಿಂದೆ ಸರಿದರು. ಹಾಗೆಯೇ, ಸೀರಮ್ ಇನ್‌ಸ್ಟಿಟ್ಯೂಟ್ ಮಾಲೀಕ ಅದರ್ ಪೂನಾವಾಲಾ ಮತ್ತು ಪ್ರಸಿದ್ಧ ಮಾಧ್ಯಮ ಸಂಸ್ಥೆಯಾದ ಟೈಮ್ಸ್ ಗ್ರೂಪ್ ಕೂಡ ಆರಂಭದಲ್ಲಿ ಆಸಕ್ತಿ ತೋರಿಸಿದ್ದವು. ಆದರೆ ಅಂತಿಮವಾಗಿ ಇವರೆಲ್ಲರೂ ಬಿಡ್ಡಿಂಗ್ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ.

ಮಾರ್ಚ್ 28ರಿಂದ ಐಪಿಎಲ್ 19ನೇ ಸೀಸನ್ ಅಧಿಕೃತವಾಗಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಆದರೆ, ಈಗ ನಡೆಯುತ್ತಿರುವ ಮಾರಾಟ ಪ್ರಕ್ರಿಯೆಯು ಈ ಬಾರಿಯ ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಮಾರ್ಚ್ ಅಂತ್ಯದೊಳಗೆ ಮಾರಾಟದ ಹಣಕಾಸಿನ ಪ್ರಕ್ರಿಯೆ ಮುಗಿದರೂ, ಬಿಸಿಸಿಐ (BCCI) ನಿಯಮಗಳ ಪ್ರಕಾರ ಕೆಲವು ಅಧಿಕೃತ ಅನುಮತಿಗಳು ಬೇಕಾಗುತ್ತವೆ. ಹೀಗಾಗಿ, ಹೊಸ ಮಾಲೀಕರು ತಂಡದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲು ಅಕ್ಟೋಬರ್ ತಿಂಗಳವರೆಗೆ ಕಾಯಬೇಕಾಗುತ್ತದೆ. ಇದರರ್ಥ, ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಹಳೆಯ ಮಾಲೀಕತ್ವದಲ್ಲೇ (ಡಿಯಾಜಿಯೋ) ಆಡಲಿದೆ. ಮುಂದಿನ ವರ್ಷ ಅಂದರೆ 20ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಾತ್ರ ನಮಗೆ ಹೊಸ ಮಾಲೀಕರ ನೇತೃತ್ವದಲ್ಲಿ ಆರ್‌ಸಿಬಿ ತಂಡ ಕಾಣಸಿಗಲಿದೆ.

ಆರ್‌ಸಿಬಿ ತಂಡದ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ಬಿಸಿನೆಸ್ ಮಾರುಕಟ್ಟೆಯಲ್ಲೂ ಬೆಂಗಳೂರು ತಂಡ ತನ್ನ ಹವಾ ಸೃಷ್ಟಿಸಿದೆ. ಯಾರು ಅಂತಿಮವಾಗಿ ಈ ತಂಡದ ಒಡೆಯರಾಗುತ್ತಾರೆ ಎಂಬುದು ಇಡೀ ಜಗತ್ತಿನ ಕತೂಹಲಕ್ಕೆ ಕಾರಣವಾಗಿದೆ.

Latest News