Apr 2, 2026 Languages : ಕನ್ನಡ | English

ಲಕ್ನೋ ಮಾಲೀಕನಿಂದ ಪಂತ್‌ಗೆ ಕ್ಲಾಸ್? ಮೈದಾನದಲ್ಲೇ ಕೈ ಬೆರಳು ತೋರಿಸಿ ಗದರಿಸಿದ ಗೋಯೆಂಕಾ - ವೈರಲ್ ಆಯ್ತು ಈ ಫೋಟೋ!!

ಐಪಿಎಲ್ 2026ರ ಸೀಸನ್ ಅಬ್ಬರದಿಂದ ಶುರುವಾಗಿದೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಮಾತ್ರ ಆರಂಭದಲ್ಲೇ ವಿಘ್ನ ಎದುರಾಗಿದೆ. ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೇ, ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ರಿಷಭ್ ಪಂತ್ ನಡುವೆ ಬಿಸಿ ಬಿಸಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಈಗ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ಲಖನೌ ಸೂಪರ್ ಜೈಂಟ್ಸ್‌ನಲ್ಲಿ ಮತ್ತೆ ಮಾಲೀಕ-ನಾಯಕ ವಿವಾದ; | Photo Credit: https://sports.ndtv.com
ಲಖನೌ ಸೂಪರ್ ಜೈಂಟ್ಸ್‌ನಲ್ಲಿ ಮತ್ತೆ ಮಾಲೀಕ-ನಾಯಕ ವಿವಾದ; | Photo Credit: https://sports.ndtv.com

ಲಕ್ನೋ ತಂಡದ ಹೋಮ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆರಿಸಿಕೊಂಡಿದ್ದರು. ಬ್ಯಾಟಿಂಗ್‌ಗೆ ಇಳಿದ ಲಕ್ನೋ ತಂಡದ ಬ್ಯಾಟರ್‌ಗಳು ಪೆವಿಲಿಯನ್‌ಗೆ ಬರಲು ಅವಸರ ಮಾಡಿದಂತಿದ್ದರು. ಕೇವಲ 18.4 ಓವರ್‌ಗಳಲ್ಲಿ 142 ರನ್‌ಗಳಿಗೆ ಇಡೀ ತಂಡ ಆಲೌಟ್ ಆಯ್ತು.

ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಕನ್ನಡಿಗ ಕೆ.ಎಲ್. ರಾಹುಲ್ ಶೂನ್ಯಕ್ಕೆ ಔಟಾಗಿ ಶಾಕ್ ಕೊಟ್ಟರು. ಆದರೆ, ಯುವ ಬ್ಯಾಟರ್ ಸಮೀರ್ ರಿಜ್ವಿ ಕೇವಲ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಚಚ್ಚಿದರು. ಇವರಿಗೆ ಟ್ರಿಸ್ಟಾನ್ ಸ್ಟಬ್ಸ್ (39*) ಸಾಥ್ ನೀಡಿದ್ದರಿಂದ ಡೆಲ್ಲಿ ತಂಡ ಸುಲಭವಾಗಿ ಗೆದ್ದು ಬೀಗಿತು.

ತವರಿನಲ್ಲಿ ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿದ್ದನ್ನು ಕಂಡು ಮಾಲೀಕ ಸಂಜೀವ್ ಗೋಯೆಂಕಾ ಅವರಿಗೆ ಸಿಟ್ಟು ತಡೆಯಲು ಸಾಧ್ಯವಾಗಿಲ್ಲ. ಪಂದ್ಯ ಮುಗಿದ ಮೇಲೆ ಡ್ರೆಸ್ಸಿಂಗ್ ರೂಮ್ ಹತ್ತಿರ ನಾಯಕ ರಿಷಭ್ ಪಂತ್ ಜೊತೆ ಅವರು ಗಂಭೀರ ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂದಿದೆ. ವೈರಲ್ ಆಗಿರುವ ಫೋಟೋದಲ್ಲಿ ಗೋಯೆಂಕಾ ಅವರು ಪಂತ್ ಕಡೆಗೆ ಕೈ ಬೆರಳು ತೋರಿಸುತ್ತಾ ಜೋರಾಗಿ ಏನೋ ಹೇಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪಂತ್ ಮಾತ್ರ ಏನೂ ಮಾಡಲಾಗದೆ ಸುಮ್ಮನೆ ನಿಂತು ಕೇಳಿಸಿಕೊಳ್ಳುತ್ತಿದ್ದಾರೆ.

ಸಂಜೀವ್ ಗೋಯೆಂಕಾ ಅವರು ಈ ರೀತಿ ನಾಯಕರ ಮೇಲೆ ಸಾರ್ವಜನಿಕವಾಗಿ ಸಿಟ್ಟು ಮಾಡಿಕೊಳ್ಳುವುದು ಇದೇ ಮೊದಲೇನಲ್ಲ. ಕಳೆದ ಸೀಸನ್‌ನಲ್ಲಿ ಕೆ.ಎಲ್. ರಾಹುಲ್ ಲಕ್ನೋ ತಂಡದ ನಾಯಕರಾಗಿದ್ದಾಗಲೂ ಹೈದರಾಬಾದ್ ವಿರುದ್ಧದ ಸೋಲಿನ ಬಳಿಕ ಗೋಯೆಂಕಾ ಇದೇ ರೀತಿ ವರ್ತಿಸಿದ್ದರು. ಆ ಘಟನೆಯಿಂದ ಬೇಸತ್ತಿದ್ದ ರಾಹುಲ್, ಈ ಬಾರಿ ಲಕ್ನೋ ತೊರೆದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡಿದ್ದಾರೆ. ಈಗ ಪಂತ್ ವಿಚಾರದಲ್ಲೂ ಅದೇ ರೀತಿ ಆಗುತ್ತಿದೆಯಾ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಕ್ರಿಕೆಟ್ ಅಂದ ಮೇಲೆ ಸೋಲು-ಗೆಲುವು ಸಹಜ. ಆದರೆ, ಮೈದಾನದಲ್ಲಿ ಅಥವಾ ಸಾರ್ವಜನಿಕವಾಗಿ ಒಬ್ಬ ಅಂತರಾಷ್ಟ್ರೀಯ ಆಟಗಾರನಿಗೆ ಅಥವಾ ತಂಡದ ನಾಯಕನಿಗೆ ಈ ರೀತಿ ಬೆರಳು ತೋರಿಸಿ ಗದರಿಸುವುದು ಎಷ್ಟು ಸರಿ ಎಂಬ ಚರ್ಚೆ ಈಗ ಶುರುವಾಗಿದೆ. ಫ್ರಾಂಚೈಸಿ ಮಾಲೀಕರಿಗೆ ತಂಡದ ಮೇಲೆ ಹೂಡಿಕೆ ಮಾಡಿದ ಹಣದ ಬಗ್ಗೆ ಚಿಂತೆ ಇರಬಹುದು, ಆದರೆ ಆಟಗಾರರ ಆತ್ಮಗೌರವ ಕೂಡ ಅಷ್ಟೇ ಮುಖ್ಯ ಅಲ್ವಾ?

ಲಕ್ನೋ ತಂಡ ಈ ಸೋಲಿನಿಂದ ಪಾಠ ಕಲಿಯುತ್ತಾ ಅಥವಾ ಮಾಲೀಕರ ಈ ಸಿಟ್ಟು ತಂಡದ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ? ಅನ್ನೋದನ್ನು ಮುಂದಿನ ಪಂದ್ಯಗಳಲ್ಲಿ ನೋಡಬೇಕಿದೆ. ಸದ್ಯಕ್ಕಂತೂ ರಿಷಭ್ ಪಂತ್ ಮತ್ತು ಗೋಯೆಂಕಾ ಅವರ ಈ 'ಕ್ಲಾಸ್' ಫೋಟೋ ಐಪಿಎಲ್ ಅಭಿಮಾನಿಗಳ ನಿದ್ದೆಗೆಡಿಸಿದೆ.

Latest News