ಇಂದು ಭಾರತ-ಪಾಕ್ ಮಹಾ ಸಮರ - ಕೊಲಂಬೊದಲ್ಲಿ ಕ್ರಿಕೆಟ್ ರಸದೌತಣಕ್ಕೆ ಕ್ಷಣಗಣನೆ!!

ಭಾರತ ಮತ್ತು ಪಾಕಿಸ್ತಾನ್ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಇಂದು (ಫೆ.15) ನಡೆಯಲಿರುವ ಈ ಪಂದ್ಯದಲ್ಲಿ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ತಂಡವು 5+3+3 ಸಂಯೋಜನೆಯೊಂದಿಗೆ ಕಣಕ್ಕಿಳಿಯಬಹುದು ಎಂಬ ಸುಳಿವು ಸಿಕ್ಕಿದೆ.

ಅಭಿಷೇಕ್ ಶರ್ಮಾ ಮರಳಿಕೆ – ಟೀಮ್ ಇಂಡಿಯಾ ಟಾಪ್ ಆರ್ಡರ್‌ಗೆ ಹೊಸ ಶಕ್ತಿ
ಅಭಿಷೇಕ್ ಶರ್ಮಾ ಮರಳಿಕೆ – ಟೀಮ್ ಇಂಡಿಯಾ ಟಾಪ್ ಆರ್ಡರ್‌ಗೆ ಹೊಸ ಶಕ್ತಿ

ಅನಾರೋಗ್ಯದ ಕಾರಣದಿಂದ ಹಿಂದಿನ ಪಂದ್ಯ ಮಿಸ್ ಮಾಡಿಕೊಂಡಿದ್ದ ಸ್ಫೋಟಕ ದಾಂಡಿಗ ಅಭಿಷೇಕ್ ಶರ್ಮಾ ಸಂಪೂರ್ಣ ಚೇತರಿಸಿಕೊಂಡಿದ್ದು, ಪಾಕ್ ವಿರುದ್ಧ ಆಡುವುದು ಬಹುತೇಕ ಖಚಿತವಾಗಿದೆ. ಈ ವಿಷಯವನ್ನು ನಾಯಕ ಸೂರ್ಯಕುಮಾರ್ ಯಾದವ್ ದೃಢಪಡಿಸಿದ್ದಾರೆ. ಇದರಿಂದ ಟೀಮ್ ಇಂಡಿಯಾದ ಟಾಪ್ ಆರ್ಡರ್‌ಗೆ ಬಲ ಹೆಚ್ಚಲಿದೆ.

ಇನ್ನೊಂದೆಡೆ, ಕೊಲಂಬೊ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿರುವುದರಿಂದ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ್ ವಿರುದ್ಧ 4 ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್, ಆ ಟೂರ್ನಿಯಲ್ಲಿ ಒಟ್ಟು 17 ವಿಕೆಟ್ ಕಬಳಿಸಿದ್ದರು. ಪಾಕ್ ವಿರುದ್ಧ 10 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿರುವ ಅವರ ದಾಖಲೆ ಗಮನಾರ್ಹ. ಹೀಗಾಗಿ ಈ ಪಂದ್ಯದಲ್ಲಿ ಅವರು ಟ್ರಂಪ್ ಕಾರ್ಡ್ ಆಗಬಹುದು.

ಕುಲ್ದೀಪ್ ಸೇರ್ಪಡೆಯಿಂದ ಭಾರತ ಏಕೈಕ ಪ್ರಮುಖ ವೇಗಿಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಅದರಂತೆ ಮುಖ್ಯ ವೇಗಿಯಾಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಹೆಚ್ಚುವರಿ ವೇಗದ ಆಯ್ಕೆಯಾಗಬಹುದು. ಇದರಿಂದ ಅರ್ಷದೀಪ್ ಸಿಂಗ್ ಹೊರಗುಳಿಯುವ ಸಾಧ್ಯತೆ ಇದೆ.

ಶ್ರೀಲಂಕಾದ ಪಿಚ್ ಸಾಂಪ್ರದಾಯಿಕವಾಗಿ ಕಪ್ಪು ಮಣ್ಣಿನಿಂದ ಕೂಡಿದ್ದು, ಪಂದ್ಯ ಮುಂದುವರೆದಂತೆ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಚೆಂಡು ಹಿಡಿತ ಪಡೆಯುವುದರಿಂದ ಬ್ಯಾಟರ್‌ಗಳಿಗೆ ದೊಡ್ಡ ಹೊಡೆತಗಳು ಸವಾಲಾಗಬಹುದು. ಹೀಗಾಗಿ ಮೂವರು ಸ್ಪಿನ್ನರ್‌ಗಳ ತಂತ್ರವನ್ನು ತಂಡ ಅನುಸರಿಸಬಹುದು. ಕುಲ್ದೀಪ್ ಜೊತೆ ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಸ್ಪಿನ್ ದಾಳಿಯನ್ನು ಬಲಪಡಿಸಬಹುದು.

5+3+3 ಸಂಯೋಜನೆ ಪ್ರಕಾರ ಐವರು ಬ್ಯಾಟರ್‌ಗಳು, ಮೂವರು ಆಲ್‌ರೌಂಡರ್‌ಗಳು ಮತ್ತು ಮೂವರು ಪ್ರಮುಖ ಬೌಲರ್‌ಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಬ್ಯಾಟರ್‌ಗಳಾಗಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಕಾಣಿಸಿಕೊಳ್ಳಬಹುದು.

ಸ್ಪಿನ್ ಆಧಾರಿತ ತಂತ್ರ ಮತ್ತು ಸಮತೋಲನದ ತಂಡ ಸಂಯೋಜನೆಯೊಂದಿಗೆ ಭಾರತ ಪಾಕಿಸ್ತಾನ್ ವಿರುದ್ಧ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಕೊಲಂಬೊದಲ್ಲಿ ನಡೆಯಲಿರುವ ಈ ರೋಚಕ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವಾಗಲಿದೆ.

Latest News