ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಾಗರಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಹಾಗೂ ಕಠಿಣ ನಿಯಮ ಬದಲಾವಣೆಗಳನ್ನು ಜಾರಿಗೆ ತಂದಿದೆ. ಪರಿಷ್ಕೃತ ನಿಯಮಗಳ ಪ್ರಕಾರ, ಈಗಾಗಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಐಎಎಸ್ ಮತ್ತು ಐಎಫ್‌ಎಸ್ ಹುದ್ದೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ರ‍್ಯಾಂಕ್ ಸುಧಾರಣೆಗಾಗಿ ಎರಡನೇ ಬಾರಿ ಪರೀಕ್ಷೆ ಬರೆಯುವ ಪದ್ಧತಿಗೆ ಯುಪಿಎಸ್ಸಿ ಸಂಪೂರ್ಣ ನಿರ್ಬಂಧ ವಿಧಿಸಿದೆ.
ಯುಪಿಎಸ್ಸಿ 2026ನೇ ಸಾಲಿಗೆ ಸಂಬಂಧಿಸಿದಂತೆ 993 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದು, ಈ ಅಧಿಸೂಚನೆಯಲ್ಲಿ ಹೊಸ ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ. ಇದರ ಪ್ರಕಾರ, ಐಪಿಎಸ್ ಅಥವಾ ಇತರೆ ಗ್ರೂಪ್–ಎ ಹುದ್ದೆಗಳಲ್ಲಿ (ಐಎಎಸ್, ಐಎಫ್‌ಎಸ್ ಹೊರತುಪಡಿಸಿ) ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ತಮ್ಮ ರ‍್ಯಾಂಕ್ ಸುಧಾರಣೆಗೆ ಮತ್ತೆ ಪರೀಕ್ಷೆ ಬರೆಯಲು ಮುಂದಾದರೆ, ಅವರಿಗೆ 2027ರಲ್ಲಿ ಒಂದೇ ಬಾರಿ ಅವಕಾಶ ನೀಡಲಾಗುತ್ತದೆ. ಆದರೆ ಈ ಅವಕಾಶದ ಬಳಿಕ ಅವರು ತರಬೇತಿ ಪಡೆದು ಹುದ್ದೆಗೆ ಸೇರ್ಪಡೆಯಾಗದೇ ಇದ್ದರೆ, ಅವರ ನೇಮಕಾತಿ ರದ್ದಾಗಲಿದೆ.
ಇನ್ನು ಪರೀಕ್ಷೆ ಬರೆಯಲು ಇಚ್ಛಿಸುವವರು ಹುದ್ದೆ ಸ್ವೀಕರಿಸಿ ಸೇವೆಯಲ್ಲಿ ಮುಂದುವರಿಯಲೇಬೇಕು. ತರಬೇತಿಗೆ ಸೇರ್ಪಡೆಗೊಂಡ ಬಳಿಕ 2028ರಲ್ಲಿ ಮತ್ತೆ ಪರೀಕ್ಷೆ ಬರೆಯಲು ಬಯಸಿದರೆ, ಅರ್ಜಿ ಸಲ್ಲಿಸುವಾಗಲೇ ಹಾಲಿ ಹುದ್ದೆಗೆ ರಾಜೀನಾಮೆ ನೀಡುವುದು ಕಡ್ಡಾಯವಾಗಿದೆ. ಪರಿಷ್ಕೃತ ನಿಯಮಗಳು ಎಲ್ಲಾ ಹಂತಗಳಿಗೂ ಅನ್ವಯವಾಗುತ್ತಿದ್ದು, ಐಎಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳಿಗೆ ಎರಡನೇ ಅವಕಾಶ ಇಲ್ಲ ಎನ್ನುವುದನ್ನು ಯುಪಿಎಸ್ಸಿ ಸ್ಪಷ್ಟಪಡಿಸಿದೆ.