ಚಿಕ್ಕಮಗಳೂರು: ಕೇಂದ್ರ ಬಜೆಟ್ ಕುರಿತು ಮಾಜಿ ಸಚಿವ ಸಿ.ಟಿ. ರವಿ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. “ಕೇಂದ್ರ ಬಜೆಟ್ ಕೇವಲ ಚುನಾವಣೆ ಗೆಲ್ಲೋದಲ್ಲ, ದೇಶ ಗೆಲ್ಲೋದು, ಬಡವರಿಗೆ ಬಲ ಕೊಡೋದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ರವಿ, ಮೂಲ ಸೌಕರ್ಯಗಳಿಗೆ ಒತ್ತು ನೀಡಿರುವುದು ಈ ಬಜೆಟ್‌ನ ಪ್ರಮುಖ ಅಂಶ ಎಂದು ಹೇಳಿದರು. ಸಣ್ಣ ಉದ್ದಿಮೆಗಳು ಬಲಗೊಳ್ಳುವಂತೆ ಮಾಡಿ, ಉದ್ಯೋಗ ಸೃಷ್ಟಿಸುವ ದಿಕ್ಕಿನಲ್ಲಿ ಬಜೆಟ್ ರೂಪುಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. “ಆತ್ಮನಿರ್ಭರ ಭಾರತ” ಎಂಬ ಗುರಿಯನ್ನು ಸಾಧಿಸುವತ್ತ ಬಜೆಟ್ ದಾರಿ ತೋರಿಸುತ್ತಿದೆ ಎಂದು ಅವರು ಹೇಳಿದರು.
ಭಾರತದ ಬೆಳವಣಿಗೆಯ ದರ 7.8 ದಾಟಿರುವುದು ಒಂದು ರೀತಿಯ ದಾಖಲೆ ಎಂದು ಅವರು ಉಲ್ಲೇಖಿಸಿದ್ದಾರೆ. “ಭಾರತ ಈಗಾಗಲೇ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿ. ಶೀಘ್ರವೇ 3ನೇ ಸ್ಥಾನಕ್ಕೆ ಬರೋದು ನಮ್ಮ ಗುರಿ” ಎಂದರು. 2047ರಲ್ಲಿ ಸ್ವಾತಂತ್ರ್ಯಕ್ಕೆ 100 ವರ್ಷ ಪೂರೈಸುವ ಸಂದರ್ಭದಲ್ಲಿ ಭಾರತ ಆರ್ಥಿಕ ಹಾಗೂ ಜ್ಞಾನದಲ್ಲಿ ಬಲಶಾಲಿಯಾಗಬೇಕು ಎಂಬುದು ಬಜೆಟ್‌ನ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟರು.
ಭಾರತ, ಜಗತ್ತಿನ ಕಲ್ಯಾಣ ಬಯಸುವ ಸಿದ್ಧಾಂತ ಹೊಂದಿರುವ ರಾಷ್ಟ್ರ ಎಂದು ಅವರು ಹೇಳಿದರು. “ನಮ್ಮ ಸೈದ್ದಾಂತಿಕ ವಿಚಾರಧಾರೆ ಮೂಲಕ ಜಗತ್ತಿನ ಕಲ್ಯಾಣವಾಗಬೇಕು” ಎಂಬ ಸಂದೇಶವನ್ನು ಬಜೆಟ್ ನೀಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಆರ್ಥಿಕ ಚೈತನ್ಯ ಮೂಡಿಸಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಹುರುಪು ನೀಡಿದೆ. ಜನರ ಆಶೋತ್ತರಗಳನ್ನು ಈಡೇರಿಸುವ ದಿಕ್ಕಿನಲ್ಲಿ ಬಜೆಟ್ ವಿಶ್ವಾಸ ಮೂಡಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೊನೆಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿ.ಟಿ. ರವಿ, “ಈ ಬಜೆಟ್ ದೇಶದ ಭವಿಷ್ಯವನ್ನು ಬಲಪಡಿಸುವಂತಿದೆ” ಎಂದು ಅವರ ಮಾತು ಮುಗಿಸಿದ್ದಾರೆ. ಸಿ.ಟಿ. ರವಿ ಅವರ ಈ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.