Feb 16, 2026 Languages : ಕನ್ನಡ | English

400 ಕೋಟಿ ದರೋಡೆ ವಿಚಾರ ಕೇಳಿ 'ಎದೆ ಜಲ್ ಎಂದಿತು' ಎಂದ ಲಕ್ಷ್ಮಿ ಹೆಬ್ಬಾಳ್ಕರ್ - ಹೇಳಿದ್ದೇನು?

ಉಡುಪಿಯಲ್ಲಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಲವು ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರು ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ದ್ವೀಪದಲ್ಲಿ ಧ್ವಜಾರೋಹಣ ನಡೆದಿದ್ದು, ಇದು ತಮ್ಮ ಜೀವನದ ರೋಮಾಂಚಕ ಅನುಭವ ಮತ್ತು ಭಾಗ್ಯ ಎಂದು ಅವರು ಹೇಳಿದರು.

ಉಡುಪಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಧ್ವಜಾರೋಹಣ
ಉಡುಪಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಧ್ವಜಾರೋಹಣ

ದ್ವೇಷ ಭಾಷಣ ಕಾನೂನು ಜಾರಿಗೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡಿದರು. “ಈಗ ಕಾಂಗ್ರೆಸ್ ಸರಕಾರ ಇದೆ. ದ್ವೇಷ ಭಾಷಣ ವಿರುದ್ಧ ಕಾನೂನು ರೀತಿಯಲ್ಲಿ ಮಸೂದೆ ತಂದಿದ್ದೇವೆ. ಭವಿಷ್ಯದಲ್ಲಿ ಬಿಜೆಪಿ ಸರಕಾರ ಬಂದರೂ ಅವರು ನಮ್ಮ ವಿರುದ್ಧ ಇದನ್ನು ಬಳಸಬಹುದು. ಆದರೆ ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವುದು ನಮ್ಮ ಉದ್ದೇಶ. ಜನರು ಒಟ್ಟಿಗೆ ಇರಬೇಕಾದರೆ ಜಾತಿ, ಸ್ಥಳ, ಭಾಷೆ, ವ್ಯಕ್ತಿತ್ವಗಳನ್ನು ನಿಂದಿಸಬಾರದು. ಸಂವಿಧಾನದ ಆಶಯದಂತೆ ಈ ಮಸೂದೆ ತಂದಿದ್ದೇವೆ” ಎಂದು ಹೇಳಿದರು. ಅವರು ಇನ್ನೂ, “ಕಾಂಗ್ರೆಸಿನವರು ಯಾರಾದರೂ ದ್ವೇಷ ಭಾಷಣ ಮಾಡಿದರೆ ಅವರ ಮೇಲೂ ಕಾನೂನು ಜಾರಿಯಾಗುತ್ತದೆ. ನೋಟಿಸ್ ವಿಚಾರ ನನಗೆ ಗೊತ್ತಿಲ್ಲ, ಆದರೆ ವ್ಯಕ್ತಿಗಳ ಹಿನ್ನೆಲೆ ನೋಡಿ ಅಪಾಯ ಆಗಬಾರದು ಎಂದು ನೋಟಿಸ್ ಕೊಟ್ಟಿರಬಹುದು” ಎಂದು ಹೇಳಿದರು.

ಉಡುಪಿಯ ಪರ್ಯಾಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭಗವದ್ವಜ ಹಾರಿಸಿದ ವಿಚಾರಕ್ಕೂ ಅವರು ಪ್ರತಿಕ್ರಿಯಿಸಿದರು. “ಉಡುಪಿಯ ಪರ್ಯಾಯ ಒಂದು ಧಾರ್ಮಿಕ ಕಾರ್ಯಕ್ರಮ. ಸಂಸ್ಕೃತಿ ಮತ್ತು ಧಾರ್ಮಿಕತೆಗೆ ಉಡುಪಿ ಹೆಸರುವಾಸಿ. ದ್ವಜ ಹಾರಿಸಿದ ವಿಚಾರ ಅಲ್ಲಿಗೆ ಬಿಟ್ಟುಬಿಡಿ. ಧಾರ್ಮಿಕ ಮನೋಭಾವನೆಯನ್ನು ಕೆರಳಿಸುವ ಕೆಲಸ ಮಾಡಬಾರದು. ಅಗತ್ಯ ಬಿದ್ದರೆ ನಾನು ಚರ್ಚಿಸುತ್ತೇನೆ” ಎಂದು ಹೇಳಿದರು.

ಇದೇ ವೇಳೆ ಗಡಿಯಲ್ಲಿ ನಡೆದ 400 ಕೋಟಿ ದರೋಡೆ ಪ್ರಕರಣದ ಬಗ್ಗೆ ಅವರು ಆಘಾತ ವ್ಯಕ್ತಪಡಿಸಿದರು. “400 ಕೋಟಿಯ ವಿಚಾರ ಕೇಳಿ ನನ್ನ ಎದೆ ಜಲ್ ಎಂದಿತ್ತು. ನಾನು ಕನಸಿನಲ್ಲೂ 400 ಕೋಟಿ ಊಹಿಸಿಲ್ಲ. ಆದರೆ ನಮ್ಮ ಪೊಲೀಸರು ಚೇಸ್ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ. ಅವರಿಗೆ ಅಭಿನಂದನೆಗಳು. ಆ ಹಣ ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿತ್ತು, ಯಾರಿಗೆ ಸಂಬಂಧಪಟ್ಟಿತ್ತು ಎಂಬುದು ತನಿಖೆಯಿಂದ ಹೊರ ಬರಲಿ” ಎಂದು ಹೇಳಿದರು. 

Latest News