ರಾಜಭವನದಲ್ಲೊಂದು ಬಿಗ್ ಟ್ವಿಸ್ಟ್ : ಗವರ್ನರ್ ಇಲ್ಲದ ಕಾರಣ ವಿಶೇಷ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ ಸಿದ್ದರಾಮಯ್ಯ!!

ಕಳೆದ ಕೆಲವು ದಿನಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಕರ್ನಾಟಕದ 'ಸಿಎಂ ಕುರ್ಚಿ ಕದನ' ಕೊನೆಗೂ ಅಧಿಕೃತವಾಗಿ ಮುಕ್ತಾಯವಾಗಿದೆ. ಹೈಕಮಾಂಡ್ ಸರಣಿ ಸಭೆಗಳು, ದಿಲ್ಲಿ ನಾಯಕರ ತಂತ್ರ-ಪ್ರತಿತಂತ್ರಗಳು ಹಾಗೂ ರಾಜ್ಯ ರಾಜಕೀಯದ ತೀವ್ರ ಊಹಾಪೋಹಗಳಿಗೆ ಇವತ್ತು ಫುಲ್ ಸ್ಟಾಪ್ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ತಮ್ಮ ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ಸಾಗಿದ್ದ ಅವರ ಎರಡನೇ ಅವಧಿಯ ಆಡಳಿತ ವೈಭವಕ್ಕೆ ತೆರೆ ಬಿದ್ದಿದೆ.

ಕೊನೆಗೂ ಮುಗೀತು ಹೈಡ್ರಾಮಾ : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ!
ಕೊನೆಗೂ ಮುಗೀತು ಹೈಡ್ರಾಮಾ : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ!

ಆದರೆ, ಈ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆಯಲ್ಲೂ ಒಂದು ಟ್ವಿಸ್ಟ್ ಎದುರಾಗಿದೆ!

ರಾಜಭವನದಲ್ಲೊಂದು ಟ್ವಿಸ್ಟ್: ರಾಜ್ಯಪಾಲರಿಲ್ಲದ ಕಾರಣ ವಿಶೇಷ ಕಾರ್ಯದರ್ಶಿಗೆ ಲೆಟರ್!

ಇಂದು ಮಧ್ಯಾಹ್ನ ಸಿದ್ದರಾಮಯ್ಯ ಅವರು ಸೀದಾ ಲೋಕಭವನಕ್ಕೆ ಆಗಮಿಸಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಆದರೆ, ಸದ್ಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಧ್ಯಪ್ರದೇಶದ ಇಂದೋರ್ ಪ್ರವಾಸದಲ್ಲಿರುವ ಕಾರಣ, ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯಾದ ಪ್ರಭು ಶಂಕರ್ ಅವರಿಗೆ ಹಸ್ತಾಂತರಿಸಿದ್ದಾರೆ.

ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ಮುಖ್ಯಮಂತ್ರಿಯೊಬ್ಬರ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗುತ್ತದೆ. ಸರ್ಕಾರದ ಮೂಲಗಳ ಪ್ರಕಾರ, ರಾಜ್ಯಪಾಲರು ಇಂದು ರಾತ್ರಿ 7:30ಕ್ಕೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ. ಹಾಗಾಗಿ, ಅವರು ಮರಳಿದ ಬಳಿಕವಷ್ಟೇ ರಾಜೀನಾಮೆ ಅಂಗೀಕಾರದ ಔಪಚಾರಿಕ ಮತ್ತು ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

ಕೈ ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಮಾತಿಗೆ ಬೆಲೆ ಕೊಟ್ಟ ಸಣ್ಣವರ ಸಿದ್ದಣ್ಣ!

ಐದು ದಶಕಗಳ ಸುದೀರ್ಘ ರಾಜಕೀಯ ಚರಿತ್ರೆ ಹೊಂದಿರುವ, ದಣಿವರಿಯದ ಹೋರಾಟಗಾರ, ಕಟ್ಟಾ ಸಮಾಜವಾದಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಇವತ್ತಿಗೆ ಅಂತ್ಯ ಕಂಡಿದೆ. ಹೈಕಮಾಂಡ್‌ನ ಆಂತರಿಕ ಅಧಿಕಾರ ಹಂಚಿಕೆ ಸೂತ್ರದಂತೆ ಹಾಗೂ ನಾಯಕ ರಾಹುಲ್ ಗಾಂಧಿ ಅವರು ಕಳುಹಿಸಿದ್ದ ವಿಶೇಷ ಸಂದೇಶಕ್ಕೆ ಗೌರವ ನೀಡಿ, ಸಿದ್ದರಾಮಯ್ಯ ಅವರು ಯಾವುದೇ ಹಠಕ್ಕೆ ಬೀಳದೆ ಅತ್ಯಂತ ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಿಸೈನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

'ಕಾವೇರಿ' ನಿವಾಸದಲ್ಲಿ ಕಣ್ಣೀರಿಟ್ಟ ಸಚಿವರು
ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಕೊನೆಯ ಬ್ರೇಕ್‌ಫಾಸ್ಟ್‌ ಮೀಟಿಂಗ್!

ಇಂದು ಮಧ್ಯಾಹ್ನ ರಾಜೀನಾಮೆ ನೀಡುವ ಮುನ್ನ, ಸಿಎಂ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರ ಕೊನೆಯ ‘ಬ್ರೇಕ್‌ಫಾಸ್ಟ್‌ ಮೀಟಿಂಗ್’ (ಉಪಹಾರ ಸಭೆ) ನಡೆಯಿತು. ಈ ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಮಂತ್ರಿಗಳು ಮತ್ತು ಸಿದ್ದರಾಮಯ್ಯ ಅವರ ಆಪ್ತ ನಾಯಕರು ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಸಿದ್ದರಾಮಯ್ಯ ನಡೆಸಿದ ಸುದೀರ್ಘ ಹೋರಾಟದ ಪಯಣವನ್ನು ನೆನೆದು ಭಾರಿ ಭಾವುಕರಾದರು.

ಅನ್ನಭಾಗ್ಯ ಸೇರಿದಂತೆ ಬಡವರ ಹೊಟ್ಟೆ ತುಂಬಿಸಿದ ಸಿದ್ದರಾಮಯ್ಯ ಅವರ ನಿರ್ಧಾರಗಳನ್ನು ನೆನೆಸಿಕೊಂಡಾಗ ಹಲವು ಸಚಿವರ ಕಣ್ಣಾಲಿಗಳು ತೇವಗೊಂಡಿದ್ದವು. ಇಡೀ ಸಭೆಯಲ್ಲಿ ಮೌನ ಆವರಿಸಿದ್ದಾಗ, ಸಿದ್ದರಾಮಯ್ಯ ಅವರೇ ತಮ್ಮ ಸಹೋದ್ಯೋಗಿ ಮಂತ್ರಿಗಳಿಗೆ ಧೈರ್ಯ ತುಂಬಿದರು. ಎಲ್ಲರಿಗೂ ಧನ್ಯವಾದ ತಿಳಿಸಿ, ಮಧ್ಯಾಹ್ನದ ಊಟ ಮುಗಿಸಿದ ನಂತರ ಲೋಕಭವನಕ್ಕೆ ತೆರಳಿ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದರು.

ಸಿದ್ದರಾಮಯ್ಯ ಅವರ ಈ ನಿರ್ಗಮನದೊಂದಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಈಗ ಮತ್ತೊಂದು ಹೊಸ ಶಕೆ ಆರಂಭವಾಗುತ್ತಿದೆ. ಇಷ್ಟು ದಿನ ಸಿದ್ದರಾಮಯ್ಯ-ಡಿಕೆಶಿ ಜೋಡಿಯಾಗಿ ಸರ್ಕಾರ ನಡೆಸಿದ್ದ ಗರಿಮೆಗೆ ಈಗ ಬ್ರೇಕ್ ಬಿದ್ದಿದ್ದು, ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪಟ್ಟಕ್ಕೇರುವುದು ಕನ್ಫರ್ಮ್ ಆಗಿದೆ. ಸಿದ್ದರಾಮಯ್ಯ ಅವರ ಈ ಭಾವುಕ ವಿದಾಯದ ಬಳಿಕ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಯಾವಾಗ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮತ್ತು ಅವರ ಸಂಪುಟ ಹೇಗಿರಲಿದೆ ಎಂಬ ಕುತೂಹಲ ಈಗ ಇಡೀ ರಾಜ್ಯದ ಜನರಲ್ಲಿ ಮನೆಮಾಡಿದೆ.

Latest News