ಸಿಲಿಂಡರ್ ಬೆಲೆ ಏರಿಕೆ 'ಶರಣಾಗತಿಯ ಫಲ': ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಟೀಕೆ
ಕೇಂದ್ರ ಸರ್ಕಾರವು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 60 ರೂಪಾಯಿಗಳಷ್ಟು ಹೆಚ್ಚಿಸಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ಈಗಾಗಲೇ ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಈ ನಿರ್ಧಾರವು 'ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ' ಎಂದು ಅವರು ಬಣ್ಣಿಸಿದ್ದಾರೆ. ಮೈಸೂರು ತಾಲೂಕಿನ ಪಿಲ್ಲಹಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ದರ ಏರಿಕೆಯು ಅನಿವಾರ್ಯವಾಗಿರಲಿಲ್ಲ, ಬದಲಿಗೆ ಇದು ಕೇಂದ್ರದ ತಪ್ಪು ವಿದೇಶಾಂಗ ನೀತಿಯ ಫಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯು ಕೇವಲ ಪ್ರದರ್ಶನದ ವಸ್ತುವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. ಅಮೆರಿಕದ ಮಾತುಗಳಿಗೆ ಮರುಳಾಗಿ ಭಾರತದ ವ್ಯೂಹಾತ್ಮಕ ಸ್ವಾತಂತ್ರ್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಡಲಾಗಿದೆ. ಇದರಿಂದಾಗಿ ರಷ್ಯಾ ಮತ್ತು ಇರಾನ್‌ನಂತಹ ದೇಶಗಳೊಂದಿಗೆ ಭಾರತ ಹೊಂದಿದ್ದ ದೀರ್ಘಕಾಲೀನ ಇಂಧನ ಸಹಭಾಗಿತ್ವಕ್ಕೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದರು.
ಜವಾಹರಲಾಲ್ ನೆಹರೂ ಅವರ 'ವಿದೇಶಾಂಗ ನೀತಿಯು ಆರ್ಥಿಕ ನೀತಿಯ ಪರಿಣಾಮ' ಎಂಬ ಮಾತು ಇಂದು ಅಕ್ಷರಶಃ ಸತ್ಯವಾಗಿದೆ ಎಂದು ಅವರು ಸ್ಮರಿಸಿದರು. ಅಲ್ಲದೆ, ಮಾಜಿ ಸೇನಾಧಿಕಾರಿ ಜನರಲ್ ಎಂ.ಎಂ. ನರವಣೆ ಅವರು ವ್ಯಕ್ತಪಡಿಸಿದ್ದ ಆತಂಕದ ಮಾತುಗಳನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರಕ್ಕೆ ರಾಜತಾಂತ್ರಿಕ ತಿಳಿವಳಿಕೆಯ ಕೊರತೆ ಇದೆ ಎಂದು ದೂರಿದರು.
ಕೇಂದ್ರ ಸರ್ಕಾರದ ಸಾಲದ ಪ್ರಮಾಣದ ಬಗ್ಗೆಯೂ ಅಂಕಿಅಂಶಗಳನ್ನು ನೀಡಿದ ಸಿದ್ದರಾಮಯ್ಯ, ಪ್ರಸ್ತುತ ದೇಶದ ಸಾಲ ₹218 ಲಕ್ಷ ಕೋಟಿಗೆ ತಲುಪಿದೆ ಎಂದು ತಿಳಿಸಿದರು. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ₹165 ಲಕ್ಷ ಕೋಟಿ ಸಾಲ ಮಾಡಿದ್ದಾರೆ, ಇದು ಜಿಡಿಪಿಯ ಶೇ. 55.6ರಷ್ಟಿದೆ ಎಂದು ಗಂಭೀರ ಆರೋಪ ಮಾಡಿದರು. ರಾಜ್ಯದ ಬಜೆಟ್ ಮೇಲಿನ ಬಿಜೆಪಿಯ ಟೀಕೆಗೆ ಉತ್ತರಿಸಿದ ಅವರು, ಅಭಿವೃದ್ಧಿಗಾಗಿ ಸಾಲ ಮಾಡುವುದು ಅನಿವಾರ್ಯ, ಆದರೆ ರಾಜ್ಯದ ಸಾಲವು ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಮಿತಿಯೊಳಗೇ ಇದೆ ಎಂದು ಸ್ಪಷ್ಟಪಡಿಸಿದರು.
ಭಾರತದ ವಿದೇಶಾಂಗ ನೀತಿಯ ವೈಫಲ್ಯಕ್ಕೆ ಕೋಟ್ಯಂತರ ಭಾರತೀಯರು ಬೆಲೆ ತೆರುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಪ್ರಧಾನಿ ಮೋದಿಯವರು ಬಹಿರಂಗವಾಗಿ ಜನರ ಕ್ಷಮೆಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು. "ಅಧಿಕಾರವು ಬಲಾಢ್ಯರ ಕೈಯಲ್ಲಿ ಇರಬಾರದು, ಅದು ಎಲ್ಲರನ್ನು ಸಮಾನವಾಗಿ ಕಾಣುವವರ ಕೈಯಲ್ಲಿ ಇರಬೇಕು" ಎಂದು ಹೇಳುವ ಮೂಲಕ ತಮ್ಮ ಆಡಳಿತದ ಸಿದ್ಧಾಂತವನ್ನು ಪುನರುಚ್ಚರಿಸಿದರು.