ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆಗೆ ಸರ್ಕಾರ ಖರ್ಚು ಮಾಡಿದ್ದೆಷ್ಟು? ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದ ಸಿದ್ದರಾಮಯ್ಯ!!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ‘ಸ್ಟೀರಿಂಗ್ ಕರ್ನಾಟಕ ಅಭಿವೃದ್ಧಿಯತ್ತ’ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ದೇಶದ ಆಡಳಿತವನ್ನು ನಾವು ಅನಕ್ಷರಸ್ಥ ಮತ್ತು ಕ್ರೂರ ಕೈಗಳಿಗೆ ಒಪ್ಪಿಸಿದ್ದೇವೆ ಅನ್ನೋದನ್ನು ನೆನೆಸಿಕೊಂಡರೆನೇ ನಡುಕ ಉಂಟಾಗುತ್ತೆ" ಎಂದು ಸಿದ್ದರಾಮಯ್ಯ ಅತ್ಯಂತ ಖಾರವಾಗಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಭೀಕರ ವಾಗ್ದಾಳಿ!
ಪ್ರಧಾನಿ ಮೋದಿ ವಿರುದ್ಧ ತುಮಕೂರಿನಲ್ಲಿ ಸಿಎಂ ಸಿದ್ದರಾಮಯ್ಯ ಭೀಕರ ವಾಗ್ದಾಳಿ!

ಇದೇ ವೇಳೆ ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 682 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕೆಲಸಗಳಿಗೆ ಸಿಎಂ ಚಾಲನೆ ನೀಡಿದರು. ಪ್ರಧಾನಿ ಮೋದಿ ಅವರ ‘ಗುಜರಾತ್ ಮಾಡೆಲ್’ ಸಂಪೂರ್ಣ ಟೊಳ್ಳು, ನಮ್ಮ ಕಲ್ಯಾಣ ಆಧಾರಿತ ‘ಕರ್ನಾಟಕ ಮಾಡೆಲ್’ ದೇಶಕ್ಕೇ ಬೆಸ್ಟ್ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

"ಬಾಡಿಗೆ ಕಟ್ಟಲಾಗದ ರಾಜ್ಯದಲ್ಲಿ ಕಾರ್ಪೊರೇಟ್‌ಗಳಿಗೆ ಅಗ್ಗದ ದರಕ್ಕೆ ಭೂಮಿ!"

ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರದ ಘೋರ ಘಟನೆಯನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, "ತಿಂಗಳಿಗೆ ಕೇವಲ 2,000 ರೂಪಾಯಿ ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳ ಮೇಲೆ ಅತ್ಯಾಚಾರ ಮಾಡಲು ಬಿಟ್ಟಿದ್ದಾನೆ ಅಂದರೆ ಗುಜರಾತ್‌ನಲ್ಲಿ ಸಾಮಾನ್ಯ ಜನರ ಬದುಕು ಎಷ್ಟು ದಾರುಣವಾಗಿದೆ ನೋಡಿ. ಮೋದಿ ಅವರು 2001 ರಿಂದ 2014 ರವರೆಗೆ ಅಲ್ಲಿ ಸಿಎಂ ಆಗಿದ್ದರು, ಈಗ ಪ್ರಧಾನಿಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಮೋದಿ ಮತ್ತು ಅಮಿತ್ ಶಾ ಅವರೇ ಆ ರಾಜ್ಯವನ್ನು ಆಳುತ್ತಿದ್ದಾರೆ. ಆದರೆ ಅಲ್ಲಿ ಬಡವರಿಗೆ ಬದುಕಲು ಯೋಗ್ಯವಾದ ವಾತಾವರಣ ಇಲ್ಲ. ಬಡವರಿಗೆ ತಿಂಗಳಿಗೆ 2,000 ರೂಪಾಯಿ ಬಾಡಿಗೆ ಕಟ್ಟಲು ಯೋಗ್ಯತೆ ಕೊಡದ ಇವರು, ಅದಾನಿ ಗ್ರೂಪ್‌ನಂತಹ ದೊಡ್ಡ ಕಂಪನಿಗಳಿಗೆ ಪ್ರತಿ ಚದರ ಮೀಟರ್‌ಗೆ ಕೇವಲ 1 ರಿಂದ 32 ರೂಪಾಯಿಯಂತೆ ಭರ್ಜರಿ 15,946 ಎಕರೆ ಭೂಮಿಯನ್ನು ದಾರೆ ಎರೆದಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.

ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಗೆ ಮೋದಿ ನೀತಿಗಳೇ ಕಾರಣ!

ಹಣದುಬ್ಬರ ಬಿಸಿ: ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ನಿರುದ್ಯೋಗ, ಹಣದುಬ್ಬರ ಮತ್ತು ಇಂಧನ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಸಾಮಾನ್ಯ ಜನರು ಬದುಕು ನಡೆಸುವುದು ಕಷ್ಟವಾಗಿದೆ ಎಂದರು. ಮೋದಿಯವರ ತಪ್ಪು ನಿರ್ಧಾರಗಳಿಂದಾಗಿಯೇ ಇವತ್ತು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ (LPG) ಬೆಲೆಗಳು ಆಕಾಶ ಮುಟ್ಟಿವೆ. ಇತ್ತೀಚಿನ ತಿಂಗಳುಗಳಲ್ಲಂತೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದು, ವ್ಯಾಪಾರಸ್ಥರು ಮತ್ತು ಮಧ್ಯಮ ವರ್ಗದವರು ಕಂಗಾಲಾಗಿದ್ದಾರೆ ಎಂದು ಕಿಡಿಕಾರಿದರು.

ಹಾಗೆಯೇ, 2019 ರಿಂದ 2023 ರವರೆಗೆ ಕರ್ನಾಟಕದಲ್ಲಿದ್ದ ಹಳೇ ಬಿಜೆಪಿ ಸರ್ಕಾರ ಕೇವಲ ದ್ವೇಷವನ್ನು ಹರಡಿತು ಮತ್ತು ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿತು ಎಂದು ಸಿದ್ದರಾಮಯ್ಯ ತರಾಟೆಗೆ ತಗೆದುಕೊಂಡರು.

1.40 ಲಕ್ಷ ಕೋಟಿ ಗ್ಯಾರಂಟಿ ಹಂಚಿಕೆ: ಮಧ್ಯವರ್ತಿಗಳಿಲ್ಲ, ಭ್ರಷ್ಟಾಚಾರವಿಲ್ಲ!

ತಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ತೆರೆದಿಟ್ಟ ಮುಖ್ಯಮಂತ್ರಿಗಳು, "ನಾವು ಚುನಾವಣೆಗೆ ಮುನ್ನ ಜನರಿಗೆ ಕೊಟ್ಟ ಪ್ರತಿಯೊಂದು ಭರವಸೆಯನ್ನು ಈಡೇರಿಸಿದ್ದೇವೆ. ನಮ್ಮ ಐದು ಗ್ಯಾರಂಟಿ ಯೋಜನೆಗಳಿಗಾಗಿ 2023 ರಿಂದ ಇಂದಿನವರೆಗೆ ಬರೋಬ್ಬರಿ 1,40,233 ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗೆ ಹಾಕಿದ್ದೇವೆ" ಎಂದರು. ಗ್ಯಾರಂಟಿ ಯೋಜನೆಗಳ ಕಂಪ್ಲೀಟ್ ಲೆಕ್ಕಾಚಾರ ಹೀಗಿದೆ:

ಗೃಹಲಕ್ಷ್ಮಿ ಯೋಜನೆ: ಮಹಿಳೆಯರ ಖಾತೆಗೆ ಬಿದ್ದ ಒಟ್ಟು ಮೊತ್ತ 75,164 ಕೋಟಿ ರೂ.

ಗೃಹ ಜ್ಯೋತಿ (ಉಚಿತ ವಿದ್ಯುತ್): 30,080 ಕೋಟಿ ರೂ.

ಅನ್ನ ಭಾಗ್ಯ (ಉಚಿತ ಅಕ್ಕಿ): 19,974 ಕೋಟಿ ರೂ.

ಶಕ್ತಿ ಯೋಜನೆ (ಉಚಿತ ಬಸ್ ಪ್ರಯಾಣ): 14,015 ಕೋಟಿ ರೂ.

ಯುವ ನಿಧಿ (ನಿರುದ್ಯೋಗ ಭತ್ಯೆ): 1,001 ಕೋಟಿ ರೂ.

ಈ ಯೋಜನೆಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ, ಒಬ್ಬನೇ ಒಬ್ಬ ಮಧ್ಯವರ್ತಿಗೂ ಜಾಗ ಕೊಟ್ಟಿಲ್ಲ. ಗ್ಯಾರಂಟಿ ಹಣ ನೇರವಾಗಿ ಫಲಾನುಭವಿಗಳ ಕೈ ಸೇರುತ್ತಿದೆ ಎಂದು ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.

ರೈತರು ಮತ್ತು ಸಾಮಾಜಿಕ ಭದ್ರತೆಗೆ ಮೊದಲ ಆದ್ಯತೆ

ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಮಾತ್ರವಲ್ಲದೆ, ರೈತರ ಸಬ್ಸಿಡಿ, ಬರ ಪರಿಹಾರ, ಪ್ರವಾಹ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರಗಳಿಗಾಗಿ ಕೃಷಿ ವಲಯಕ್ಕೆ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರ ಜೊತೆಗೆ ವಿಧವೆಯರು, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಸಾಮಾಜಿಕ ಪಿಂಚಣಿ ಯೋಜನೆಗಳಿಗಾಗಿ ವಾರ್ಷಿಕವಾಗಿ 11,000 ದಿಂದ 12,000 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ನಮ್ಮದು ಬಡವರ, ದೀನದಲಿತರ ಮತ್ತು ರೈತರ ಪರವಾಗಿರುವ ಸರ್ಕಾರ ಎಂದು ಸಿದ್ದರಾಮಯ್ಯ ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು.

Latest News