2026-27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂತ್ರಜ್ಞಾನ ವಲಯಕ್ಕೆ ನೀಡಿರುವ ಒತ್ತು ರಾಜ್ಯದ ಆರ್ಥಿಕತೆಗೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕವನ್ನು ಜಾಗತಿಕ ತಾಂತ್ರಿಕ ನಾಯಕನಾಗಿ ಉಳಿಸಿಕೊಳ್ಳಲು ಸರ್ಕಾರ ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಯೋಜನೆಗಳನ್ನು ಘೋಷಿಸಿದೆ.
ಇದರ ಪ್ರಮುಖ ಭಾಗವಾಗಿ, ಇಸ್ರೋ (ISRO) ಮತ್ತು ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (KEONICS) ಸಹಯೋಗದೊಂದಿಗೆ ಬೆಂಗಳೂರಿನಲ್ಲಿ "ರೊಬೊಟಿಕ್ಸ್ ಮತ್ತು AI ಕ್ಯಾಂಪಸ್" ಸ್ಥಾಪನೆಯಾಗಲಿದೆ. ಈ ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್, ಐಐಎಸ್‌ಸಿ (IISc) ಯ ಆಶ್ರಯದಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಸಂಶೋಧನೆ ಮತ್ತು ನಾವೀನ್ಯತೆಗೆ ವೇದಿಕೆಯಾಗಲಿದೆ. ಇಷ್ಟೇ ಅಲ್ಲದೆ, ರಾಯಚೂರಿನ ಐಐಐಟಿ (IIIT) ಆವರಣದಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ AI ಗಾಗಿ ಪ್ರತ್ಯೇಕ 'ಎಕ್ಸಲೆನ್ಸ್ ಕೇಂದ್ರ' ಸ್ಥಾಪಿಸುವ ಮೂಲಕ ತಾಂತ್ರಿಕ ಶಿಕ್ಷಣವನ್ನು ಉತ್ತರ ಕರ್ನಾಟಕದ ಭಾಗಕ್ಕೂ ವಿಸ್ತರಿಸುವ ಪ್ರಯತ್ನ ಮಾಡಲಾಗಿದೆ.
ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ, ಇತರ ನಗರಗಳಿಗೂ ವಿಸ್ತರಿಸುವ ಮಹದೋದ್ದೇಶದೊಂದಿಗೆ ಮೈಸೂರನ್ನು ರಾಜ್ಯದ ಎರಡನೇ ಐಟಿ ನಗರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಮೈಸೂರಿನಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, 30,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಇದು ಆಶ್ರಯ ತಾಣವಾಗಿದೆ. ಈ ಬೆಳವಣಿಗೆಯನ್ನು ಮತ್ತಷ್ಟು ಚುರುಕುಗೊಳಿಸಲು ಸರ್ಕಾರ ಬದ್ಧವಾಗಿದೆ.
ತಾಂತ್ರಿಕ ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳ GCC ವಿಚಾರದಲ್ಲಿ ಕರ್ನಾಟಕ ದೇಶದ ಪ್ರಮುಖ ಕೇಂದ್ರವಾಗಿ ಮುಂದುವರಿದಿದೆ. ಸದ್ಯ ರಾಜ್ಯದಲ್ಲಿ 550ಕ್ಕೂ ಹೆಚ್ಚು ಜಿಸಿಸಿಗಳು ಕಾರ್ಯನಿರ್ವಹಿಸುತ್ತಿದ್ದು, 2029ರ ವೇಳೆಗೆ ಈ ಸಂಖ್ಯೆಯನ್ನು 500 ಹೊಸ ಜಿಸಿಸಿಗಳೊಂದಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ಸುಮಾರು 3.5 ಲಕ್ಷ ಜನರಿಗೆ ನೇರ ಉದ್ಯೋಗಾವಕಾಶಗಳು ದೊರೆಯುವ ನಿರೀಕ್ಷೆಯಿದೆ.
ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಇಂತಹ ವಿಕೇಂದ್ರೀಕೃತ ತಂತ್ರಜ್ಞಾನ ಬೆಳವಣಿಗೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ, ಈ ದೂರದೃಷ್ಟಿಯ ಯೋಜನೆಗಳು ರಾಜ್ಯದ ಯುವ ಪೀಳಿಗೆಗೆ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಕರ್ನಾಟಕದ ಜಿಡಿಪಿ ಬೆಳವಣಿಗೆಗೆ ಹೊಸ ವೇಗ ನೀಡಲಿವೆ.
ಈ ಬಜೆಟ್ ಡಿಜಿಟಲ್ ಆರ್ಥಿಕತೆಯ ಬಲವರ್ಧನೆ ಮತ್ತು ತಾಂತ್ರಿಕ ಆವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದ ಐಟಿ ಮತ್ತು ರೊಬೊಟಿಕ್ಸ್ ಹಬ್ ಆಗಿ ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ತಂತ್ರಜ್ಞಾನ ಕೇಂದ್ರಗಳು ಭವಿಷ್ಯದ ತಾಂತ್ರಿಕ ಅಗತ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ರಾಜ್ಯದ ಕೈಗಾರಿಕಾ ವಲಯದಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.