‘ಕರಾವಳಿ’ ಚಿತ್ರದ ವಿವಾದಕ್ಕೆ ಪ್ರಜ್ವಲ್ ದೇವರಾಜ್ ಪೂರ್ಣವಿರಾಮ - "ನನ್ನ ಧ್ವನಿ ಬೇಡ ಎಂದಿದ್ದು ನಿರ್ಮಾಣ ಸಂಸ್ಥೆಯೇ ಹೊರತು ನಾನಲ್ಲ!"

ಕನ್ನಡ ಚಿತ್ರರಂಗದ ಜನಪ್ರಿಯ ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಕರಾವಳಿ' ಚಿತ್ರದ ನಿರ್ಮಾಣ ಸಂಸ್ಥೆ ಮತ್ತು ನಟನ ನಡುವಿನ ವಿವಾದ ಇತ್ತೀಚೆಗೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು. ನಿರ್ದೇಶಕ ಗುರುದತ್ ಗಣಿಗ ಹಾಗೂ ನಿರ್ಮಾಣ ಸಂಸ್ಥೆಯ ಹೇಳಿಕೆಗಳ ಹಿನ್ನೆಲೆಯಲ್ಲಿ, ನಟ ಪ್ರಜ್ವಲ್ ದೇವರಾಜ್ ಇದೀಗ ಅಧಿಕೃತ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತೇಲುತ್ತಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಟ್ರೈಲರ್ ಲಾಂಚ್‌ಗೆ ಗೈರಾಗಿದ್ದರ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಡೈನಮಿಕ್ ಪ್ರಿನ್ಸ್ | Photo Credit: https://www.instagram.com/prajwaldevaraj/#
ಟ್ರೈಲರ್ ಲಾಂಚ್‌ಗೆ ಗೈರಾಗಿದ್ದರ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಡೈನಮಿಕ್ ಪ್ರಿನ್ಸ್ | Photo Credit: https://www.instagram.com/prajwaldevaraj/#

ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ ನಟ ಪ್ರಜ್ವಲ್ ದೇವರಾಜ್ ಗೈರುಹಾಜರಾಗಿದ್ದು ದೊಡ್ಡ ಮಟ್ಟದ ಕುತೂಹಲಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರಮುಖ ಕಾರಣಗಳನ್ನು ವಿವರಿಸಿರುವ ಪ್ರಜ್ವಲ್, "ನನ್ನ ಯಾವುದೇ ಪೂರ್ವ ಮಾಹಿತಿ, ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ನನ್ನ ಪಾತ್ರಕ್ಕೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಲಾಗಿತ್ತು. ಅಲ್ಲದೆ, ನಟನಾಗಿ ನನಗೆ ಸಲ್ಲಬೇಕಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡು ಕಾರಣಗಳಿಗಾಗಿಯೇ ನಾನು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ" ಎಂದು ಹೇಳಿದ್ದಾರೆ.

ನಿರ್ದೇಶಕ ಗುರುದತ್ ಗಣಿಗ ಅವರು ಪ್ರಜ್ವಲ್ ಅವರ 'ಸಿಕ್ಸ್-ಪ್ಯಾಕ್' ಲುಕ್ ಅಥವಾ ದೈಹಿಕ ರೂಪಾಂತರದಿಂದಾಗಿ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಜ್ವಲ್, "ಈ ವಿಷಯಕ್ಕೂ ನನ್ನ ದೈಹಿಕ ರೂಪಾಂತರಕ್ಕೂ ಯಾವುದೇ ಸಂಬಂಧವಿಲ್ಲ. ಸಂಭಾವನೆ ಪಾವತಿಯಾಗದಿರುವುದು ಮತ್ತು ಅನುಮತಿಯಿಲ್ಲದೆ ಡಬ್ಬಿಂಗ್ ಮಾಡಿರುವುದು ಮಾತ್ರ ಈ ವಿವಾದಕ್ಕೆ ಮೂಲ ಕಾರಣ" ಎಂದು ಸ್ಪಷ್ಟನೆ ನೀಡಿದ್ದಾರೆ.

ಸಂಭಾವನೆಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಮೊದಲಿನಿಂದಲೂ ತಾವು ಸಹಕರಿಸಲು ಸಿದ್ಧವಿದ್ದೆ ಎಂದು ತಿಳಿಸಿದ್ದಾರೆ. "ಟ್ರೈಲರ್ ಬಿಡುಗಡೆಯಾದ ಮರುದಿನ ಜಿಎಸ್‌ಟಿ ಮೊತ್ತ ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು. ಆದರೆ, ಆ ತಕ್ಷಣವೇ ಗುರುದತ್ ಗಣಿಗ ಫಿಲ್ಮ್ಸ್ ವತಿಯಿಂದ ನನ್ನ ವ್ಯವಸ್ಥಾಪಕರಿಗೆ, 'ಇನ್ನು ಮುಂದೆ ನಿಮ್ಮ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ನಿಮ್ಮ ಭಾಗವಹಿಸುವಿಕೆ ಅಗತ್ಯವಿಲ್ಲ' ಎಂದು ತಿಳಿಸಲಾಯಿತು. ಹೀಗಾಗಿ, ಚಿತ್ರದ ಪ್ರಚಾರ ಮತ್ತು ಡಬ್ಬಿಂಗ್‌ನಿಂದ ನಾನು ಹೊರಗುಳಿದಿರುವುದು ನನ್ನ ಸ್ವಂತ ನಿರ್ಧಾರವಲ್ಲ, ಬದಲಾಗಿ ನಿರ್ಮಾಣ ಸಂಸ್ಥೆಯ ನಿರ್ಧಾರ" ಎಂದು ಪ್ರಜ್ವಲ್ ವಾಸ್ತವವನ್ನು ತೆರೆದಿಟ್ಟಿದ್ದಾರೆ.

"ನನ್ನ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಲಾಗಿದೆ. ಅವಕಾಶವನ್ನೇ ನೀಡದೆಯೇ ಇಂತಹ ಅಭಿಪ್ರಾಯ ವ್ಯಕ್ತಪಡಿಸುವುದು ಒಬ್ಬ ಕಲಾವಿದನಾಗಿ ನನಗೆ ನೋವುಂಟು ಮಾಡಿದೆ" ಎಂದು ಪ್ರಜ್ವಲ್ ತಮ್ಮ ಬೇಸರವನ್ನು ತೋಡಿಕೊಂಡಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಪಾರದರ್ಶಕವಾಗಿ ಮತ್ತು ವೃತ್ತಿಪರತೆಯಿಂದ ದುಡಿದಿರುವ ತಮಗೆ, ಇಂತಹ ಬೆಳವಣಿಗೆಗಳು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಕಹಿ ಅನುಭವವನ್ನು ನೀಡಿವೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ವಾಗ್ವಾದಕ್ಕೆ ಎಡೆಮಾಡಿಕೊಡದಂತೆ ನಟ ಪ್ರಜ್ವಲ್ ಅವರು, "ಈ ಹೇಳಿಕೆಯ ಮೂಲಕ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತಿದ್ದೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಯಾವುದೇ ಚರ್ಚೆ ಅಥವಾ ಪ್ರತಿಕ್ರಿಯೆ ನೀಡುವುದಿಲ್ಲ, ಇಲ್ಲಿಗೆ ಈ ಪ್ರಕರಣಕ್ಕೆ ಪೂರ್ಣ ವಿರಾಮ ಹಾಕುತ್ತಿದ್ದೇನೆ" ಎಂದು ಘೋಷಿಸಿದ್ದಾರೆ. ಒಬ್ಬ ನಟನಾಗಿ ತನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾಗಳಿಗೆ ಇರುತ್ತದೆ ಮತ್ತು ವ್ಯಕ್ತಿಗತ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಪರಿಶ್ರಮವನ್ನು ಮರೆಮಾಡಬಾರದು ಎಂಬುದು ತಮ್ಮ ದೃಢ ನಂಬಿಕೆ ಎಂದು ಅವರು ಹೇಳಿದ್ದಾರೆ.

ವಿವಾದದ ನಡುವೆಯೂ, ಸಿನಿಮಾ ಒಂದು ಕಲೆಯಾಗಿ ಉಳಿಯಬೇಕು ಎಂಬ ಸದಾಶಯದಿಂದ, 'ಕರಾವಳಿ' ಚಿತ್ರದ ಸಂಪೂರ್ಣ ತಂಡಕ್ಕೆ ಹೃದಯಪೂರ್ವಕ ಶುಭ ಹಾರೈಸಿದ್ದಾರೆ. "ನನ್ನ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸಬೇಕು. ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿಯನ್ನು ಪ್ರೋತ್ಸಾಹಿಸಬೇಕು" ಎಂದು ಅವರು ಮನವಿ ಮಾಡಿದ್ದಾರೆ.

ತಮ್ಮ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿರುವ ಪ್ರಜ್ವಲ್, ಪ್ರೇಕ್ಷಕರ ಪ್ರೀತಿಯೇ ತಮ್ಮ ದೊಡ್ಡ ಶಕ್ತಿ ಎಂದು ಪುನರುಚ್ಚರಿಸಿದ್ದಾರೆ. ವೃತ್ತಿಪರ ಘನತೆಯನ್ನು ಉಳಿಸಿಕೊಳ್ಳುತ್ತಲೇ, ನಟ ಪ್ರಜ್ವಲ್ ದೇವರಾಜ್ ಅವರು ನೀಡಿರುವ ಈ ಸ್ಪಷ್ಟನೆಯು ಅಭಿಮಾನಿಗಳ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Latest News