"ರಾಯರನ್ನು ಅಪಮಾನಿಸಿದವರು ಉದ್ಧಾರ ಆಗಲ್ಲ!" - ಅಂದು ನಟ ಜಗ್ಗೇಶ್ ಸಿದ್ದರಾಮಯ್ಯ ವಿರುದ್ಧ ನುಡಿದಿದ್ದ ಭವಿಷ್ಯ ನಿಜವಾಯ್ತಾ?

ಕರ್ನಾಟಕ ರಾಜಕೀಯದ ಹೈ-ಡ್ರಾಮಾದಲ್ಲಿ ಇವತ್ತು ಅತಿ ದೊಡ್ಡ ಕ್ಲೈಮ್ಯಾಕ್ಸ್ ದಿನ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ 28, ಗುರುವಾರ) ಮಧ್ಯಾಹ್ನ 3 ಗಂಟೆಗೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಕೊನೆಯವರೆಗೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ ಸಾಗಿದ ಈ ಕುರ್ಚಿ ಜಟಾಪಟಿ ಕೊನೆಗೂ ಗುರುವಾರವೇ ಮುಕ್ತಾಯವಾಗುತ್ತಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈಗ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಮತ್ತು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಿಗೂ (Rayaru) ಲಿಂಕ್ ಕಲ್ಪಿಸಿ ಭಾರಿ ಚರ್ಚೆಗಳು ನಡೀತಿವೆ!

ರಾಯರ ದಿನವಾದ ಗುರುವಾರವೇ ಸಿಎಂ ಕುರ್ಚಿ ಔಟ್!
ರಾಯರ ದಿನವಾದ ಗುರುವಾರವೇ ಸಿಎಂ ಕುರ್ಚಿ ಔಟ್!

ಹೌದು, ಸಿದ್ದರಾಮಯ್ಯ ಅವರು ಈ ಹಿಂದೆ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸಿದ ಘಟನೆಯನ್ನು ನೆನಪಿಸಿಕೊಳ್ಳುತ್ತಿರುವ ನೆಟ್ಟಿಗರು, "ರಾಯರ ದಿನವಾದ ಗುರುವಾರವೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಅಂದು ನಟ ಜಗ್ಗೇಶ್ ಹೇಳಿದ್ದ ಭವಿಷ್ಯ ಇವತ್ತು ಅಕ್ಷರಶಃ ನಿಜವಾಗಿದೆ" ಅಂತ ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ಅಷ್ಟಕ್ಕೂ ಅಂದು ಏನಾಗಿತ್ತು? ಆ 'ಗುರುವಾರದ ರಹಸ್ಯ' ಇಲ್ಲಿದೆ!

ವಿಷಯ ಏನೆಂದರೆ, ಇದೇ ವರ್ಷ ಜನವರಿ ತಿಂಗಳಲ್ಲಿ ಒಂದು ಘಟನೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಿಂದ ಹೊರಗೆ ಬಂದು ಕಾರಿನಲ್ಲಿ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಅಹವಾಲು ಪತ್ರಗಳನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಸಾರ್ವಜನಿಕರ ಸಾಲಿನಲ್ಲಿ ನಿಂತಿದ್ದ ರಾಯರ ಭಕ್ತನೊಬ್ಬ ಭಕ್ತಿಯಿಂದ ಸಿದ್ದರಾಮಯ್ಯ ಅವರಿಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಒಂದು ಸುಂದರವಾದ ಫೋಟೋವನ್ನು ಉಡುಗೊರೆಯಾಗಿ ನೀಡಲು ಮುಂದಾಗುತ್ತಾನೆ.

ಆದರೆ, ಫೋಟೋ ನೋಡುತ್ತಿದ್ದಂತೆ ಸಿದ್ದರಾಮಯ್ಯ ಅವರು ಸ್ವಲ್ಪ ಕೋಪದಿಂದಲೇ ಅದನ್ನು ಕೈಯಿಂದ ತಳ್ಳಿ, ಪಡೆದುಕೊಳ್ಳಲು ನಿರಾಕರಿಸುತ್ತಾರೆ. ಅದೇ ಸಮಯದಲ್ಲಿ ಪಕ್ಕದಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ 'ಚಾಣಕ್ಯ ನೀತಿ' ಎನ್ನುವ ಪುಸ್ತಕವನ್ನು ಕೊಟ್ಟಾಗ, ಸಿದ್ದರಾಮಯ್ಯ ಅದನ್ನು ಪ್ರೀತಿಯಿಂದ ಇಸ್ಕೊಂಡು ಕಾರಿನೊಳಗೆ ಇಟ್ಟುಕೊಳ್ಳುತ್ತಾರೆ. ರಾಯರ ಫೋಟೋವನ್ನು ಹೀಗೆ ಸಾರ್ವಜನಿಕವಾಗಿ ತಿರಸ್ಕರಿಸಿದ ವಿಡಿಯೋ ಅಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ದೊಡ್ಡ ವಿವಾದ ಸೃಷ್ಟಿಸಿತ್ತು.

"ಉದ್ಧಾರವಾದ ಇತಿಹಾಸವಿಲ್ಲ!" – ಅಂದು ಗುಡುಗಿದ್ದ ಜಗ್ಗೇಶ್

ಸಿದ್ದರಾಮಯ್ಯ ಅವರ ಈ ನಡವಳಿಕೆಗೆ ರಾಯರ ಪರಮ ಭಕ್ತ, ನಟ ಹಾಗೂ ಸಂಸದ ಜಗ್ಗೇಶ್ ಅವರು ಅಂದು ತೀವ್ರವಾಗಿ ಅಸಮಾಧಾನ ಹೊರಹಾಕಿದ್ದರು. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ ಭಾವುಕರಾಗಿ ಟ್ವೀಟ್ ಮಾಡಿದ್ದ ಜಗ್ಗೇಶ್, "ರಾಯರನ್ನು ಅಪಮಾನ ಮಾಡಿದ ಯಾರು ಉದ್ಧಾರವಾದ ಇತಿಹಾಸವಿಲ್ಲ" ಎಂದು ನೇರವಾಗಿಯೇ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು.

ಜಗ್ಗೇಶ್ ತಮ್ಮ ಪೋಸ್ಟ್‌ನಲ್ಲಿ, "ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಜಪ, ತಪ, ವೈರಾಗ್ಯ ಹಾಗೂ ಉಪವಾಸ ಮಾಡಿ ಸೇವೆ ಮಾಡುತ್ತಾರೆ. ಅಂತಹದ್ದರಲ್ಲಿ ಭಕ್ತಿಯಿಂದ ತಂದುಕೊಟ್ಟ ರಾಯರ ಫೋಟೋವನ್ನು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಇಡೀ ಬದುಕಿನಲ್ಲಿ ಕಂಡಿದ್ದು ಇದೇ ಮೊದಲು! ರಾಯರಿದ್ದಾರೆ, ಅವರು ಎದ್ದು ಬರುತ್ತಾರೆ. ಇವರ ರಾಜಕೀಯ ಯೋಗ ಕೊನೆಯಾಗುವ ದಿನಗಳು ಹತ್ತಿರ ಬಂದಿವೆ" ಎಂದು ಭವಿಷ್ಯ ನುಡಿದಿದ್ದರು.

ರಾಯರ ದಿನವಾದ ಗುರುವಾರವೇ ಯೋಗ ಕ್ಲೋಸ್!

ಜಗ್ಗೇಶ್ ಅಂದು ಹೇಳಿದ್ದ ಮಾತುಗಳನ್ನೇ ಇಟ್ಟುಕೊಂಡು ಜನ ಇವತ್ತು ಲಿಂಕ್ ಮಾಡುತ್ತಿದ್ದಾರೆ. "ಭಕ್ತಿಯಿಂದ ರಾಯರ ವಿಗ್ರಹ ಅಥವಾ ಮೃತ್ತಿಕೆಯನ್ನು ಯಾರಾದರೂ ಕೊಟ್ಟಾಗ ಅದನ್ನು ಭಕ್ತಿಯಿಂದಲೇ ಸ್ವೀಕರಿಸಬೇಕು. ಅದನ್ನು ತಿರಸ್ಕರಿಸಿದರೆ ಆ ವ್ಯಕ್ತಿಯ ರಾಜಕೀಯ ಹಾಗೂ ವೈಯಕ್ತಿಕ ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ ಎಂದರ್ಥ" ಎಂದು ಜಗ್ಗೇಶ್ ಅಂದು ಎಚ್ಚರಿಸಿದ್ದರು.

ಕಾಕತಾಳೀಯ ಎಂಬಂತೆ, ಇವತ್ತು ರಾಯರ ಆರಾಧನೆಯ ದಿನವಾದ 'ಗುರುವಾರವೇ' ಸಿದ್ದರಾಮಯ್ಯ ಅವರು ಮನಸ್ಸಿಲ್ಲದ ಮನಸ್ಸಿನಿಂದ, ಹೈಕಮಾಂಡ್ ಒತ್ತಡಕ್ಕೆ ಮಣಿದು ತಮ್ಮ ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಿಸೈನ್ ಮಾಡುತ್ತಿದ್ದಾರೆ. ಇದನ್ನೇ ನೆಟ್ಟಿಗರು "ರಾಯರ ಶಾಪ ಸುಮ್ಮನೆ ಬಿಡಲ್ಲ, ಗುರುವಾರವೇ ಸಿದ್ದರಾಮಯ್ಯ ಅವರ ಪವರ್ ಮುಗಿದು ಹೋಯ್ತು" ಎಂದು ಕಮೆಂಟ್ ಮಾಡುತ್ತಿದ್ದಾರೆ.

ಹೈಕಮಾಂಡ್ ಸೂತ್ರದಂತೆ ಡಿಕೆಶಿಗೆ ಅಧಿಕಾರ ಹಸ್ತಾಂತರ ಆಗುತ್ತಿರುವುದು ನಿಜವೇ ಇರಬಹುದು. ಆದರೆ ಸಾರ್ವಜನಿಕ ವಲಯದಲ್ಲಿ ಮಾತ್ರ, ಅಂದು ಸಿದ್ದರಾಮಯ್ಯ ರಾಯರಿಗೆ ಮಾಡಿದ ಅಪಮಾನವೇ ಇವತ್ತು ಅವರ ಸಿಎಂ ಕುರ್ಚಿ ಕಳೆದುಕೊಳ್ಳಲು ಕಾರಣವಾಯ್ತು ಅನ್ನೋ ಚರ್ಚೆ ಸಖತ್ ಇಂಟರೆಸ್ಟಿಂಗ್ ಆಗಿ ಮುನ್ನಲೆಗೆ ಬಂದಿದೆ. ಜಗ್ಗೇಶ್ ಅಂದು ನುಡಿದಿದ್ದ ಆ ಖಡಕ್ ಭವಿಷ್ಯ ಇವತ್ತು ನಿಜವಾಗಿರುವುದಂತೂ ಹೌದು!

Latest News