ಸಿದ್ದು ರಾಜೀನಾಮೆ ಘೋಷಣೆ ಬೆನ್ನಲ್ಲೇ - ಕ್ಯಾಮೆರಾಗಳ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತ ಸಚಿವ ಸಂತೋಷ್ ಲಾಡ್!!

ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಇವತ್ತು ಅತ್ಯಂತ ಭಾವುಕ ಮತ್ತು ರೋಚಕ ದಿನ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಕರೆದಿದ್ದ ಹೈ-ವೋಲ್ಟೇಜ್ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ (Breakfast Meeting) ರಾಜೀನಾಮೆಯ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಇಡೀ ಸಚಿವ ಸಂಪುಟವೇ ಭಾವುಕ ಕಡಲಲ್ಲಿ ತೇಲುವಂತಾಗಿದೆ. ಈ ಸಭೆ ಮುಗಿಸಿ ಹೊರಬಂದ ಸಚಿವರೊಬ್ಬರು ಮಾಧ್ಯಮಗಳ ಮುಂದೆ ದುಃಖ ತಡೆಯಲಾರದೆ ಕಣ್ಣೀರು ಹಾಕಿದ ದೃಶ್ಯ ಈಗ ಇಡೀ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

"ಮಧ್ಯಾಹ್ನ 3 ಗಂಟೆಗೆ ಸಿಎಂ ರಿಸೈನ್ ಮಾಡ್ತಾರೆ..." | Photo Credit: https://twitter.com/ndtv

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಚಿವ ಸಂತೋಷ್ ಲಾಡ್!

ಸಿಎಂ ನಿವಾಸದಲ್ಲಿ ನಡೆದ ಮಹತ್ವದ ಸಭೆ ಮುಗಿದ ಬಳಿಕ ಸಚಿವರು ಒಬ್ಬೊಬ್ಬರಾಗಿ ಹೊರಗೆ ಬರುತ್ತಿದ್ದರು. ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ ಕಾರಿನಲ್ಲಿ ಕುಳಿತು ವಾಪಸ್ ತೆರಳುತ್ತಿದ್ದರು. ಕಾವೇರಿ ನಿವಾಸದ ಗೇಟ್ ಬಳಿ ಮಾಧ್ಯಮ ಪ್ರತಿನಿಧಿಗಳು ಅವರ ಕಾರನ್ನು ಅಡ್ಡಗಟ್ಟಿ, "ಸರ್, ಸಿಎಂ ಸಿದ್ದರಾಮಯ್ಯ ಅವರು ನಿಜವಾಗಿಯೂ ರಾಜೀನಾಮೆ ನೀಡ್ತಾರಾ? ಒಳಗಡೆ ಏನಾಯ್ತು?" ಎಂದು ಪ್ರಶ್ನೆ ಕೇಳಿದರು.

ಈ ಪ್ರಶ್ನೆ ಕೇಳುತ್ತಿದ್ದಂತೆ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರೋ ಸಂತೋಷ್ ಲಾಡ್ ಅವರಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಕ್ಯಾಮೆರಾಗಳ ಮುಂದೆಯೇ, ಕಾರಿನಲ್ಲಿ ಕುಳಿತಲ್ಲಿಯೇ ಅವರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಲು ಆರಂಭಿಸಿದರು. ಮಾಧ್ಯಮಗಳ ಸರಣಿ ಪ್ರಶ್ನೆಗಳಿಗೆ ಮುಖ ಮುಚ್ಚಿಕೊಂಡು ಅಳುತ್ತಲೇ, "ಇವತ್ತು ಮಧ್ಯಾಹ್ನ 3 ಗಂಟೆಗೆ ಸಿಎಂ ರಾಜೀನಾಮೆ ಕೊಡ್ತಾರೆ..." ಎಂದಷ್ಟೇ ಹೇಳಿ, ಕಣ್ಣೀರು ಒರೆಸಿಕೊಳ್ಳುತ್ತಾ ಅಲ್ಲಿಂದ ಹೊರಟು ಹೋದರು. ಈ ಭಾವುಕ ದೃಶ್ಯದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಸಚಿವರ ಸಭೆಯಲ್ಲಿ ಭಾವುಕರಾದ ಸಿದ್ದರಾಮಯ್ಯ: ಡಿಕೆಶಿಗೆ ಅಧಿಕಾರ!

ಇಷ್ಟು ದಿನ ನಡೀತಿದ್ದ ಎಲ್ಲ ರಾಜಕೀಯ ಊಹಾಪೋಹಗಳಿಗೆ ಮತ್ತು ಕುರ್ಚಿ ಜಟಾಪಟಿಗೆ ಸ್ವತಃ ಸಿದ್ದರಾಮಯ್ಯ ಅವರೇ ಇಂದಿನ ಸಭೆಯಲ್ಲಿ ತೆರೆ ಎಳೆದಿದ್ದಾರೆ. ಹೈಕಮಾಂಡ್ ಸೂಚನೆಯನ್ನು ಅತ್ಯಂತ ಗೌರವದಿಂದ ಒಪ್ಪಿಕೊಂಡಿರುವ ಅವರು, ತಾವಾಗಿಯೇ ಸಿಎಂ ಸ್ಥಾನ ಬಿಟ್ಟುಕೊಡಲು ಮುಂದಾಗಿದ್ದಾರೆ.

ಸಭೆಯ ಒಳಗಿನ ಮೂಲಗಳ ಪ್ರಕಾರ, ತಾವು ಪದತ್ಯಾಗ ಮಾಡುತ್ತಿರುವ ವಿಷಯವನ್ನು ಮತ್ತು ಮುಂದಿನ ಎರಡು ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸುವಾಗ ಖುದ್ದು ಸಿದ್ದರಾಮಯ್ಯ ಅವರೇ ಒಳಗಣ್ಣಿನಿಂದ ಭಾವುಕರಾಗಿದ್ದರು. ಈ ವೇಳೆ ಅವರು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಜನಪ್ರಿಯ ಜನಪರ ಯೋಜನೆಗಳು ಮತ್ತು ಸರ್ಕಾರದ ಸಾಧನೆಗಳನ್ನು ಭಾವುಕರಾಗಿ ಸ್ಮರಿಸಿಕೊಂಡರು.

ಅಷ್ಟೇ ಅಲ್ಲ, "ಮುಂಬರುವ ದಿನಗಳಲ್ಲಿ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಇರಲಿ. ಇದೇ ರೀತಿ ಜನಪರ ಆಡಳಿತವನ್ನು ಮುಂದುವರಿಸಿಕೊಂಡು ಹೋಗಿ" ಎಂದು ಸಚಿವ ಸಂಪುಟದ ಸದಸ್ಯರಿಗೆ ಕರೆ ನೀಡಿದರು. ಇದೇ ವೇಳೆ, "ವಿಪಕ್ಷಗಳ ಆಟ ಮುಂದುವರಿಯುತ್ತದೆ, ಹಾಗಾಗಿ ಎಲ್ಲರೂ ಬಿಜೆಪಿಯ ರಾಜಕಾರಣದ ಬಗ್ಗೆ ಎಚ್ಚರಿಕೆಯಿಂದ ಇರಬೇಕು" ಎಂದು ಸಚಿವರಿಗೆ ಕಿವಿಮಾತು ಹೇಳಿದರು.

ಸಿದ್ದು ರಾಜ್ಯಸಭೆಗೆ ಹೋಗಲ್ಲ, ಡಿಕೆಶಿ ಮುಂದಿನ ಸಿಎಂ: ಎಚ್.ಕೆ. ಪಾಟೀಲ್ ಖಚಿತ

ಮತ್ತೊಂದೆಡೆ ಸಭೆ ಮುಗಿಸಿ ಬಂದ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ಹಂಚಿಕೊಂಡರು. "ಇವತ್ತು ಮಧ್ಯಾಹ್ನ ಮೂರು ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಗ್ಯಾರಂಟಿ. ಆದರೆ ಕೆಲವರು ಹರಡುತ್ತಿರುವಂತೆ ಅವರು ದೆಹಲಿ ರಾಜಕಾರಣಕ್ಕೆ ಹೋಗುತ್ತಿಲ್ಲ, ರಾಜ್ಯಸಭೆಗೆ ಸ್ಪರ್ಧಿಸುವುದೂ ಇಲ್ಲ. ಡಿ.ಕೆ. ಶಿವಕುಮಾರ್ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಡಿಕೆಶಿ ಹೆಸರನ್ನು ಪ್ರಸ್ತಾಪಿಸಿದ್ದು, ಅದಕ್ಕೆ ನಮ್ಮ ಸಚಿವ ಸಂಪುಟದ ಎಲ್ಲ ಸದಸ್ಯರು ಒಮ್ಮತದಿಂದ ಒಪ್ಪಿಗೆ ನೀಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.

ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿದ್ದರೂ, ಸಿದ್ದರಾಮಯ್ಯ ಅವರ ಬಣದ ಸಚಿವರು ಮತ್ತು ಶಾಸಕರಿಗೆ ಸಿದ್ದು ಕುರ್ಚಿ ಬಿಡುತ್ತಿರುವುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಸಂತೋಷ್ ಲಾಡ್ ಮಾಧ್ಯಮಗಳ ಮುಂದೆಯೇ ಕಣ್ಣೀರು ಹಾಕಿದ್ದಾರೆ. ಇವತ್ತು ಮಧ್ಯಾಹ್ನ 3 ಗಂಟೆಗೆ ಸಿದ್ದರಾಮಯ್ಯ ರಾಜಭವನಕ್ಕೆ ಪತ್ರ ಕಳುಹಿಸುವ ಮೂಲಕ ಕರ್ನಾಟಕ ರಾಜಕೀಯದ ಒಂದು ದೊಡ್ಡ ಅಧ್ಯಾಯ ಮುಕ್ತಾಯಗೊಳ್ಳಲಿದ್ದು, ಡಿಕೆಶಿ ಅವರ ಹೊಸ ಆಡಳಿತ ಶುರುವಾಗಲಿದೆ!

Latest News