ಮದುವೆ ಅಂದಮೇಲೆ ಆ ಮನೆಯಲ್ಲಿ ಎಷ್ಟು ಕನಸುಗಳು, ಸಂಭ್ರಮಗಳು ಇರುತ್ತವೆ ಅಲ್ಲವೇ? ಹಸೆಮಣೆ ಏರಲು ದಿನ ಎಣಿಸುತ್ತಿದ್ದ ಯುವಕ, ಹೊಸ ಬಾಳಿಗೆ ಕಾಲಿಡುವ ಮುನ್ನವೇ ವಿಧಿಯಾಟಕ್ಕೆ ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯಲ್ಲಿ ನಡೆದ ಈ ಘಟನೆ ಕೇಳಿದರೆ ಕಲ್ಲಾದ ಮನಸ್ಸು ಕೂಡ ಕರಗದೇ ಇರದು.
ಮೃತಪಟ್ಟ ದುರ್ದೈವಿ ಹೆಸರು ಮನು ಎಲ್.ಎನ್. (29). ಇವರು ಲಕ್ಕುಂದ ಗ್ರಾಮದ ದರ್ಬಾರ್ ಪೇಟೆಯ ನಿವಾಸಿ. ಮನು ಅವರಿಗೆ ಇದೇ ಮೇ 10, 2026 ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ಇನ್ನು ಹತ್ತೇ ದಿನ ಬಾಕಿ ಇತ್ತು. ಮನೆಯಲ್ಲಿ ಅರಿಶಿನ ಶಾಸ್ತ್ರ, ಬಂಧು-ಮಿತ್ರರ ಆಮಂತ್ರಣ ಹೀಗೆ ಮದುವೆ ತಯಾರಿ ಜೋರಾಗಿ ನಡೆಯುತ್ತಿತ್ತು.
ಇಂದಿನ ಟ್ರೆಂಡ್‌ನಂತೆ ಮದುವೆಗೆ ಮುನ್ನ 'ಪ್ರೀವೆಡ್ಡಿಂಗ್ ಶೂಟ್' ಮಾಡಿಸಿಕೊಳ್ಳಲು ಮನು ಪ್ಲಾನ್ ಮಾಡಿದ್ದರು. ಅದರಂತೆ, ವಧುವನ್ನು ಕರೆತರಲು ಮನು ತಮ್ಮ ಕಾರಿನಲ್ಲಿ ಹೊರಟಿದ್ದರು. ಆದರೆ ಅದೇ ಅವರ ಜೀವನದ ಕೊನೆಯ ಪ್ರಯಾಣವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ನಿಯಂತ್ರಣ ತಪ್ಪಿದ ಕಾರು - ಸ್ಥಳದಲ್ಲೇ ಸಾ*ವು
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಹತ್ತಿರ ಮನು ಪ್ರಯಾಣಿಸುತ್ತಿದ್ದ ಕಾರು ಅತಿ ವೇಗದಿಂದ ಹೋಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಇದ್ದಕ್ಕಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರು ಅಪ್ಪಚ್ಚಿಯಾಗಿದ್ದು, ಮನು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಂದರ ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಿಸಬೇಕಿದ್ದ ಯುವಕ, ರ*ಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಸ್ಥಳೀಯರು ಕಣ್ಣೀರು ಹಾಕಿದ್ದಾರೆ.
"ಮಗ ಮದುವೆಯಾಗಿ ಮನೆಗೆ ಸೊಸೆಯನ್ನು ಕರೆತರುತ್ತಾನೆ" ಎಂದು ಕಾಯುತ್ತಿದ್ದ ಪೋಷಕರಿಗೆ ಮಗನ ಸಾ*ವಿನ ಸುದ್ದಿ ಕೇಳಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಮದುವೆ ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮಗನ ಶ*ವವನ್ನು ನೋಡಿ ಪೋಷಕರು ಹಾಕುತ್ತಿರುವ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಲಕ್ಕುಂದ ಗ್ರಾಮವೇ ಮನು ಸಾವಿಗೆ ಕಂಬನಿ ಮಿಡಿಯುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮದುವೆ ಎನ್ನುವ ಸಂಭ್ರಮದ ಘಳಿಗೆಯಲ್ಲಿ ಇಂತಹ ಅಪಘಾತ ಸಂಭವಿಸಿದ್ದು ನಿಜಕ್ಕೂ ದುರದೃಷ್ಟಕರ.