Jan 25, 2026 Languages : ಕನ್ನಡ | English

ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ!! ಕಾರು ಅಪಘಾತಕ್ಕೆ ಅದೊಂದು ಒಳ್ಳೆ ಕೆಲಸ ಮುಳುವಾಯ್ತಾ?

ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರು ದುರ್ಘಟನೆಯಲ್ಲಿ ಮೃತಪಟ್ಟಿರುವ ಸುದ್ದಿ ರಾಜ್ಯದಾದ್ಯಂತ ಆಘಾತ ಮೂಡಿಸಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಹಾಗೂ ಇಬ್ಬರು ಬಂಧುಗಳು ಪ್ರಾಣ ಕಳೆದುಕೊಂಡರು. ಮಹಾಂತೇಶ್ ಬೀಳಗಿ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಅವರು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿಯೂ, ದಾವಣಗೆರೆಯ ಜಿಲ್ಲಾಧಿಕಾರಿಯಾಗಿ ಹಾಗೂ ಧಾರವಾಡದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ
ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ

ಮಂಗಳವಾರ ಅವರು ತಮ್ಮ ಬಂಧುಗಳೊಂದಿಗೆ ರಾಮದುರ್ಗದಿಂದ ಕಲಬುರಗಿಗೆ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ ಈ ವೇಳೆ ಕಾರು ರಸ್ತೆ ಬದಿಯಲ್ಲಿ ಅಕಸ್ಮಾತ್‌ ಬಂದ ನಾಯಿಯನ್ನು ತಪ್ಪಿಸಲು ಪ್ರಯತ್ನಿಸಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳಿತು ಎಂದು ಕೇಳಿಬಂದಿದೆ. ಅಪಘಾತದಲ್ಲಿ ಮಹಾಂತೇಶ ಬೀಳಗಿ, ಶಂಕರ್ ಬೀಳಗಿ ಹಾಗೂ ಇರಣ್ಣ ಬೀಳಗಿ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮೃತಪಟ್ಟರು. ಮಹಾಂತೇಶ ಬೀಳಗಿ ಅವರ ನಿಷ್ಠಾವಂತ ಸೇವೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ಕಾರ್ಯಪದ್ಧತಿಗೆ ಅವರು ಹೆಸರುವಾಸಿಯಾಗಿದ್ದರು. ಅವರ ಅಕಾಲಿಕ ನಿಧನವು ರಾಜ್ಯದ ಆಡಳಿತ ವ್ಯವಸ್ಥೆಗೆ ದೊಡ್ಡ ನಷ್ಟವೆಂದು ಸಹೋದ್ಯೋಗಿಗಳು ಹಾಗೂ ಜನಪ್ರತಿನಿಧಿಗಳು ಅವರ ಅಗಲಿಕೆಯ  ವಿಷಯ ತಿಳಿದು ಸಂತಾಪ ಸೂಚಿಸಿದ್ದಾರೆ. 

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಸಂತಾಪ ಸೂಚಿಸಿ, ಮಹಾಂತೇಶ್ ಬೀಳಗಿ ಅವರ ಸೇವೆಯನ್ನು ಸ್ಮರಿಸಿದರು. ಈ ಘಟನೆ ರಸ್ತೆ ಸುರಕ್ಷತೆ ಹಾಗೂ ಅಲೆಮಾರಿ ಪ್ರಾಣಿಗಳ ನಿಯಂತ್ರಣದ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ. ಆದರೆ ಒಬ್ಬ ಪ್ರಾಮಾಣಿಕ ಅಧಿಕಾರಿಯ ಅಗಲಿಕೆ ನಿಜಕ್ಕೂ ರಾಜ್ಯಕ್ಕೆ ದೊಡ್ಡ ನಷ್ಟ ಎನ್ನಬಹುದು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ದುಃಖದ ಘಟನೆ ಸಹಿಸುವ ಶಕ್ತಿ ಆ ದೇವರು ನೀಡಲಿ ಎಂದು ಕೇಳಿಕೊಳ್ಳೋಣ.

Latest News