Mar 14, 2026 Languages : ಕನ್ನಡ | English

ಸ್ಕ್ರೀನ್ ಹಿಂದೆ ಕುಳಿತು ಜೇಬಿಗೆ ಕನ್ನ ಹಾಕ್ತಾರೆ - ಸೈಬರ್ ವಂಚನೆಗೆ ಕೇವಲ ಎರಡೇ ವರ್ಷದಲ್ಲಿ ₹468 ಕೋಟಿ ಹಣ ಮಟಾಶ್!!

ತಂತ್ರಜ್ಞಾನ ಬೆಳೆದಂತೆಲ್ಲಾ ವಂಚನೆಯ ರೂಪಗಳೂ ಬದಲಾಗುತ್ತಿವೆ. ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹಿಂದೆಂದೂ ಕಾಣದಷ್ಟು ಭೀಕರವಾಗಿ ಹೆಚ್ಚುತ್ತಿದ್ದು, ಕಳೆದ ಕೇವಲ ಎರಡು ವರ್ಷಗಳಲ್ಲಿ ಜನರು ಸುಮಾರು ₹468 ಕೋಟಿ ಹಣವನ್ನ ಕಳೆದುಕೊಂಡಿದ್ದಾರೆ ಎಂದು ಕೇಳಿ ಬಂದಿದೆ. ಈ ಅಂಕಿಅಂಶವು ಸಾರ್ವಜನಿಕರಲ್ಲಿ ಮತ್ತು ಆಡಳಿತ ಯಂತ್ರದಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

ಅಪರಿಚಿತ ಕರೆ, OTP ಹಂಚಿಕೆ – ಎಚ್ಚರಿಕೆ ಅಗತ್ಯ!!
ಅಪರಿಚಿತ ಕರೆ, OTP ಹಂಚಿಕೆ – ಎಚ್ಚರಿಕೆ ಅಗತ್ಯ!!

ಇತ್ತೀಚಿನ ವರ್ಷಗಳಲ್ಲಿ ವಂಚಕರು ಬಳಸುತ್ತಿರುವ ಅತ್ಯಂತ ಭಯಾನಕ ಅಸ್ತ್ರವೆಂದರೆ 'ಡಿಜಿಟಲ್ ಅರೆಸ್ಟ್'. ಕಳೆದ ಮೂರು ವರ್ಷಗಳಲ್ಲಿ ಇಂತಹ 1,695 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮೋಸಗಾರರು ಸಿಬಿಐ (CBI), ಪೊಲೀಸ್ ಅಥವಾ ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸುತ್ತಾರೆ. ನಿಮ್ಮ ಹೆಸರಿನಲ್ಲಿ ಮಾದಕ ದ್ರವ್ಯ ಬಂದಿದೆ ಅಥವಾ ಕಾನೂನು ಬಾಹಿರ ಕೃತ್ಯ ನಡೆದಿದೆ ಎಂದು ಹೆದರಿಸಿ, ವಿಡಿಯೋ ಕಾಲ್ ಮೂಲಕ ನಿಮ್ಮನ್ನು 'ವರ್ಚುವಲ್ ಬಂಧನ'ದಲ್ಲಿ ಇಡುತ್ತಾರೆ. ಭಯಭೀತರಾದ ಜನರನ್ನು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ.

ಪೊಲೀಸ್ ಇಲಾಖೆಯ ಬಿಗಿ ಕ್ರಮ

ಹೆಚ್ಚುತ್ತಿರುವ ಈ ಸೈಬರ್ ಹಾವಳಿಯನ್ನು ನಿಯಂತ್ರಿಸಲು ಕರ್ನಾಟಕ ಪೊಲೀಸರು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಬಂಧನ: ಇದುವರೆಗೆ ಸರಿಸುಮಾರು 500 ಸೈಬರ್ ಅಪರಾಧಿಗಳನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.
  • ಖಾತೆಗಳ ಸ್ಥಗಿತ: ಸೈಬರ್ ವಂಚನೆಗೆ ಬಳಸಲಾಗುತ್ತಿದ್ದ ಬರೋಬ್ಬರಿ 40 ಸಾವಿರ ನಕಲಿ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಫ್ರೀಜ್ (Freeze) ಮಾಡಲಾಗಿದೆ. ಇದು ಹಣದ ಚಲಾವಣೆಯ ಜಾಲವನ್ನು ಭೇದಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಸೈಬರ್ ಅಪರಾಧಗಳಿಂದ ಬಚಾವಾಗಲು ಜನರಲ್ಲಿ ಜಾಗೃತಿ ಅತ್ಯಗತ್ಯ. ಅಪರಿಚಿತರಿಂದ ಬರುವ ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ. ಯಾವುದೇ ಸರ್ಕಾರಿ ಅಧಿಕಾರಿಗಳು ಫೋನ್ ಮೂಲಕ ನಿಮ್ಮನ್ನು ಬಂಧಿಸುವುದಿಲ್ಲ ಅಥವಾ ಹಣ ಕೇಳುವುದಿಲ್ಲ ಎಂಬುದು ನೆನಪಿರಲಿ. ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಒಟಿಪಿ (OTP) ಹಂಚಿಕೊಳ್ಳುವುದು ಅಪಾಯಕಾರಿ. 

ನೀವು ವಂಚನೆಗೊಳಗಾದರೆ ಏನು ಮಾಡಬೇಕು?

ಒಂದು ವೇಳೆ ನೀವು ಹಣ ಕಳೆದುಕೊಂಡರೆ, ಕನಿಷ್ಠ ಸಮಯವನ್ನು ವ್ಯರ್ಥ ಮಾಡದೆ ಈ ಕೆಳಗಿನ ಕ್ರಮ ಕೈಗೊಳ್ಳಿ

  1. ಸಹಾಯವಾಣಿ ಸಂಖ್ಯೆ: ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿ.
  2. ವೆಬ್‌ಸೈಟ್: cybercrime.gov.in ಪೋರ್ಟಲ್‌ನಲ್ಲಿ ಅಧಿಕೃತ ದೂರು ಸಲ್ಲಿಸಿ. 

ಮೊದಲ 2 ಗಂಟೆಗಳು (Golden Hours) ಅತ್ಯಂತ ಪ್ರಮುಖವಾಗಿದ್ದು, ಈ ಸಮಯದಲ್ಲಿ ದೂರು ನೀಡಿದರೆ ಹಣ ಮರಳಿ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

Latest News