ನಗರಾಭಿವೃದ್ಧಿ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಇನ್ಮುಂದೆ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ. ಪಾರಿವಾಳಗಳ ತ್ಯಾಜ್ಯದಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಜಿಬಿಎ ಗುರುತಿಸಿರುವ ಸ್ಥಳಗಳಲ್ಲಿ ಮಾತ್ರ ಪಾರಿವಾಳಗಳಿಗೆ ಆಹಾರ ನೀಡಲು ಅನುಮತಿ ನೀಡಲಾಗಿದೆ. ಅದೂ ನಿಗದಿತ ಸಮಯದಲ್ಲಿ ಮಾತ್ರ ಆಹಾರ ಹಾಕಲು ಅವಕಾಶವಿದೆ. ನಿಯಮ ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 270, 271ರಂತೆ ಪ್ರಕರಣ ದಾಖಲಿಸಲು ಆದೇಶ ಹೊರಡಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿರುವಂತೆ, ನಿಯಮ ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡಿದವರಿಗೆ ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗುತ್ತದೆ. ದಂಡ ಹಾಕುವ ಜೊತೆಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಬಹುದು. ಈ ಮೂಲಕ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದರಿಂದ ಪಾರಿವಾಳಗಳು ದೊಡ್ಡ ಪ್ರಮಾಣದಲ್ಲಿ ಗುಂಪು ಸೇರುತ್ತವೆ. ಪಾರಿವಾಳಗಳ ರೆಕ್ಕೆಗಳು, ಅದರ ವಾಸನೆ ಹಾಗೂ ತ್ಯಾಜ್ಯದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ವೈದ್ಯಕೀಯ ತಜ್ಞರ ಪ್ರಕಾರ, ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳಿಂದ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುವ ಅತಿಸಂವೇದನಾ ನ್ಯುಮೋನಿಟಿಸ್ ಉಂಟಾಗುವ ಸಾಧ್ಯತೆ ಇದೆ.
ಮಕ್ಕಳು, ವೃದ್ಧರು ಮತ್ತು ಮೊದಲೇ ಉಸಿರಾಟದ ಸಮಸ್ಯೆ ಇರುವ ದುರ್ಬಲ ವ್ಯಕ್ತಿಗಳಲ್ಲಿ ಈ ಅಪಾಯ ಹೆಚ್ಚು ಎನ್ನಲಾಗಿದೆ. ಪಾರಿವಾಳ ತ್ಯಾಜ್ಯದಿಂದ ಉಂಟಾಗುವ ಶ್ವಾಸಕೋಶದ ಸಮಸ್ಯೆಗಳು ಗಂಭೀರವಾಗಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯಾಗಿದೆ.
ಪಾರಿವಾಳ ಪ್ರಿಯರಿಗೆ ಇದು ಶಾಕ್ ಆಗಿದ್ದರೂ, ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ನಿಗದಿತ ಸ್ಥಳ ಮತ್ತು ಸಮಯದಲ್ಲಿ ಮಾತ್ರ ಪಾರಿವಾಳಗಳಿಗೆ ಆಹಾರ ನೀಡಲು ಅನುಮತಿ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಪಾರಿವಾಳಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ.