ವಿಧಾನಮಂಡಲದ ಜಂಟಿ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ನಂತರ, ರಾಜ್ಯ ಸರ್ಕಾರವು ಈಗ ಬಜೆಟ್ ತಯಾರಿಕೆಗೆ ಸಂಪೂರ್ಣ ಗಮನ ಹರಿಸಿದೆ. ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್ ಪೂರ್ವಭಾವಿ ಸಭೆಗಳು ಇಂದು ಆರಂಭಗೊಂಡಿವೆ. ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಫೆಬ್ರವರಿ 5ರಂದು ವಿವಿಧ ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಬಜೆಟ್ ತಯಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಸುಮಾರು 10 ಪ್ರಮುಖ ಇಲಾಖೆಗಳೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಯಲಿದೆ.
ಇಂದು ನಡೆಯುತ್ತಿರುವ ಮೊದಲ ಹಂತದ ಸಭೆಗೆ ಅರಣ್ಯ, ಕಾನೂನು, ಪ್ರವಾಸೋದ್ಯಮ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಕಾರ್ಮಿಕ, ಒಳಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ, ಉನ್ನತ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಆಯಾ ಇಲಾಖೆಗಳ ಅಗತ್ಯಗಳು, ಯೋಜನೆಗಳು, ಅನುದಾನ ಬೇಡಿಕೆಗಳು ಮತ್ತು ಮುಂದಿನ ಸಾಲಿನ ಆದ್ಯತೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಜನಪರ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವ ಬಜೆಟ್ ರೂಪಿಸುವ ಉದ್ದೇಶದಿಂದ ಸಿಎಂ ಪ್ರತಿಯೊಂದು ಇಲಾಖೆಯ ಅಭಿಪ್ರಾಯಗಳನ್ನು ಆಲಿಸುತ್ತಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ, ಜನಸಾಮಾನ್ಯರ ಅಗತ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗುತ್ತಿದೆ. ವಿಧಾನಮಂಡಲ ಅಧಿವೇಶನ ಮುಕ್ತಾಯವಾದ ತಕ್ಷಣವೇ ಬಜೆಟ್ ಸಿದ್ಧತೆಗೆ ವೇಗ ನೀಡಿರುವ ಸರ್ಕಾರ, ಈ ಬಾರಿ ಜನಪರ ಬಜೆಟ್ ಮಂಡಿಸುವ ನಿರೀಕ್ಷೆ ವ್ಯಕ್ತವಾಗಿದೆ. ಸಿಎಂ ಸಿದ್ದರಾಮಯ್ಯ ಅವರ 17ನೇ ಬಜೆಟ್ ರಾಜ್ಯದ ಆರ್ಥಿಕತೆ ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.