Jan 25, 2026 Languages : ಕನ್ನಡ | English

2025-26 ಬಜೆಟ್‌ನಲ್ಲಿ ನೈಜ ಕೃಷಿಗೆ 1 ಕೋಟಿ ಅನುದಾನ - ಸಚಿವ ಎನ್.ಚಲುವರಾಯಸ್ವಾಮಿ ಈ ಬಗ್ಗೆ ಹೇಳಿದ್ದೇನು?

ರಾಜ್ಯದಲ್ಲಿ ನೈಜ ಕೃಷಿ ಮಾಡುವ ರೈತರಿಗೆ ರಾಜ್ಯ ಸರ್ಕಾರವು ಭರ್ಜರಿ ಸಂತಸದ ಸುದ್ದಿ ನೀಡಲು ಮುಂದಾಗಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದಂತೆ, ರಾಜ್ಯದಲ್ಲಿ ಶೇ.75ರಷ್ಟು ಸಣ್ಣ ಮತ್ತು ಅತೀ ಸಣ್ಣ ರೈತರು ಇದ್ದು, ಇವರನ್ನು ನೈಜ ಕೃಷಿಯತ್ತ ಒಲಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. ರೈತರಿಂದ ಬಂದ ಪ್ರಾಥಮಿಕ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಒದಗಿಸಿದಲ್ಲಿ ನೈಜ ಕೃಷಿ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಬಜೆಟ್‌ನಲ್ಲಿ 1 ಕೋಟಿ ರೂಪಾಯಿ ಅನುದಾನ ಒದಗಿಸಿ, ನೈಜ ಕೃಷಿ ಮಾಡುವ ರೈತರಿಗೆ ರಿಯಾಯಿತಿ ದರದಲ್ಲಿ ಪರಿಕರಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ರೈತರಿಗೆ ರಿಯಾಯಿತಿ ದರದಲ್ಲಿ ಸಾವಯವ ಪರಿಕರ – ಸಚಿವರ ಭರವಸೆ
ರೈತರಿಗೆ ರಿಯಾಯಿತಿ ದರದಲ್ಲಿ ಸಾವಯವ ಪರಿಕರ – ಸಚಿವರ ಭರವಸೆ

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜೀವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆ ಜಂಟಿಯಾಗಿ ಆಯೋಜಿಸಿದ ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಸಚಿವರು, ರಾಜ್ಯದ ಕೃಷಿ ಇಲಾಖೆಯು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕೆಂದು ಘೋಷಿಸಿರುವುದನ್ನು ನೆನಪಿಸಿದರು. ಸಾವಯವ ಕೃಷಿ ಪರಿಕರಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು, ಇದರಿಂದ ರಸಾಯನಿಕ ಪರಿಕರಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಹೌದು ರಾಜ್ಯದಲ್ಲಿ ಈಗಾಗಲೇ 990 ಕ್ಲಸ್ಟರ್‌ಗಳನ್ನು ಗುರುತಿಸಿ ನೈಜ ಕೃಷಿ ಕಾರ್ಯಕ್ರಮವನ್ನು ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳ ಮೂಲಕ ನೈಜ ಕೃಷಿ ಪ್ರಾತ್ಯಕ್ಷಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾವಯವ ಕ್ಷೇತ್ರಗಳ ಪ್ರಮಾಣಿಕರಣ, ರೈತರಿಗೆ ಉತ್ತಮ ಬೆಲೆ, ಮಾರುಕಟ್ಟೆಯೊಂದಿಗೆ ನೇರ ಸಂಪರ್ಕ — ಈ ಕ್ರಮಗಳನ್ನು ಕೈಗೊಂಡರೆ ನೈಜ ಕೃಷಿ ಕಾರ್ಯಕ್ರಮವು ಯಶಸ್ವಿಯಾಗಿ, ರೈತರ ಆದಾಯ ಹೆಚ್ಚಿಸುವುದಲ್ಲದೆ ಪರಿಸರ ಸಂರಕ್ಷಣೆಗೂ ಸಹಕಾರಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಮಹಿಳಾ ರೈತರಿಗೆ ವಿಶೇಷ ಒತ್ತು ನೀಡಲಾಗಿದೆ. ಕೃಷಿ ತಂತ್ರಜ್ಞಾನ, ನೈಸರ್ಗಿಕ ಕೃಷಿ ವಿಧಾನಗಳು ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ರಾಜ್ಯಾದ್ಯಂತ ಕೃಷಿ ಸಖಿಯರನ್ನು ನೇಮಿಸಲಾಗಿದೆ. ಇವರು ಸಂಜೀವಿನಿ ಯೋಜನೆಯಡಿ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ತರಬೇತಿ ಪಡೆದು, ಗ್ರಾಮೀಣ ಮಹಿಳೆಯರಿಗೆ ಕೃಷಿ ತರಬೇತಿ, ಕ್ಷೇತ್ರ ಪಾಠಶಾಲೆಗಳನ್ನು ಆಯೋಜಿಸಿ, ರೈತರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.

ಈ ಕ್ರಮಗಳು ರೈತರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದಲ್ಲದೆ, ಗ್ರಾಮೀಣ ಮಹಿಳೆಯರನ್ನು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುತ್ತವೆ. ಕೊನೆಗೆ, ನೈಜ ಕೃಷಿ ಕಾರ್ಯಕ್ರಮವು ಕೇವಲ ರೈತರ ಜೀವನಮಟ್ಟವನ್ನು ಸುಧಾರಿಸುವುದಲ್ಲ, ಪರಿಸರ ಸಂರಕ್ಷಣೆ, ಆರೋಗ್ಯಕರ ಆಹಾರ ಉತ್ಪಾದನೆ ಮತ್ತು ಗ್ರಾಮೀಣ ಸಮಾಜದ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.

Latest News