ಜನವರಿ 26ರಂದು ಸೋಮವಾರ ಗಣರಾಜ್ಯೋತ್ಸವ ಆಚರಣೆ ನಡೆಯಲಿದೆ. ಈ ದಿನವೂ ರಜೆ ಇರುವುದರಿಂದ ಶನಿವಾರ, ಭಾನುವಾರ ಸೇರಿ ಒಟ್ಟು ಮೂರು ದಿನಗಳ ಲಾಂಗ್ ವೀಕೆಂಡ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ಜನರು ವಿಶ್ರಾಂತಿ ಮತ್ತು ಮನರಂಜನೆಗಾಗಿ ಪ್ರವಾಸಕ್ಕೆ ತೆರಳಲು ಉತ್ಸಾಹ ತೋರಿದ್ದಾರೆ. ದೇಶದ ಪ್ರಮುಖ ಆನ್‌ಲೈನ್ ಟ್ರಾವೆಲ್ ಕಂಪನಿ ‘ಮೇಕ್ ಮೈ ಟ್ರಿಪ್’ ಬಿಡುಗಡೆ ಮಾಡಿದ ವರದಿ ಜನರ ಪ್ರವಾಸಿ ಆಸಕ್ತಿಯ ಬಗ್ಗೆ ಆಸ್ತಿದಾಯಕ ಮಾಹಿತಿಯನ್ನು ನೀಡಿದೆ.
ಮೂರು ದಿನಗಳ ಸತತ ರಜೆ ಇರುವುದರಿಂದ ಜನರು ಪ್ರವಾಸಿ ತಾಣಗಳ ಜೊತೆಗೆ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ. ಸಾಮಾನ್ಯವಾಗಿ ರಜೆ ದಿನಗಳಲ್ಲಿ ಪ್ರಯಾಣ ಹೆಚ್ಚಾಗುವುದು ಸಹಜ. ಆದರೆ ಈ ಬಾರಿ ಜನರು ಯಾವೆಲ್ಲಾ ಸ್ಥಳಗಳಿಗೆ ಹೆಚ್ಚು ತೆರಳುತ್ತಿದ್ದಾರೆ ಎಂಬುದನ್ನು ತಿಳಿಯಲು ಕುತೂಹಲ ಹೆಚ್ಚಾಗಿದೆ. ದೇಶೀಯವಾಗಿ ಗೋವಾ ಪ್ರವಾಸಿಗರ ಮೊದಲ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್‌ಗಳು ನಡೆದಿವೆ ಎಂದು ವರದಿಯಲ್ಲಿ ಕೇಳಿ ಬಂದಿದೆ.
ಹೊರ ರಾಜ್ಯಗಳತ್ತ ಜನರ ಆಸಕ್ತಿ ಹೆಚ್ಚಿದ್ದು, ಜನವರಿ 24ರಿಂದ 26ರವರೆಗೆ ಗೋವಾ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ. ಜೊತೆಗೆ ಜೈಪುರ, ಉದಯಪುರ, ಮನಾಲಿ, ಪಾಂಡಿಚೇರಿ ಮತ್ತು ಮುನ್ನಾರ್ ಕೂಡ ಜನಪ್ರಿಯ ತಾಣಗಳ ಪಟ್ಟಿಯಲ್ಲಿ ಸೇರಿವೆ. ಧಾರ್ಮಿಕ ಪ್ರವಾಸಕ್ಕೂ ಜನರು ಹೆಚ್ಚಿನ ಆಸಕ್ತಿ ತೋರಿದ್ದು, ಪುರಿ, ವಾರಣಾಸಿ, ಅಮೃತಸರ, ಅಯೋಧ್ಯೆ, ತಿರುಪತಿ, ಉಜ್ಜಯಿನಿ ಮತ್ತು ದ್ವಾರಕಾದಂತಹ ಆಧ್ಯಾತ್ಮಿಕ ತಾಣಗಳಿಗೆ ಸಾಕಷ್ಟು ಬುಕ್ಕಿಂಗ್‌ಗಳು ನಡೆದಿವೆ.
ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳಲ್ಲಿ ಥೈಲ್ಯಾಂಡ್ ಹೆಚ್ಚು ಜನಪ್ರಿಯವಾಗಿದ್ದು, ವಿಯೆಟ್ನಾಂ ಕೂಡ ಪ್ರವಾಸಿಗರ ಗಮನ ಸೆಳೆದಿದೆ. ಜೊತೆಗೆ ಯುಎಇ, ಮಲೇಷ್ಯಾ ಮತ್ತು ಸಿಂಗಾಪುರಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಜನರು ಭೇಟಿ ನೀಡಲು ಯೋಜಿಸಿದ್ದಾರೆ.
ಈ ಕುರಿತು ‘ಮೇಕ್ ಮೈ ಟ್ರಿಪ್’ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, “ಲಾಂಗ್ ವೀಕೆಂಡ್ ಸಂದರ್ಭದಲ್ಲಿ ಜನರು ವಿಶ್ರಾಂತಿ ಮತ್ತು ಮನರಂಜನೆಗಾಗಿ ತಮ್ಮ ಇಷ್ಟದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಳೆದ ವರ್ಷದ ಹೋಲಿಕೆಗೆ ಈ ಬಾರಿ ಹೆಚ್ಚು ಜನರು ಪ್ರವಾಸಕ್ಕೆ ಆಸಕ್ತಿ ತೋರಿದ್ದಾರೆ” ಎಂದು ತಿಳಿಸಿದ್ದಾರೆ.