ಅಮಲಿನಲ್ಲಿ ಕಣ್ಣು ಮುಚ್ಚಿದ ಮೈದುನ - ಗರ್ಭಿಣಿ ಅತ್ತಿಗೆಯನ್ನೇ ಗುದ್ದಲಿಯಿಂದ ಕೊಚ್ಚಿ ಕೊಂದ ಪಾಪಿ; ಕಾರಣವೇನು?

ಮಾದಕ ವ್ಯಸನ (Drug Addiction) ಮತ್ತು ಕೌಟುಂಬಿಕ ಕಲಹ ಸೇರಿ ತುಂಬು ಗರ್ಭಿಣಿಯೊಬ್ಬರ ಬದುಕನ್ನು ಭೀಕರವಾಗಿ ಬಲಿಪಡೆದಿರುವ ಕರುಳು ಹಿಂಡುವ ಘಟನೆಯೊಂದು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದಿದೆ. 

'ಮಾದಕ ವ್ಯಸನದ ಭೀಕರ ಅಂತ್ಯ – ಗರ್ಭಿಣಿ ಅತ್ತಿಗೆ ಕೊ*ಲೆ' | Photo Credit: https://x.com/HateDetectors
'ಮಾದಕ ವ್ಯಸನದ ಭೀಕರ ಅಂತ್ಯ – ಗರ್ಭಿಣಿ ಅತ್ತಿಗೆ ಕೊ*ಲೆ' | Photo Credit: https://x.com/HateDetectors

ಡ್ರ*ಗ್ಸ್ ಅಮಲಿನಲ್ಲಿ ತೇಲುತ್ತಿದ್ದ ಮೈದುನನೊಬ್ಬ, ತನ್ನದೇ ಅತ್ತಿಗೆಯನ್ನು ಮನೆಯಲ್ಲಿದ್ದ ಗುದ್ದಲಿಯಿಂದ ಕೊಚ್ಚಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಇಡೀ ಮನೆಗೆ ಸಿಲಿಂಡರ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಪೊಲೀಸರನ್ನೇ ಹೈರಾಣಾಗಿಸಿದ್ದ ಈ ಪಾತಕಿಯ ಕೃತ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!

ಆರೇ ತಿಂಗಳಿಗೆ ಮುರಿದುಬಿದ್ದ ಪ್ರೀತಿಯ ಸಂಸಾರ!

ಕೊ*ಲೆಯಾದ ದುರ್ದೈವಿ ಮಹಿಳೆಯನ್ನು ಸನಾ ನಾಜ್ ಎಂದು ಗುರುತಿಸಲಾಗಿದೆ. ಆಕೆಗೆ ಆರು ತಿಂಗಳ ಹಿಂದೆಯಷ್ಟೇ ಸಲ್ಮಾನ್ ಎಂಬಾತನೊಂದಿಗೆ ಪ್ರೇಮ ವಿವಾಹವಾಗಿತ್ತು. ಮದುವೆಯ ನಂತರ ದಂಪತಿ ಜಂಟಿ ಕುಟುಂಬದಲ್ಲಿ ವಾಸವಾಗಿದ್ದರು. ಆದರೆ ಭಾನುವಾರ ಸಂಜೆ ಇಡೀ ಕುಟುಂಬದ ನೆಮ್ಮದಿಯನ್ನು ಮೈದುನ ಆಮಿರ್ ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾನೆ;

ಭಾನುವಾರ ಸಂಜೆ ಆಮಿರ್ ತೀವ್ರವಾಗಿ ಮಾದಕ ದ್ರವ್ಯ ಸೇವಿಸಿ ಮನೆಗೆ ಬಂದಿದ್ದನು. ಈ ವೇಳೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಅತ್ತಿಗೆ ಸನಾ ನಾಜ್ ಜೊತೆ ಆತ ಜಗಳ ತೆಗೆದಿದ್ದಾನೆ.

ಚೀರಾಡಿದರೂ ಬಿಡದೆ ಗುದ್ದಲಿಯಿಂದ ಜಜ್ಜಿ ಹಾಕಿದ ರಾಕ್ಷಸ!

ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರುತ್ತಿದ್ದಂತೆ ಆಮಿರ್ ಮನೆಯಲ್ಲಿದ್ದ ತೀಕ್ಷ್ಣವಾದ ಗುದ್ದಲಿಯನ್ನು ಎತ್ತಿಕೊಂಡು ಅತ್ತಿಗೆಯ ಮೇಲೆ ಮುಗಿಬಿದ್ದಿದ್ದಾನೆ. ಸನಾ ನಾಜ್ ಗರ್ಭಿಣಿ ಎಂಬ ಕನಿಷ್ಠ ಕರುಣೆಯೂ ಇಲ್ಲದೆ ಆಕೆಯ ತಲೆ, ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಗುದ್ದಲಿಯಿಂದ ಸತತವಾಗಿ ಘಾಸಿಗೊಳಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಸನಾ ನಾಜ್ ನೋವಿನಿಂದ ಕಿರುಚಾಡುತ್ತಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಹೆಂಡತಿಯ ಕಿರುಚಾಟ ಕೇಳಿ ಪತಿ ಸಲ್ಮಾನ್ ಓಡಿ ಬಂದಾಗ, ಕೈಯಲ್ಲಿ ರಕ್ತಸಿಕ್ತ ಗುದ್ದಲಿ ಹಿಡಿದು ನಿಂತಿದ್ದ ಆಮಿರ್, ಯಾರಾದರೂ ಹತ್ತಿರ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಹೆಣದ ಬಳಿ ಯಾರನ್ನೂ ಸುಳಿಯದಂತೆ ಅಟ್ಟಹಾಸ ಮೆರೆದಿದ್ದಾನೆ.

ಮನೆ ಉಡಾಯಿಸಲು ಗ್ಯಾಸ್ ಸಿಲಿಂಡರ್ ಆನ್ ಮಾಡಿದ ಹಂತಕ!

ಆರೋಪಿಯ ರೌದ್ರಾವತಾರ ನೋಡಿ ಸ್ಥಳೀಯರು ಒಳಗೆ ಹೋಗಲು ಧೈರ್ಯ ಮಾಡಲಿಲ್ಲ. ಪತಿ ಸಲ್ಮಾನ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ಆಮಿರ್ ಮತ್ತೊಂದು ಭೀಕರ ಕೃತ್ಯಕ್ಕೆ ಕೈಹಾಕಿದ್ದನು. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ವಾಲ್ವ್ ಅನ್ನು ಸಂಪೂರ್ಣವಾಗಿ ಓಪನ್ ಮಾಡಿ, ಇಡೀ ಮನೆಗೆ ಬೆಂಕಿ ಹಚ್ಚಿ ಸ್ಫೋಟಿಸುವುದಾಗಿ ಪೊಲೀಸರಿಗೆ ಸವಾಲು ಹಾಕಿದ್ದಾನೆ.

ಇದರಿಂದ ಇಡೀ ಏರಿಯಾದಲ್ಲಿ ಪ್ರಾಣಭಯದ ವಾತಾವರಣ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ಜನರು ತಮ್ಮ ಮನೆಗಳ ಬಾಗಿಲು ಹಾಕಿಕೊಂಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಪೊಲೀಸರು ಹಾಗೂ ಆರೋಪಿಯ ನಡುವೆ ಹೈಡ್ರಾಮಾ ನಡೆದಿದೆ.

ಕೊನೆಗೂ ಆರೋಪಿಯನ್ನು ಮಣಿಸಿದ ಖಾಕಿ ಪಡೆ!

ಭಾನುವಾರ ರಾತ್ರಿ ಸುಮಾರು 7:45ರ ವೇಳೆಗೆ ಪೊಲೀಸರು ಇಡೀ ಮನೆಯನ್ನು ಸುತ್ತುವರೆದರು. ಆಮಿರ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿ, ಕೊನೆಗೆ ಭರ್ಜರಿ ಪ್ಲಾನ್ ಮಾಡಿ ಆತನನ್ನು ಅತ್ಯಂತ ಸಾಹಸದಿಂದ ಹಿಡಿದು ಅರೆಸ್ಟ್ ಮಾಡಿದ್ದಾರೆ.

ಮೃತದೇಹವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೊ*ಲೆಗೆ ಬಳಸಿದ ಆಯುಧ ಹಾಗೂ ಇತರೆ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಮೃತ ಮಹಿಳೆಯ ತಂದೆ ಮೊಹಮ್ಮದ್ ಆಶಿಕ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಕೌಟುಂಬಿಕ ಕಲಹ ಹಾಗೂ ಮಾದಕ ವ್ಯಸನವೇ ಈ ಭೀಕರ ಕೊ*ಲೆಗೆ ಅಸಲಿ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.  

Latest News