ಸಿಸಿಟಿವಿಯಲ್ಲಿ ಸೆರೆಯಾಯ್ತು ಪತ್ನಿಯ ಮೇಲಿನ ಪತಿಯ ರಾಕ್ಷಸ ರೂಪ - ಮನೆಯೇ ನರಕವಾದಾಗ ಸಿಸಿಟಿವಿ ಸಾಕ್ಷಿಯಾಯ್ತು;

ರಾಜಸ್ಥಾನದ ಜೈಪುರದಲ್ಲಿ ನಡೆದಿರೋ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹೆಂಡತಿಯ ಮೇಲೆ ಗಂಡ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಸಿಸಿಟಿವಿ (CCTV) ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ್ರೆ ಎದೆ ಜರಗುಟ್ಟುತ್ತದೆ. ಮನೆಯ ಲಿವಿಂಗ್ ರೂಮ್‌ನ ನೆಲದ ಮೇಲೆ ಮಹಿಳೆಯೊಬ್ಬರು ಕುಳಿತಿದ್ದಾರೆ. ಅವರ ಗಂಡ ಫುಲ್ ಕೋಪದಲ್ಲಿ ಕೈಕಟ್ಟಿಕೊಂಡು ನಿಂತು ಅವಳಿಗೆ ಬಾಯಿಗೆ ಬಂದ ಹಾಗೆ ಬೈಯ್ಯುತ್ತಿದ್ದಾನೆ. ಪಕ್ಕದಲ್ಲೇ ಅವರ 10 ವರ್ಷದ ಪುಟ್ಟ ಮಗ ಏನೂ ಮಾಡಲಾಗದೆ ಅಸಹಾಯಕನಾಗಿ ನಿಂತಿದ್ದಾನೆ. ಅಷ್ಟರಲ್ಲೇ ಆ ರಾಕ್ಷಸ ಗಂಡ ಹೆಂಡತಿಯ ಜುಟ್ಟು ಹಿಡಿದು ಎಳೆದು, ಅವಳ ತಲೆಯನ್ನು ನೆಲಕ್ಕೆ ಜಜ್ಜಿದ್ದಾನೆ!

ಮಗುವಿನ ಕಣ್ಣೀರು: “ಅಪ್ಪ ದಿನಾ ಅಮ್ಮನಿಗೆ ಹೊಡಿತ್ತಿದ್ದ” | Photo Credit: https://x.com/HateDetectors
ಮಗುವಿನ ಕಣ್ಣೀರು: “ಅಪ್ಪ ದಿನಾ ಅಮ್ಮನಿಗೆ ಹೊಡಿತ್ತಿದ್ದ” | Photo Credit: https://x.com/HateDetectors

ಈ ಭೀಕರ ದೌರ್ಜನ್ಯ ತಾಳಲಾರದೆ ಕೊನೆಗೆ ಆ ಮಹಿಳೆ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಎಲ್ಲಾ ಕ್ರೌರ್ಯದ ದೃಶ್ಯಗಳು ರೆಕಾರ್ಡ್ ಆಗಿವೆ. ಮೃತ ಮಹಿಳೆಯನ್ನು ಅನು ಎಂದು ಗುರುತಿಸಲಾಗಿದೆ. ಈ ದಂಪತಿಗೆ ಒಬ್ಬ ಹೆಣ್ಣುಮಗು ಹಾಗೂ ಒಬ್ಬ ಗಂಡುಮಗನಿದ್ದಾನೆ.

ಅನು ಅವರಿಗೆ 2015 ರಲ್ಲಿ ಗೌತಮ್ ಮೀನಾ ಎಂಬುವವರ ಜೊತೆ ಮದುವೆಯಾಗಿತ್ತು. ಈ ಗೌತಮ್ ಸಾಮಾನ್ಯದವನೇನಲ್ಲ, ಲೋಕೋಪಯೋಗಿ ಇಲಾಖೆಯಲ್ಲಿ (PWD) ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಉನ್ನತ ಅಧಿಕಾರಿಯಾಗಿದ್ದ. ಆದರೆ ಅಧಿಕಾರ, ಹಣವಿದ್ದರೇನು? ಗುಣ ಮಾತ್ರ ರಾಕ್ಷಸನಂತಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಗೌತಮ್ ದಿನಾಲೂ ಕುಡಿದು ಬಂದು ಅನುಗೆ ಟಾರ್ಚರ್ ಕೊಡಲು ಶುರು ಮಾಡಿದ್ದ ಎಂದು ಅನು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾಗಿದೆ ಗಂಡನ ಅಸಲಿ ಕ್ರೌರ್ಯ!

ಮನೆಯಲ್ಲಿದ್ದ ಸಿಸಿಟಿವಿ ಫೂಟೇಜ್ ನೋಡಿದ್ರೆ ಆತ ಎಷ್ಟು ಕ್ರೂರಿಯಾಗಿದ್ದ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಕೇವಲ ಕೌಟುಂಬಿಕ ಕಲಹವಲ್ಲ, ಬದಲಿಗೆ ಅಪ್ಪಟ ಗೃಹ ಹಿಂಸೆಯಾಗಿದೆ (Domestic Violence). ಒಂದು ಕ್ಲಿಪ್‌ನಲ್ಲಿ ಗೌತಮ್ ಸಿಟ್ಟಿನಲ್ಲಿ ಇಡೀ ಲಿವಿಂಗ್ ರೂಮ್‌ನಲ್ಲಿ ಓಡಾಡಿ, ಅಲ್ಲೇ ಇದ್ದ ದೊಡ್ಡ ಫ್ಲಾಟ್‌ಸ್ಕ್ರೀನ್ ಟಿವಿಗೆ ಜೋರಾಗಿ ಗುದ್ದಿ ಅದನ್ನು ಪುಡಿಪುಡಿ ಮಾಡಿದ್ದಾನೆ.

ಮತ್ತೊಂದು ದೃಶ್ಯದಲ್ಲಿ, ಗಂಡನ ಹೊಡೆತ ತಡೆಯಲಾರದೆ ಅನು ಅವರು ನೆಲದ ಮೇಲೆಯೇ ತಮ್ಮನ್ನು ತಾವು ಎಳೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಮಗ ಪಕ್ಕದಲ್ಲೇ ನಿಂತು ಅಳ್ತಾ ಇದ್ದಾನೆ. ಗಂಡ ಮತ್ತೆ ಹೊಡೆಯಲು ಕೈ ಹಾಕಿದಾಗ ಅನು ಅವರು ತಮ್ಮ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ರಕ್ಷಣೆಗಾಗಿ ಒದ್ದಾಡುತ್ತಿರುವುದು ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.

"ಅಮ್ಮ ಸುಮ್ಮನಿದ್ರೂ ಅಪ್ಪ ದಿನಾ ಹೊಡಿತಿದ್ದ" - ಕಣ್ಣೀರಿಟ್ಟ ಮಗಳು

ಈ ದಂಪತಿಯ ಪುಟ್ಟ ಮಗಳು ರಿಪೋರ್ಟರ್ಸ್ ಎದುರು ತನ್ನ ಅಳಲು ತೋಡಿಕೊಂಡಿದ್ದಾಳೆ. "ಅಪ್ಪ ದಿನಾ ಕುಡಿದು ಮನೆಗೆ ಬರ್ತಿದ್ದ. ಅಮ್ಮ ಏನೂ ಮಾತನಾಡದೆ ಸೈಲೆಂಟ್ ಆಗಿ ಇರುತ್ತಿದ್ದಳು. ಆದ್ರೂ ಅಪ್ಪ ಅವಳಿಗೆ ಮನಬಂದಂತೆ ಥಳಿಸುತ್ತಿದ್ದ. ಅಪ್ಪ ಅಮ್ಮನಿಗೆ ಹೊಡೆಯುವುದನ್ನು ನಾನು ತುಂಬಾ ಸಲ ನೋಡಿದ್ದೇನೆ. ಆದರೆ ಅಪ್ಪನ ಮೇಲಿದ್ದ ಹೆದರಿಕೆಯಿಂದಾಗಿ ನಾನು ಈ ವಿಷಯವನ್ನು ನನ್ನ ತಮ್ಮನಿಗೂ ಹೇಳುತ್ತಿರಲಿಲ್ಲ," ಎಂದು ಆ ಮಗು ಕಣ್ಣೀರು ಹಾಕಿದೆ.

ಅನು ಅವರ ಅಣ್ಣ ಮಾತನಾಡಿ, "ನನ್ನ ತಂಗಿ ಮನೆಗೆ ಫೋನ್ ಮಾಡಿ ದಿನಾಲೂ ಗಂಡ ಹೊಡೆಯುತ್ತಾನೆ ಅಂತ ಅಳುತ್ತಿದ್ದಳು. ನಮಗೆ ತುಂಬಾ ದಿನಗಳಿಂದಲೇ ಆತಂಕ ಇತ್ತು. ಒಂದು ರಾತ್ರಿ ಆಕೆ ಮಕ್ಕಳನ್ನು ಕರ್ಕೊಂಡು ನಮ್ಮ ಮನೆಗೆ ಓಡಿ ಬಂದಿದ್ದಳು. ಎರಡು ಮೂರು ದಿನ ನಮ್ಮ ಜೊತೆಯೇ ಇದ್ದಳು. ಅವನು ಅವಳಿಗೆ ಸಿಕ್ಕಾಪಟ್ಟೆ ಹಿಂಸೆ ನೀಡುತ್ತಿದ್ದ. ತಾನು ಕುಡಿದು ಬಂದು ಮಾಡುವ ತಪ್ಪುಗಳನ್ನೆಲ್ಲಾ ತಂಗಿಯ ತಲೆಗೇ ಕಟ್ಟುತ್ತಿದ್ದ," ಎಂದು ನೋವು ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ನರರಾಕ್ಷಸನ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ಹಿಂಸಾಚಾರದ ಕೇಸ್ ದಾಖಲಾಗಿದೆ.

ಅಮ್ಮನಿಗೆ ಉಪ್ಪುನೀರು ಕೊಡ್ತಿದ್ದ 10 ವರ್ಷದ ಮಗ!

ಕೇವಲ 10 ವರ್ಷದ ಅವರ ಪುಟ್ಟ ಮಗ ತನಗೆ ನೆನಪಿರುವ ಒಂದು ಘಟನೆಯನ್ನು ನೆನೆದು ಕಣ್ಣೀರಾಗಿದ್ದಾನೆ. "ಅಪ್ಪ ಮನೆಗೆ ಬಂದು ಅಮ್ಮನಿಗೆ ದಿನಾ ಹೊಡೆಯುತ್ತಿದ್ದ. ಅಮ್ಮನಿಗೆ ಬ್ಲಡ್ ಪ್ರೆಶರ್ (BP) ಲೋ ಆದಾಗಲೆಲ್ಲಾ ನನಗೆ ಉಪ್ಪು ನೀರು ತಂದುಕೊಡು ಅಂತ ಹೇಳ್ತಿದ್ದಳು. ನಾನು ನೀರು ಕೊಡಲು ಹೋದ್ರೆ ಅಪ್ಪ ನನ್ನನ್ನು ತಡೆಯುತ್ತಿದ್ದ. ಒಂದು ದಿನ ಅಪ್ಪ ಮನೆಗೆ ಬಂದು ಟಿವಿಯಲ್ಲಿ ಜೋರಾಗಿ ಸಾಂಗ್ ಪ್ಲೇ ಮಾಡಿದ, ಆಮೇಲೆ ಆ ಟಿವಿಯನ್ನೇ ಒಡೆದು ಹಾಕಿ ಅಮ್ಮನಿಗೆ ಸಖತ್ ಹೊಡೆದ. ನಾನು ಅಮ್ಮನಿಗೆ ನೀರು ತರಲು ಹೋದಾಗ, ಅಪ್ಪ ಎಲ್ಲದಕ್ಕೂ ಅಮ್ಮನೇ ಕಾರಣ ಅಂತ ಬೈಯುತ್ತಿದ್ದ," ಎಂದು ಆ ಮಗು ಹೇಳಿದೆ.

ಕೊನೆಗೆ ಈ ಎಲ್ಲಾ ನರಕಯಾತನೆ ತಡೆಯಲು ಸಾಧ್ಯವಾಗದೆ ಅನು ಅವರು ಏಪ್ರಿಲ್ 7 ರಂದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಅವರು ತನ್ನ ಗಂಡನಿಗೆ ವಿಡಿಯೋ ಕಾಲ್ ಮಾಡಿ, ತಾನು ಸಾಯುತ್ತಿರುವುದನ್ನು ಲೈವ್ ಆಗಿ ತೋರಿಸಿದ್ದಾರೆ! ಇದನ್ನು ನೋಡಿ ಗಾಬರಿಯಾದ ನೆರೆಹೊರೆಯವರು ತಕ್ಷಣ ಮನೆಗೆ ಓಡಿ ಬಂದು ಅನು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಸದ್ಯಕ್ಕೆ ಪೊಲೀಸರು ಮನೆಯಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಯಾವೊಬ್ಬ ಮಹಿಳೆಗೂ ಇಂತಹ ಪರಿಸ್ಥಿತಿ ಬಾರದಿರಲಿ. ಗೃಹ ಹಿಂಸೆ ನಡೆಯುತ್ತಿರುವಾಗ ಸುಮ್ಮನಿರದೆ ತಕ್ಷಣವೇ ಕಾನೂನಿನ ಸಹಾಯ ಪಡೆಯುವುದು ತುಂಬಾ ಅಗತ್ಯ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಆ ಕ್ರೂರಿ ಗಂಡನಿಗೆ ಎಂತಹ ಶಿಕ್ಷೆಯಾಗಬೇಕು? ಕಾಮೆಂಟ್ ಮಾಡಿ ತಿಳಿಸಿ. 

Latest News