Apr 8, 2026 Languages : ಕನ್ನಡ | English

ಪವಿತ್ರ ಗಂಗೆಯ ದಡದಲ್ಲಿ ಮದ್ಯ ಸೇವನೆ: ತಡೆಯಲು ಬಂದ ಪೊಲೀಸರಿಗೇ ಬೆದರಿಕೆ ಹಾಕಿದ ಮಹಿಳೆ - ವಿಡಿಯೋ ವೈರಲ್!!

ದೇವಸ್ಥಾನ ಅಥವಾ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಅಲ್ಲಿನ ಮರ್ಯಾದೆ ಕಾಪಾಡೋದು ನಮ್ಮೆಲ್ಲರ ಕರ್ತವ್ಯ ಅಲ್ವಾ? ಆದರೆ ಇಲ್ಲೊಬ್ಬಳು ಮಹಿಳೆ ರಿಷಿಕೇಶದ ಪವಿತ್ರ ಗಂಗಾ ನದಿ ತೀರದಲ್ಲೇ ಕುಳಿತು ಎಣ್ಣೆ ಹೊಡೆಯೋಕೆ ಶುರು ಮಾಡಿದ್ದಾಳೆ. ಅಷ್ಟೇ ಅಲ್ಲ, "ಯಾಕೆ ಹೀಗೆ ಮಾಡ್ತಿದ್ದೀರಾ?" ಅಂತ ಕೇಳೋಕೆ ಬಂದ ಪೊಲೀಸರ ಮೇಲೆಯೇ ಆಕೆ ಮಾಡಿರೋ ರಂಪಾಟ ಅಂತಿಂತದ್ದಲ್ಲ.

ರಿಷಿಕೇಶ ಗಂಗಾ ತೀರದಲ್ಲಿ ಮಹಿಳೆಯ ಮದ್ಯ ಗಲಾಟೆ – ವಿಡಿಯೋ ವೈರಲ್!! | Photo Credit: https://x.com/gharkekalesh
ರಿಷಿಕೇಶ ಗಂಗಾ ತೀರದಲ್ಲಿ ಮಹಿಳೆಯ ಮದ್ಯ ಗಲಾಟೆ – ವಿಡಿಯೋ ವೈರಲ್!! | Photo Credit: https://x.com/gharkekalesh

ರಿಷಿಕೇಶ ಅನ್ನೋದು ಕೋಟ್ಯಂತರ ಜನರ ಪಾಲಿನ ಶ್ರದ್ಧಾ ಕೇಂದ್ರ. ಏಪ್ರಿಲ್ 6ರಂದು ಹರಿಯಾಣದಿಂದ ಬಂದಿದ್ದ ಈ ಮಹಿಳಾ ಪ್ರವಾಸಿ, ನೀಲಕಂಠ ಮಾರ್ಗದ ಫೂಲ್ ಚಟ್ಟಿ ಹತ್ತಿರ ಗಂಗಾ ನದಿ ದಂಡೆಯ ಮೇಲೆ ಆರಾಮಾಗಿ ಮದ್ಯ ಸೇವಿಸುತ್ತಾ ಕುಳಿತಿದ್ದಳು. ಇದನ್ನು ನೋಡಿದ ಪೊಲೀಸರು, "ನೋಡಿ ಮೇಡಂ, ಇದು ಪವಿತ್ರ ಜಾಗ, ಇಲ್ಲಿ ಕುಡಿಯೋದು ನಿಷೇಧ ಇದೆ" ಅಂತ ತುಂಬಾ ಪ್ರೀತಿಯಿಂದಲೇ ತಿಳಿಹೇಳೋಕೆ ಹೋಗಿದ್ದಾರೆ.

ಆದರೆ ಆಕೆ ಪೊಲೀಸರ ಮಾತಿಗೆ ಬೆಲೆ ಕೊಡೋದು ಬಿಟ್ಟು, ಅವರ ಮೇಲೆಯೇ ಮೈಮೇಲೆ ಬಂದವಳಂತೆ ಕೂಗಾಡಲು ಶುರು ಮಾಡಿದ್ದಾಳೆ. ವಿಡಿಯೋದಲ್ಲಿ ಆಕೆ ಹೇಳಿರೋ ಮಾತು ಕೇಳಿದ್ರೆ ನಿಮಗೂ ಸಿಟ್ಟು ಬರುತ್ತೆ. "ನಮ್ಮಿಂದಲೇ ನಿಮ್ಮ ಬದುಕು ನಡೀತಿರೋದು, ನಾವು ಪ್ರವಾಸಿಗರು ಕೊಡೋ ಹಣದಿಂದಲೇ ನಿಮಗೆ ಸಂಬಳ ಬರೋದು" ಅಂತ ಪೊಲೀಸರನ್ನೇ ನಿಂದಿಸಿದ್ದಾಳೆ. "ನನ್ನ ಸ್ವಂತ ಹಣದಲ್ಲಿ ನಾನು ಕುಡೀತಿದ್ದೇನೆ, ನನ್ನನ್ನ ಕೇಳೋಕೆ ನೀವ್ಯಾರು? ಬೇಕಂತಲೇ ಪ್ರವಾಸಿಗರನ್ನ ಟಾರ್ಗೆಟ್ ಮಾಡ್ಬೇಡಿ" ಅಂತ ಫುಲ್ ಗಲಾಟೆ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದ್ದು, ಜನರು ಆಕೆಯ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಈ ಗಲಾಟೆ ಜೋರಾದಾಗ ಆಕೆಯ ಪತಿ ಮಧ್ಯಪ್ರವೇಶಿಸಿ, ಹೇಗೋ ಮಾಡಿ ಆಕೆಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜನರು ಆ ಮಹಿಳೆಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. 'ಮೇಡಂ, ನಿಮ್ಮ ಹಣ ನಮಗೆ ಬೇಡ, ಆದರೆ ಗಂಗಾ ನದಿ ನಿಮ್ಮ ವೈಯಕ್ತಿಕ ಬಾರ್ ಸ್ಟೂಲ್ ಅಲ್ಲ. ಶಾಂತಿ ಮತ್ತು ಭಕ್ತಿಗಾಗಿ ರಿಷಿಕೇಶಕ್ಕೆ ಬನ್ನಿ, ಇಲ್ಲಿ ಪಾರ್ಟಿ ಮಾಡಲು ಬರಬೇಡಿ. ಪವಿತ್ರ ತಾಣಗಳನ್ನು ಗೌರವಿಸಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಇರಿ' ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

ರಿಷಿಕೇಶದಂತಹ ಅನೇಕ ಪವಿತ್ರ ತಾಣಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರವಾಸಕ್ಕೆ ಹೋದಾಗ ನಮಗೆ ವೈಯಕ್ತಿಕ ಸ್ವಾತಂತ್ರ್ಯ ಇರುವುದು ನಿಜ, ಆದರೆ ಆ ಸ್ವಾತಂತ್ರ್ಯ ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿರಬಾರದು. ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ಪವಿತ್ರ ನದಿಗಳ ದಡದಲ್ಲಿ ಇಂತಹ ವರ್ತನೆ ಖಂಡಿತವಾಗಿಯೂ ಒಪ್ಪುವಂತದ್ದಲ್ಲ.

ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರವಾಸಕ್ಕೆ ಹೋದಾಗ ಸ್ಥಳೀಯ ನಿಯಮಗಳನ್ನು ಪಾಲಿಸುವುದು ಕಡ್ಡಾಯವಲ್ಲವೇ? ಕಾಮೆಂಟ್ ಮಾಡಿ ತಿಳಿಸಿ.

Latest News