Dec 13, 2025 Languages : ಕನ್ನಡ | English

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯಪಾನ ವಿಡಿಯೋ ವೈರಲ್‌: ಮೈಸೂರು-ಕುಶಾಲನಗರ ಮಾರ್ಗದಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಹಿರಂಗವಾಗಿ ಮದ್ಯಪಾನ ಮಾಡುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಸಹ ಪ್ರಯಾಣಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯಪಾನ ವಿಡಿಯೋ ವೈರಲ್‌
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮದ್ಯಪಾನ ವಿಡಿಯೋ ವೈರಲ್‌

ವರದಿಗಳ ಪ್ರಕಾರ, ಈ ಘಟನೆಯು ಹುಣಸೂರು ಡಿಪೋಗೆ ಸೇರಿದ KA09F4911 ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ. ಈ ಬಸ್ ಮೈಸೂರಿನಿಂದ ಕುಶಾಲನಗರಕ್ಕೆ ಪ್ರಯಾಣಿಸುತ್ತಿದ್ದಾಗ, ರಾತ್ರಿ ಸರಿಸುಮಾರು 8:45ಕ್ಕೆ ಮದ್ಯಪಾನದ ಈ ಅಸಭ್ಯ ಕೃತ್ಯ ಸಂಭವಿಸಿದೆ.

ಪ್ರಯಾಣಿಕರ ತೀವ್ರ ಅಸಮಾಧಾನ, ಸೂಕ್ತ ಕ್ರಮಕ್ಕೆ ಆಗ್ರಹ

ಸಾರ್ವಜನಿಕ ಸೇವಾ ವಾಹನವಾದ ಬಸ್‌ನಲ್ಲಿ, ಇತರ ಪ್ರಯಾಣಿಕರ (ಕುಟುಂಬಗಳು ಸೇರಿದಂತೆ) ಎದುರೇ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಬಸ್ ಎಂಬ ಪರಿವೇ ಇಲ್ಲದೆ ಮದ್ಯಪಾನ ಮಾಡುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಸಾರ್ವಜನಿಕ ಸಾರಿಗೆಯಲ್ಲಿ ಮದ್ಯ ಸೇವನೆ ಮಾಡುವುದು ಪ್ರಯಾಣಿಕರ ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು, ಅಷ್ಟೇ ಅಲ್ಲದೆ ಸಹ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಮದ್ಯ ಸೇವನೆ ಮಾಡಿದ ಈ ಕೃತ್ಯದಿಂದ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಕಿರಿಕಿರಿ ಮತ್ತು ಅಸಭ್ಯ ವರ್ತನೆಯನ್ನು ಸಹಿಸಲು ಸಾಧ್ಯವಾಗದೆ, ಒಬ್ಬ ಪ್ರಯಾಣಿಕರು ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸೆರೆ ಹಿಡಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಯಾಣಿಕರು, ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ. ಪ್ರಯಾಣಿಕರ ಗೌರವಕ್ಕೆ ಧಕ್ಕೆ ತಂದ ಇಂತಹ ಗಂಭೀರ ವರ್ತನೆಯನ್ನು ಸಾರಿಗೆ ಸಂಸ್ಥೆ ಸಹಿಸಬಾರದು ಎಂದು ಒತ್ತಾಯಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವೈರಲ್ ಆಗಿರುವ ಈ ವಿಡಿಯೋದ ಆಧಾರದ ಮೇಲೆ ಮತ್ತು ಬಸ್‌ನ ನೋಂದಣಿ ಸಂಖ್ಯೆ ಬಳಸಿ, ಮದ್ಯಪಾನ ಮಾಡಿದ ಪ್ರಯಾಣಿಕರನ್ನು ಹಾಗೂ ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ನಿರ್ವಾಹಕ/ಚಾಲಕರನ್ನು ಗುರುತಿಸಿ ಶಿಸ್ತು ಕ್ರಮ ಜರುಗಿಸುವ ನಿರೀಕ್ಷೆಯಿದೆ.

Latest News