Apr 17, 2026 Languages : ಕನ್ನಡ | English

ಐಐಟಿ ಓದಿದ್ರೂ ಬುದ್ಧಿ ಬರಲಿಲ್ಲವೇ? ಕೆಲಸಕ್ಕೆ ಸೇರಿದ ಕೆಲವೇ ದಿನಕ್ಕೆ ಲಂಚ ಪಡೆದು ಸಿಕ್ಕಿಬಿದ್ದ ಎಸ್‌ಡಿಎಂ ಕಾಜಲ್ ಮೀನಾ!!

ನಮ್ಮ ಸಮಾಜದಲ್ಲಿ ಐಎಎಸ್ ಅಥವಾ ಆರ್‌ಎಎಸ್ (RAS) ಅಧಿಕಾರಿಯಾಗೋದು ಅಂದ್ರೆ ಅದೊಂದು ದೊಡ್ಡ ಗೌರವ. ಅದರಲ್ಲೂ ದೇಶದ ಪ್ರತಿಷ್ಠಿತ ಐಐಟಿಯಲ್ಲಿ ಓದಿ, ಕೈತುಂಬಾ ಸಂಬಳ ಬರೋ ಸಾಫ್ಟ್‌ವೇರ್ ಕೆಲಸ ಬಿಟ್ಟು "ಜನಸೇವೆ ಮಾಡ್ತೀನಿ" ಅಂತ ಸರ್ಕಾರಿ ಕೆಲಸಕ್ಕೆ ಬಂದವರನ್ನು ಜನ ದೇವದೂತರಂತೆ ನೋಡ್ತಾರೆ. ಆದರೆ, ರಾಜಸ್ಥಾನದ ನಡೋಟಿ ತಹಸಿಲ್‌ನ ಹೊಸ ಎಸ್‌ಡಿಎಂ (SDM) ಕಾಜಲ್ ಮೀನಾ ಮಾಡಿರೋ ಕೆಲಸ ಈಗ ಇಡೀ ದೇಶವೇ ನಾಚಿಕೆಪಡುವಂತೆ ಮಾಡಿದೆ. 

ಐಐಟಿ ಪದವೀಧರೆಯ SDM ಲಂಚದ ಬಲೆಗೆ; | Photo Credit: https://x.com/SouleFacts
ಐಐಟಿ ಪದವೀಧರೆಯ SDM ಲಂಚದ ಬಲೆಗೆ; | Photo Credit: https://x.com/SouleFacts

ರಾಜಸ್ಥಾನದ ನಡೋಟಿ ವಿಭಾಗದ ಎಸ್‌ಡಿಎಂ ಆಗಿದ್ದ ಕಾಜಲ್ ಮೀನಾ, ಭೂ ಕಂದಾಯಕ್ಕೆ ಸಂಬಂಧಿಸಿದ ಒಂದು ಆದೇಶ (Decree) ಹೊರಡಿಸಲು ಬರೋಬ್ಬರಿ ₹60,000 ಲಂಚ ಬೇಡಿಕೆ ಇಟ್ಟಿದ್ದರು. ಇವರ ಜೊತೆಗೆ ಇವರ ರೀಡರ್ ದಿನೇಶ್ ಕುಮಾರ್ ಸೈನಿ ಮತ್ತು ಹಿರಿಯ ಸಹಾಯಕ ಪ್ರವೀಣ್ ಧಾಕಡ್ ಎಂಬುವವರು ಕೂಡ ಶಾಮೀಲಾಗಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ ರಾಜಸ್ಥಾನದ ಭ್ರಷ್ಟಾಚಾರ ನಿರೋಧಕ ದಳ (ACB), ಪಕ್ಕಾ ಪ್ಲಾನ್ ಮಾಡಿ ದಾಳಿ ನಡೆಸಿದೆ.

ದಾಳಿಯ ಸಮಯದಲ್ಲಿ ಕಾಜಲ್ ಮೀನಾ ಮತ್ತು ಅವರ ಟೀಮ್ ಲಂಚದ ಹಣ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬರಿ ₹60,000 ಅಷ್ಟೇ ಅಲ್ಲ, ಎಸಿಬಿ ಅಧಿಕಾರಿಗಳು ಅವರ ಬಳಿ ಇದ್ದ ಹೆಚ್ಚುವರಿ ₹4 ಲಕ್ಷ ನಗದು ಹಣವನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಕಾಜಲ್ ಮೀನಾ ಸಾಮಾನ್ಯ ಮಹಿಳೆಯಲ್ಲ. ಇವರು ಹಿಮಾಚಲ ಪ್ರದೇಶದ ಐಐಟಿ ಮಂಡಿ (IIT Mandi) ಯಲ್ಲಿ ಇಂಜಿನಿಯರಿಂಗ್ ಓದಿದವರು. ಐಟಿ ಕ್ಷೇತ್ರದಲ್ಲಿ ದೊಡ್ಡ ಸಂಬಳದ ಕೆಲಸ ಮಾಡ್ತಿದ್ದ ಇವರು, 2024ರ ಬ್ಯಾಚ್‌ನ ಆರ್‌ಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಇವರು ಕೆಲಸಕ್ಕೆ ಸೇರಿ ಇನ್ನು ಕೆಲವೇ ತಿಂಗಳುಗಳಾಗಿವೆ ಅಷ್ಟೇ. ಆಗಲೇ ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಕೈ ಹಾಕಿರುವುದು ಎಲ್ಲರನ್ನೂ ದಂಗಾಗಿಸಿದೆ.

ವಿಪರ್ಯಾಸ ಅಂದ್ರೆ, ಸೋಶಿಯಲ್ ಮೀಡಿಯಾದಲ್ಲಿ ಇವರ ಹಳೆಯ ಮೊಕ್ ಇಂಟರ್ವ್ಯೂ (Mock Interview) ವಿಡಿಯೋಗಳು ಈಗ ವೈರಲ್ ಆಗ್ತಿವೆ. ಅದರಲ್ಲಿ ಇವರು "ನಾನು ಜನರ ಕಷ್ಟಕ್ಕೆ ಸ್ಪಂದಿಸಲು, ಸಮಾಜದಲ್ಲಿ ಬದಲಾವಣೆ ತರಲು ಈ ಕೆಲಸಕ್ಕೆ ಬಂದಿದ್ದೇನೆ" ಅಂತ ಭಾಷಣ ಹೊಡೆದಿದ್ದರು. ಆದರೆ ಈಗ ಅವರ ಅಸಲಿ ಬಣ್ಣ ಬಯಲಾಗಿದೆ.

ಜನರು ಕಷ್ಟಪಟ್ಟು ದುಡಿದ ಹಣದಲ್ಲಿ ಟ್ಯಾಕ್ಸ್ ಕಟ್ಟಿ ಸರ್ಕಾರಿ ಅಧಿಕಾರಿಗಳಿಗೆ ಸಂಬಳ ಕೊಡ್ತಾರೆ. ಆದರೆ, ಇಂತಹ ಉನ್ನತ ಶಿಕ್ಷಣ ಪಡೆದ ಅಧಿಕಾರಿಗಳೇ ಲಂಚಕ್ಕೆ ಕೈಯೊಡ್ಡಿದರೆ ಬಡವರ ಗತಿ ಏನು? ಅನ್ನೋ ಪ್ರಶ್ನೆ ಈಗ ಎದ್ದಿದೆ. ಬಡ ರೈತನ ಭೂಮಿ ವಿಚಾರಕ್ಕೆ ಇವರು ಹಣ ಕೇಳಿದ್ದರು ಎನ್ನಲಾಗಿದೆ. ಬರಿ 60 ಸಾವಿರಕ್ಕೆ ಕೈ ಹಾಕಿದ ಇವರು, ಮುಂದೆ ಇನ್ಯಾವ ಮಟ್ಟದ ಹಗರಣ ಮಾಡ್ತಿದ್ರೋ ಏನೋ? ಸದ್ಯಕ್ಕೆ ಎಸಿಬಿ ಪೊಲೀಸರು ಇವರನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಎಷ್ಟೇ ದೊಡ್ಡ ಡಿಗ್ರಿ ಇರಲಿ, ಎಷ್ಟೇ ಟ್ಯಾಲೆಂಟ್ ಇರಲಿ, ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆ ಇರೋದಿಲ್ಲ ಅನ್ನೋದಕ್ಕೆ ಕಾಜಲ್ ಮೀನಾ ಅವರ ಈ ಪ್ರಕರಣವೇ ಸಾಕ್ಷಿ. "ಸೇವೆ ಮಾಡ್ತೀನಿ" ಅಂತ ಬರೋ ಅಧಿಕಾರಿಗಳು ಇಷ್ಟೊಂದು ಬೇಗ ಭ್ರಷ್ಟಾಚಾರದ ಬಲೆಗೆ ಬಿದ್ದರೆ ಸಾಮಾನ್ಯ ಜನರಿಗೆ ವ್ಯವಸ್ಥೆಯ ಮೇಲೆ ನಂಬಿಕೆ ಹೋಗೋದ್ರಲ್ಲಿ ಸಂಶಯವಿಲ್ಲ.

ಬೆವರು ಸುರಿಸಿ ದುಡಿದ ಹಣವನ್ನು ಯಾರಿಗೂ ಲಂಚವಾಗಿ ಕೊಡಬೇಡಿ. ಇಂತಹ ಭ್ರಷ್ಟ ಅಧಿಕಾರಿಗಳ ಬಗ್ಗೆ ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡೋ ಧೈರ್ಯ ಮಾಡಿ.

Latest News