Apr 18, 2026 Languages : ಕನ್ನಡ | English

ರಿಸರ್ವ್ಡ್ ಬೋಗಿಯಲ್ಲೇ ಕಾಮುಕನ ಅಟ್ಟಹಾಸ - ರೈಲಿನಲ್ಲಿ ತನಗಾದ ಭಯಾನಕ ಅನುಭವದ ವಿಡಿಯೋ ಹಂಚಿಕೊಂಡ ಯುವತಿ!!

ನೀವು ರೈಲಿನಲ್ಲಿ ಓಡಾಡುವವರಾ? ಅದರಲ್ಲೂ ಹೆಣ್ಣುಮಕ್ಕಳು ಒಬ್ಬಂಟಿಯಾಗಿ ಸ್ಲೀಪರ್ ಕೋಚ್‌ನಲ್ಲಿ ಟ್ರಾವೆಲ್ ಮಾಡ್ತೀರಾ? ಹಾಗಿದ್ರೆ ಈ ಘಟನೆ ನಿಮಗೊಂದು ಎಚ್ಚರಿಕೆ ಗಂಟೆ. ಕಾಯ್ದಿರಿಸಿದ ಬೋಗಿಯಲ್ಲೇ ಇಂತಹ ಘಟನೆ ನಡೆಯುತ್ತೆ ಅಂದ್ರೆ ನಾವು ಯಾರನ್ನು ನಂಬಬೇಕು? ಕೊರ್ಬಾ - ತಿರುವನಂತಪುರಂ ಎಕ್ಸ್‌ಪ್ರೆಸ್ (22647) ರೈಲಿನಲ್ಲಿ ನಡೆದ ಈ ಘಟನೆ ಈಗ ಇಡೀ ದೇಶದ ಗಮನ ಸೆಳೆದಿದೆ. ರೈಲಿನ ಸ್ಲೀಪರ್ ಕೋಚ್‌ನಲ್ಲಿ ಒಬ್ಬ ಮಹಿಳೆ ಪ್ರಯಾಣಿಸುತ್ತಿದ್ದರು. ಕೋಚ್ ಸ್ವಲ್ಪ ಖಾಲಿ ಇರುವುದನ್ನೇ ಬಂಡವಾಳ ಮಾಡಿಕೊಂಡ ಒಬ್ಬ ವಿಕೃತ ಕಾಮುಕ, ಆಕೆಯ ಹತ್ತಿರ ಬಂದು ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ.

ರೈಲಿನಲ್ಲಿ ನಡೆದ ಅಸಭ್ಯ ಘಟನೆ; | Photo Credit: https://x.com/Mariyam_MBD
ರೈಲಿನಲ್ಲಿ ನಡೆದ ಅಸಭ್ಯ ಘಟನೆ; | Photo Credit: https://x.com/Mariyam_MBD

ಮೊದಲು ಆಕೆಯ ಪಾದಗಳನ್ನು ಮುಟ್ಟಿ ಸತಾಯಿಸಿದ್ದಾನೆ. ಅವಳು ಹೆದರಿ ಕಿಟಕಿಯ ಕಡೆಗೆ ಸರಿದರೂ ಬಿಡದ ಆತ, ಎಲ್ಲರ ಮುಂದೆಯೇ ಬಟ್ಟೆ ಬಿಚ್ಚಿ ಅಸಹ್ಯವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲ, ರೈಲಿನ ಒಳಗಿನ ಗೋಡೆಯ ಪ್ಲಾಸ್ಟಿಕ್ ಶೀಟ್‌ಗಳನ್ನು ಹರಿದು ಹಾಕಿ ವಿಕೃತಿ ಮೆರೆದಿದ್ದಾನೆ. ಆ ಮಹಿಳೆ ಅನುಭವಿಸಿದ ಆ ಭಯಾನಕ ಕ್ಷಣಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ನೋಡಲು ಅಸಾಧ್ಯವಾಗಿದೆ.

ರೈಲ್ವೆ ಭದ್ರತೆ ಎಲ್ಲಿ ಹೋಯಿತು? ರಿಸರ್ವ್ಡ್ ಕೋಚ್‌ಗೆ ಟಿಕೆಟ್ ಇಲ್ಲದವರು ಹೇಗೆ ಬರ್ತಾರೆ? ಮಹಿಳೆಯರ ಭದ್ರತೆಗೆ ಇರಬೇಕಾದ RPF ಪೊಲೀಸರು ಆ ಸಮಯದಲ್ಲಿ ಎಲ್ಲಿದ್ರು? ಪ್ರತಿ ಬೋಗಿಯಲ್ಲೂ ಸಿಸಿಟಿವಿ ಅಳವಡಿಕೆ ಯಾವಾಗ ಪೂರ್ಣವಾಗುತ್ತೆ? ರೈಲ್ವೆ ಇಲಾಖೆ ಎಷ್ಟೇ ಹೈಟೆಕ್ ಆದರೂ, ಇಂತಹ ಕ್ರಿಮಿನಲ್ ಮನಸ್ಥಿತಿಯವರಿಂದ ಸಾಮಾನ್ಯ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರದ ಸಂಗತಿ.

ಇಂತಹ ಸಮಯಲ್ಲಿ ನೀವು ಮಾಡಬೇಕಾದ್ದು ಏನು? (Save it for emergency) ಇಂತಹ ಅನಿಷ್ಟ ವ್ಯಕ್ತಿಗಳು ಎದುರಾದಾಗ ಗಾಬರಿಯಾಗಬೇಡಿ, ಬದಲಿಗೆ ಧೈರ್ಯದಿಂದ ಕೂಡಲೇ 139 ಗೆ ಕರೆ ಮಾಡಿ. ಇದು ರೈಲ್ವೆ ಸುರಕ್ಷತಾ ಸಹಾಯವಾಣಿ. ತಕ್ಷಣವೇ ನಿಮ್ಮ ಲೊಕೇಶನ್ ತಿಳಿಸಿ. ಟ್ವಿಟರ್ (X) ಬಳಸಿ, ರೈಲ್ವೆ ಸಚಿವರು (@AshwiniVaishnaw) ಮತ್ತು ರೈಲ್ವೆ ಸೇವೆಗಳನ್ನು (@RailMinIndia) ಟ್ಯಾಗ್ ಮಾಡಿ ವಿಡಿಯೋ ಅಥವಾ ಫೋಟೋ ಹಾಕಿ. ಸಾಮಾಜಿಕ ಜಾಲತಾಣದ ದೂರಿಗೆ ತಕ್ಷಣ ಪ್ರತಿಕ್ರಿಯೆ ಸಿಗುತ್ತೆ. ಅಲಾರಂ ಚೈನ್ ಎಳೆಯಿರಿ. ಪರಿಸ್ಥಿತಿ ಮಿತಿಮೀರಿದಾಗ ರೈಲನ್ನು ನಿಲ್ಲಿಸಲು ಸಂಕೋಚ ಪಡಬೇಡಿ. ಸಹಪ್ರಯಾಣಿಕರನ್ನು ಎಚ್ಚರಿಸಿ. ಕಿರುಚುವ ಮೂಲಕ ಅಥವಾ ಬೊಬ್ಬೆ ಹಾಕುವ ಮೂಲಕ ಇತರರ ಗಮನ ಸೆಳೆಯಿರಿ. ಸುಮ್ಮನಿದ್ದರೆ ಆತ ಮತ್ತಷ್ಟು ಪ್ರಬಲನಾಗುತ್ತಾನೆ.

ರೈಲ್ವೆ ಪ್ರಯಾಣ ಅನ್ನೋದು ಬಡವ-ಬಲ್ಲಿದ ಎನ್ನದೆ ಎಲ್ಲರೂ ಬಳಸುವ ದಾರಿ. ಇಲ್ಲಿ ಹೆಣ್ಣುಮಕ್ಕಳು ನೆಮ್ಮದಿಯಿಂದ ನಿದ್ರೆ ಮಾಡೋಕು ಸಾಧ್ಯವಾಗದಿದ್ದರೆ ಆ ವ್ಯವಸ್ಥೆಗೆ ಬೆಲೆ ಎಲ್ಲಿದೆ? ಸರ್ಕಾರ ಇಂತಹ ವಿಕೃತರನ್ನು ತಕ್ಷಣ ಬಂಧಿಸಿ, ಅವರಿಗೆ ಇಡೀ ದೇಶವೇ ನೆನಪಿಟ್ಟುಕೊಳ್ಳುವಂತಹ ಶಿಕ್ಷೆ ನೀಡಬೇಕು. ನಿಮ್ಮ ಅಭಿಪ್ರಾಯವೇನು? ಇಂತಹ ಘಟನೆಗಳು ಮರುಕಳಿಸದಂತೆ ರೈಲ್ವೆ ಇಲಾಖೆ ಇನ್ನು ಏನೆಲ್ಲಾ ಕ್ರಮ ತಗೋಬೇಕು? ಕಾಮೆಂಟ್ ಮಾಡಿ ತಿಳಿಸಿ. 

Latest News