Apr 11, 2026 Languages : ಕನ್ನಡ | English

ಪ್ರೀತಿ ಹೆಸರಲ್ಲಿ ಇಂಜಿನಿಯರ್ 'ಗೇಮ್': ಮದುವೆಯಾಗದೆ ಕೈಕೊಟ್ಟ ಪ್ರೇಮಿ - ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ ಅತಿಥಿ ಶಿಕ್ಷಕಿ!!

ಪ್ರೀತಿ, ಪ್ರೇಮ ಅನ್ನೋದು ನಂಬಿಕೆ ಮೇಲೆ ನಿಂತಿರುತ್ತೆ. ಆದರೆ ಅದೇ ನಂಬಿಕೆಯನ್ನ ಬಂಡವಾಳ ಮಾಡಿಕೊಂಡು ಒಬ್ಬ ಇಂಜಿನಿಯರ್ ಯುವತಿಗೆ ಮೋಸ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ, ಏಳೆಂಟು ವರ್ಷ ಜೊತೆಗಿದ್ದು, ಈಗ ಜಾತಿಯ ನೆಪ ಹೇಳಿ ಕೈಕೊಟ್ಟಿರುವ ಪ್ರಿಯಕರನ ವಿರುದ್ಧ ಯುವತಿ ಈಗ ಕಾನೂನು ಸಮರ ಸಾರಿದ್ದಾರೆ. ರಾಯಚೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಇಡೀ ಪ್ರಕರಣದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

8 ವರ್ಷದ ಪ್ರೇಮದ ನಂತರ ಜಾತಿ ನೆಪ ; | Photo Credit: https://x.com/HateDetectors
8 ವರ್ಷದ ಪ್ರೇಮದ ನಂತರ ಜಾತಿ ನೆಪ ; | Photo Credit: https://x.com/HateDetectors

ದೂರು ನೀಡಿದ ಯುವತಿ ಒಬ್ಬ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಮಲ್ಲಿಕಾರ್ಜುನ ದೇವದುರ್ಗದ ನಿವಾಸಿ ಮತ್ತು ವೃತ್ತಿಯಲ್ಲಿ ಇಂಜಿನಿಯರ್. ಇವರಿಬ್ಬರ ಪರಿಚಯ ಇಂದಿನದಲ್ಲ, ಕಾಲೇಜು ದಿನಗಳಿಂದಲೇ ಇವರು ಪರಸ್ಪರ ಪ್ರೀತಿಸುತ್ತಿದ್ದರು. ಸುಮಾರು 7 ರಿಂದ 8 ವರ್ಷಗಳ ಕಾಲ ಇವರ ಪ್ರೇಮಾಯಣ ಸುಸೂತ್ರವಾಗಿ ಸಾಗಿತ್ತು.

ಈ ದೀರ್ಘಾವಧಿಯ ಸಂಬಂಧದಲ್ಲಿ ಇಬ್ಬರೂ ಸೇರಿ ಮಂತ್ರಾಲಯ, ಆಲಮಟ್ಟಿ ಅಣೆಕಟ್ಟು ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಸುತ್ತಾಡಿದ್ದಾರೆ. ಮದುವೆಯಾಗುವ ಭರವಸೆ ನೀಡಿದ್ದರಿಂದ ಯುವತಿ ಕೂಡ ಆತನನ್ನ ಪೂರ್ಣವಾಗಿ ನಂಬಿದ್ದರು.

ಯುವತಿಯ ಆರೋಪದ ಪ್ರಕಾರ, ಮದುವೆಯಾಗುವುದಾಗಿ ನಂಬಿಸಿ ಮಲ್ಲಿಕಾರ್ಜುನ ಆಕೆಯೊಂದಿಗೆ ದೈ*ಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆದರೆ ಯಾವಾಗ ಮದುವೆಯ ಪ್ರಸ್ತಾಪ ಬಂತೋ, ಆಗ ಈ ಇಂಜಿನಿಯರ್ ಅಸಲಿ ಬುದ್ಧಿ ತೋರಿಸಿದ್ದಾನೆ. 'ನಮ್ಮ ಜಾತಿ ಬೇರೆ, ಮನೆಯಲ್ಲಿ ಒಪ್ಪಲ್ಲ' ಎಂಬ ಹಳೆಯ ನೆಪಗಳನ್ನು ಹೇಳಿ ಮದುವೆಯಾಗಲು ನಿರಾಕರಿಸಿದ್ದಾನೆ. ಏಳೆಂಟು ವರ್ಷದ ಪ್ರೀತಿ ಈಗ ಜಾತಿಯ ಕಾರಣಕ್ಕೆ ಬೇಡವಾಯಿತೇ? ಅನ್ನೋದು ನೊಂದ ಯುವತಿಯ ಪ್ರಶ್ನೆ.

ಕೇವಲ ಆರೋಪ ಮಾಡುವುದಷ್ಟೇ ಅಲ್ಲದೆ, ತನ್ನ ಬಳಿ ಇದ್ದ ಪಕ್ಕಾ ಸಾಕ್ಷ್ಯಗಳ ಸಮೇತ ಯುವತಿ ಪೊಲೀಸರ ಹತ್ತಿರ ಹೋಗಿದ್ದಾರೆ. ಇಬ್ಬರೂ ಜೊತೆಗಿದ್ದ ಫೋಟೋಗಳು, ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳು ಹಾಗೂ ವಾಟ್ಸಾಪ್ ಮೆಸೇಜ್‌ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಾಕ್ಷ್ಯಗಳ ಆಧಾರದ ಮೇಲೆ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಯಚೂರು ಎಸ್‌ಪಿ ಅರುಣಾಂಶು ಗಿರಿ ಅವರು, "ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅವರ ಏಳೆಂಟು ವರ್ಷದ ಸಂಬಂಧದ ಬಗ್ಗೆ ಎಲ್ಲಾ ಆಯಾಮಗಳಿಂದ ಪರಿಶೀಲನೆ ನಡೆಸುತ್ತಿದ್ದೇವೆ. ತನಿಖೆಯ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ" ಎಂದು ಭರವಸೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ 'ಮದುವೆ ಭರವಸೆ ನೀಡಿ ವಂಚಿಸುವ' ಕೇಸ್‌ಗಳು ಹೆಚ್ಚಾಗುತ್ತಿವೆ. ಪ್ರೀತಿಯಲ್ಲಿ ನಂಬಿಕೆ ಇರಲಿ, ಆದರೆ ಕುರುಡು ನಂಬಿಕೆ ಬೇಡ. ಅದರಲ್ಲೂ ಸುದೀರ್ಘ ಸಂಬಂಧದ ನಂತರ ಜಾತಿ ಅಥವಾ ಮನೆಯವರ ನೆಪ ಹೇಳಿ ಕೈಕೊಡುವವರ ಬಗ್ಗೆ ಯುವತಿಯರು ಜಾಗರೂಕರಾಗಿರಬೇಕು.

ಏಳೆಂಟು ವರ್ಷ ಪ್ರೀತಿಸಿ ಈಗ ಜಾತಿಯ ನೆಪ ಹೇಳಿ ಕೈಕೊಟ್ಟ ಇಂಜಿನಿಯರ್ ಮಾಡಿದ್ದು ಸರಿನಾ? ಇಂತಹ ವಂಚಕರಿಗೆ ಕಾನೂನು ಯಾವ ರೀತಿ ಪಾಠ ಕಲಿಸಬೇಕು? ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Latest News