ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಖಾತೆ ಹಂಚಿಕೆಯಾಗಿದ್ದೇ ತಡ, ಸಚಿವರ ನಡುವಿನ ಅಸಮಾಧಾನ ಮತ್ತು ಒಳಗುದಿ ಈಗ ಬೀದಿಗೆ ಬಂದಿದೆ. ತಮಗೆ ಸಿಕ್ಕ ಜಲಸಂಪನ್ಮೂಲ ಖಾತೆ ಬೇಡವೇ ಬೇಡ ಅಂತ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ನೀಡಲು ಮುಂದಾಗಿರುವ ಬೆನ್ನಲ್ಲೇ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ಹೈಡ್ರಾಮಾವನ್ನು ಮುಂದಿಟ್ಟುಕೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರು ಕಾಂಗ್ರೆಸ್ ವಿರುದ್ಧ ಟ್ವಿಟರ್ ಹಾಗೂ ಮಾಧ್ಯಮಗಳ ಮೂಲಕ ಕಡಕ್ ಆಗಿ ವಾಗ್ದಾಳಿ ನಡೆಸಿದ್ದಾರೆ.
ಪ್ರಮಾಣವಚನ ಸ್ವೀಕರಿಸುವಾಗ ಮಾತ್ರ ಮಹನೀಯರ ಹೆಸರು ಹೇಳ್ತಾರೆ, ಆದರೆ ಅಧಿಕಾರ ಅಂತ ಬಂದಾಗ ಪ್ರಭಾವಿ ಖಾತೆಗಳಿಗಾಗಿ ಲಾಬಿ ಮಾಡ್ತಾರೆ. ಇವರದ್ದು ಬರೀ ಬೂಟಾಟಿಕೆಯ ರಾಜಕಾರಣ, ಎಂದು ಅಶೋಕ ಲೇವಡಿ ಮಾಡಿದ್ದಾರೆ.
ಕೇಳಿದ ಖಾತೆಯೇ ಬೇಕು ಅಂತ ಹಠ ಹಿಡಿಯೋದು ಯಾವ ನ್ಯಾಯ?
ಕಾಂಗ್ರೆಸ್ ಸಚಿವರ ಖಾತೆ ತಕರಾರಿನ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಆರ್. ಅಶೋಕ, "ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಈ ಕಾಂಗ್ರೆಸ್ ನಾಯಕರಿಗೆ ಜನರ ಕಲ್ಯಾಣ ಮುಖ್ಯವಲ್ಲ. ಖಾತೆ ಹಂಚಿಕೆಯ ವಿಷಯ ಬಂದಾಗ ಮಾತ್ರ ‘ನಮಗೆ ಅದೇ ಖಾತೆ ಬೇಕು, ಇದೇ ಖಾತೆ ಬೇಕು’ ಎಂದು ಬಯಸಿ, ಹಠ ಹಿಡಿದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿ ದುಡ್ಡು ಬರುವ ‘ಪ್ರಭಾವಿ’ ಖಾತೆಗಳನ್ನೇ ಗಿಟ್ಟಿಸಿಕೊಳ್ಳಲು ಮುಗಿಬೀಳುತ್ತಾರೆ," ಎಂದು ಕಿಡಿಕಾರಿದ್ದಾರೆ.
ಒಬ್ಬ ಹಿರಿಯ ಸಚಿವರೇ ತಮಗೆ ಸಿಕ್ಕ ಖಾತೆ ಇಷ್ಟವಾಗದೆ ಸಿಎಂಗೆ ರಾಜೀನಾಮೆ ನೀಡಲು ಮುಂದಾಗಿರುವುದು ಸರ್ಕಾರದ ಒಳಗಿನ ಕಿತ್ತಾಟವನ್ನು ಜಗಜ್ಜಾಹೀರು ಮಾಡಿದೆ ಎಂದು ಅವರು ತಿವಿದಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಕೇಳೋರೇ ಇಲ್ಲ, ಮಹಿಳೆಯರಿಗೆ ಜಾಗವೇ ಇಲ್ಲ
ಯಾರೂ ಕಡೆಗಣಿಸಬಾರದ ಮಹತ್ವದ ಇಲಾಖೆಗಳ ಬಗ್ಗೆ ಮಾತನಾಡಿದ ಅಶೋಕ, "ಯಾವ ಮಹನೀಯರ ಹೆಸರೇಳಿ ಇವರು ಅಧಿಕಾರಕ್ಕೆ ಬಂದಿದ್ದಾರೋ, ಆ ಮಹನೀಯರ ಆಶಯಗಳನ್ನು ಸಾಕಾರಗೊಳಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಅಥವಾ ಪರಿಶಿಷ್ಟ ಪಂಗಡಗಳ (ST) ಕಲ್ಯಾಣದಂತಹ ಖಾತೆಗಳನ್ನು ಸ್ವಯಂಪ್ರೇರಿತರಾಗಿ ಕೇಳುವ ಒಬ್ಬನೇ ಒಬ್ಬ ನಾಯಕ ಈ ಕಾಂಗ್ರೆಸ್‌ನಲ್ಲಿಲ್ಲ. ಅಕಸ್ಮಾತ್ ಅಂತಹ ಖಾತೆಗಳನ್ನು ನೀಡಿದರೆ ಸಂತೋಷದಿಂದ ಸ್ವೀಕರಿಸುವ ಮನಸ್ಥಿತಿಯೂ ಇವರಿಗಿಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಕಾಂಗ್ರೆಸ್‌ನ ಈ ಹೊಸ ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ ಅನ್ನೋದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಇಡೀ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ. ಮಹಿಳಾ ಸಬಲೀಕರಣ ಅಂತ ಭಾಷಣ ಬಿಗಿಯುವ ಕಾಂಗ್ರೆಸ್ಸಿಗರು ಮಹಿಳಾ ಶಾಸಕಿಯರನ್ನು ಸಂಪೂರ್ಣವಾಗಿ ಸೈಡ್‌ಲೈನ್ ಮಾಡಿದ್ದಾರೆ, ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ಸಿಗರದ್ದು ಬರೀ ಬೂಟಾಟಿಕೆ
ಬಾಯಿ ಬಿಟ್ಟರೆ ಸಾಕು ಸಮಾಜವಾದ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಂದು ಹಗಲು ರಾತ್ರಿ ಹಲುಬುವ ಕಾಂಗ್ರೆಸ್ ಪಕ್ಷದ ಅಸಲಿ ಮುಖ ಮತ್ತು ಒಳಗಿನ ಜಗಳ ಇವತ್ತು ರಾಜ್ಯದ ಜನರ ಮುಂದೆ ಬಯಲಾಗಿದೆ. ಅಧಿಕಾರದ ಆಸೆಗಾಗಿ, ಪ್ರಭಾವಿ ಖಾತೆಗಳಿಗಾಗಿ ಕಚ್ಚಾಡುತ್ತಿರುವ ಇವರ ವರ್ತನೆಯನ್ನು ಬೂಟಾಟಿಕೆ ಅನ್ನದೇ ಇನ್ನೇನನ್ನಲು ಸಾಧ್ಯ? ಎಂದು ಆರ್. ಅಶೋಕ ಕಾಂಗ್ರೆಸ್ ನಾಯಕರಿಗೆ ನೇರವಾಗಿ ಪ್ರಶ್ನೆ ಹಾಕಿದ್ದಾರೆ.
ಸದ್ಯಕ್ಕೆ ರಾಮಲಿಂಗಾರೆಡ್ಡಿ ಅವರ ಅಸಮಾಧಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಈ ಬಿಕ್ಕಟ್ಟನ್ನು ಹೇಗೆ ಸಾಲ್ವ್ ಮಾಡ್ತಾರೆ ಮತ್ತು ವಿರೋಧ ಪಕ್ಷದ ಈ ಖಡಕ್ ಟೀಕೆಗಳಿಗೆ ಏನು ಉತ್ತರ ಕೊಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.