ಕರ್ನಾಟಕದಲ್ಲಿ ಮುಂಗಾರು ಮಳೆ ಕ್ಷೀಣಿಸಿ ಮತ್ತೊಮ್ಮೆ ಭೀಕರ ಬರಗಾಲ ಹಾಗೂ ನೀರಿನ ಅಭಾವದ ಆತಂಕ ಎದುರಾಗಿದ್ದರೂ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಕನ್ನಡಿಗರಿಗೆ ಕಣ್ಣೊರೆಸಿ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಕೇವಲ ರಾಜಕೀಯ ಮೈತ್ರಿ ಮತ್ತು ತಮ್ಮ ಅಧಿಕಾರದ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಕನ್ನಡಿಗರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಜನ ದಿನನಿತ್ಯ ಪರದಾಡುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲೂ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಬ್ರ್ಯಾಂಡ್ ಬೆಂಗಳೂರು ಮತ್ತು ಕಾವೇರಿ ಕೊಳ್ಳದ ರೈತರಿಗೆ ಮಾಡಿದ ದ್ರೋಹ ಎಂದು ವಿಪಕ್ಷ ನಾಯಕರು ಕಿಡಿಕಾರಿದ್ದಾರೆ.
ಪ್ರತಿದಿನ 2,000 ಕ್ಯೂಸೆಕ್ ನೀರು ಬಿಡುಗಡೆ
ರಾಜ್ಯದಲ್ಲಿ ಮುಂಗಾರು ಜೂನ್ ತಿಂಗಳು ಮುಗಿಯುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕಾವೇರಿ ಕೊಳ್ಳದ ಜೀವನಾಡಿಯಾದ ಮಂಡ್ಯದ ಕೆಆರ್‌ಎಸ್ (KRS) ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಆತಂಕಕಾರಿ ಮಟ್ಟಕ್ಕೆ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ನೆಪವೊಡ್ಡಿ, ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ಕದ್ದುಮುಚ್ಚಿ ತಮಿಳುನಾಡಿಗೆ ಹರಿಸಲಾಗುತ್ತಿದೆ ಎಂದು ಆರ್. ಅಶೋಕ್ ಅಂಕಿ-ಅಂಶಗಳ ಸಮೇತ ಸರ್ಕಾರದ ವಿರುದ್ಧ ಆಪಾದನೆ ಮಾಡಿದ್ದಾರೆ.
ರಾಜ್ಯದ ರೈತರ ಬೆಳೆಗಳಿಗೆ ನೀರಿಲ್ಲ, ಬೆಂಗಳೂರಿನ ಜನರಿಗೆ ಕುಡಿಯಲು ನೀರಿಲ್ಲ. ಹೀಗಿದ್ದರೂ ತಮಿಳುನಾಡಿನ ಮುಖ್ಯಮಂತ್ರಿಗಳ ಸಂತೋಷಕ್ಕಾಗಿ ಹಾಗೂ ಇಂಡಿ (I.N.D.I.A) ಒಕ್ಕೂಟದ ಮೈತ್ರಿ ಮುರಿದುಬೀಳಬಾರದು ಎಂಬ ಏಕೈಕ ಕಾರಣಕ್ಕಾಗಿ ಕರ್ನಾಟಕದ ಪಾಲಿನ ನೀರನ್ನು ಹರಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕಾಗಿ ದೆಹಲಿ ಹೈಕಮಾಂಡ್ ಎದುರು ಶರಣಾಗತಿ
ಸಾಮಾಜಿಕ ಮಾಧ್ಯಮ 'ಎಕ್ಸ್' (ಟ್ವಿಟರ್) ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರಶ್ನೆಗಳನ್ನು ಎಸೆದಿರುವ ಆರ್. ಅಶೋಕ್, ಕಾಂಗ್ರೆಸ್ ಪಕ್ಷದ ಇತಿಹಾಸ ಮತ್ತು ಅವರ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಆರ್. ಅಶೋಕ್ ಅವರ ವಾಗ್ದಾಳಿ: "ಕಾಂಗ್ರೆಸ್ ಪಕ್ಷದ ಇತಿಹಾಸವೇ ಇಷ್ಟು. ಅಧಿಕಾರವಿಲ್ಲದಾಗ ರಾಜಕೀಯ ಲಾಭಕ್ಕಾಗಿ 'ನಮ್ಮ ನೀರು ನಮ್ಮ ಹಕ್ಕು' ಎಂದು ಬೀದಿಗಿಳಿದು ನಾಟಕದ ಬೊಬ್ಬೆ ಹೊಡೆಯುತ್ತಾರೆ. ಆದರೆ ಅಧಿಕಾರ ಸಿಕ್ಕ ತಕ್ಷಣ 'ನಮ್ಮ ನೀರು ತಮಿಳುನಾಡಿನ ಹಕ್ಕು' ಎಂದು ಶರಣಾಗುತ್ತಾರೆ. ಕೇವಲ ರಾಜಕೀಯ ಮೈತ್ರಿಗಾಗಿ, ತಮಿಳುನಾಡಿನಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಅಂದು ಡಿಎಂಕೆ (DMK) ಪಕ್ಷದ ಎದುರು, ಇಂದು ಹೊಸದಾಗಿ ಉದಯಿಸಿರುವ ಟಿವಿಕೆ (TVK) ಎದುರು ಮಂಡಿಯೂರಿ ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿದ್ದಾರೆ. ನಾಡಿನ ಜನತೆಯ ಹಿತ ಕಾಯದೆ ದೆಹಲಿ ಹೈಕಮಾಂಡ್ ಅಣತಿಯಂತೆ ಕನ್ನಡಿಗರ ಜೀವನಾಡಿಯನ್ನೇ ಬಲಿ ಕೊಡುತ್ತಿದ್ದಾರೆ."
ಮೇಕೆದಾಟು ಪಾದಯಾತ್ರೆ ಕೇವಲ ಬೀದಿನಾಟಕ; ಈಗ ಯಾವ ಯಾತ್ರೆ ಮಾಡ್ತೀರಿ ಸಿಎಂ ಸಾಹೇಬ್ರೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಶೇಷವಾಗಿ ಮೇಕೆದಾಟು ಯೋಜನೆಯ ರೂವಾರಿ ಎಂದು ಬಿಂಬಿಸಿಕೊಳ್ಳುವ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಅಶೋಕ್ ನೇರವಾಗಿ ಪ್ರಶ್ನಿಸಿದ್ದಾರೆ.
"ಚುನಾವಣೆಗೆ ಮುನ್ನ ರಾಜಕೀಯ ಮೈಲೇಜ್ ಪಡೆಯಲು ಮತ್ತು ಅಧಿಕಾರದ ಗದ್ದುಗೆ ಏರಲು 'ಮೇಕೆದಾಟು' ಹೆಸರಿನಲ್ಲಿ ಮೈಲುಗಟ್ಟಲೆ ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ನಿಮ್ಮ ಆ ಪಾದಯಾತ್ರೆ ಎಲ್ಲಿ ಹೋಯಿತು? ಈಗ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಲ್ಲ, ಇದಕ್ಕೆ ಯಾವ ಯಾತ್ರೆ ಎಂದು ಹೆಸರಿಡುತ್ತೀರಿ? ನೀರಿಲ್ಲದೆ, ಕಣ್ಣೆದುರೇ ಬೆಳೆ ಒಣಗಿ ಕಾವೇರಿ ಕೊಳ್ಳದ ನಮ್ಮ ಅನ್ನದಾತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡುತ್ತೀರಾ? ಅಥವಾ ಬೆಂಗಳೂರಿನ ಇಡೀ ಜನಸಂಖ್ಯೆ ಟ್ಯಾಂಕರ್ ಮಾಫಿಯಾದ ಸುಲಿಗೆಗೆ ಸಿಲುಕಿ ಹನಿ ನೀರಿಗೂ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕನ್ನಡಿಗರು ತಕ್ಕ ಪಾಠ ಕಲಿಸುವುದು ನಿಶ್ಚಿತ
ನಾಡದ್ರೋಹಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹ!
— R. Ashoka (@RAshokaBJP) June 29, 2026
ಇಲ್ಲಿ ಮುಂಗಾರು ಕ್ಷೀಣಿಸಿ, ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಎದುರಾಗಿದೆ.
ಆದರೆ ಈ ಕಳ್ಳ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದೇನು?
ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು… pic.twitter.com/CXocxyl6Dg
ರಾಜ್ಯದ ಜನರಿಗೆ ಕನಿಷ್ಠ ನೀರಿನ ಭದ್ರತೆ ಒದಗಿಸಲು ಅಸಮರ್ಥವಾಗಿರುವ ಈ ಸರ್ಕಾರಕ್ಕೆ ಕಾವೇರಿ ಕೊಳ್ಳದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಬೆಂಗಳೂರಿನ ಜನತೆ ಮುಂದಿನ ದಿನಗಳಲ್ಲಿ ಕ್ಷಮಿಸುವುದಿಲ್ಲ. ನಾಡಿನ ಸಂಪತ್ತನ್ನು ಪರಭಾರೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ಶೀಘ್ರದಲ್ಲೇ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ. ಕಾವೇರಿ ಹಿತರಕ್ಷಣೆಯ ವಿಷಯದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಸರ್ಕಾರದ ಈ ರಹಸ್ಯ ನೀರು ಬಿಡುಗಡೆ ನೀತಿಯ ವಿರುದ್ಧ ಉಗ್ರ ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.