ಇದು ಹೊಸ ಪೋಸ್ಟರ್, ಒಳಗಿರೋದು ಹಳೇ ಸಿನಿಮಾ - ಹೊಸ ಸಂಪುಟದ ವಿರುದ್ಧ ಆರ್. ಅಶೋಕ್ ಆಕ್ರೋಶ!!

ಕರ್ನಾಟಕದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಖತ್ ಗರಂ ಆಗಿದ್ದಾರೆ. "ಈ ಹೊಸ ಸರ್ಕಾರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲ. ಇಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತದೆಯೇ ವಿನಃ ಜನರಿಗೇನು ಸಿಗಲ್ಲ. ಈ ಸರ್ಕಾರ ದೆಹಲಿಯ ರಾಹುಲ್ ಗಾಂಧಿಗೆ ಕೇವಲ ಎಟಿಎಂ (ATM) ಇದ್ದ ಹಾಗೆ," ಎಂದು ಭಾರಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಧೂಳೆಬ್ಬಿಸಿದ ಆರ್. ಅಶೋಕ್ | Photo Credit: www.insightrush.news
ಬೆಂಗಳೂರು ಸುದ್ದಿಗೋಷ್ಠಿಯಲ್ಲಿ ಧೂಳೆಬ್ಬಿಸಿದ ಆರ್. ಅಶೋಕ್ | Photo Credit: www.insightrush.news

'ಹೊಸ ವೇಷದಲ್ಲಿರೋ ಹಳೇ ಸರ್ಕಾರ!'

ಹೊಸ ಸಚಿವ ಸಂಪುಟದ ಬಗ್ಗೆ ಮಾತನಾಡಿದ ಆರ್. ಅಶೋಕ್, "ಈ ಸಂಪುಟದಲ್ಲಿ ಏನಾದರೂ ಹೊಸತನ ಇದೆಯಾ ಅಂದ್ರೆ ಖಂಡಿತ ಇಲ್ಲ. ಜನರೆಲ್ಲಾ ಹೊಸ ಚೈತನ್ಯ, ಹೊಸ ಮುಖಗಳನ್ನು ನಿರೀಕ್ಷೆ ಮಾಡಿದ್ದರು. ಆದರೆ ಮತ್ತೆ ಅದೇ ಹಳೇ ಮುಖಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಯಾವುದೇ ಹೊಸಬರಿಗೆ ಚಾನ್ಸ್ ಕೊಟ್ಟಿಲ್ಲ. ಇದು ಹೊಸ ಪೋಸ್ಟರ್ ಅಷ್ಟೇ, ಒಳಗಿರೋದು ಹಳೇ ಸಿನಿಮಾ! ಇದರ ಪರಿಸ್ಥಿತಿ ಧರ್ಮಸ್ಥಳದ ‘ಮಾಸ್ಕ್ ಮ್ಯಾನ್’ ತರಹ ಆಗಿದೆ. ಕೇವಲ ಕುರ್ಚಿಯಲ್ಲಿ ಕೂತಿರೋ ಮುಖ ಬದಲಾಗಿದೆ ಅಷ್ಟೇ, ಆಡಳಿತ ಮಾತ್ರ ಅದೇ ಹಳೇ ಭ್ರಷ್ಟಾಚಾರದ್ದು," ಎಂದು ವ್ಯಂಗ್ಯವಾಡಿದ್ದಾರೆ.

'ಡಿಕೆಶಿ ಅಣ್ಣ, ಮೊದಲು ಕರ್ನಾಟಕ ಜೋಡೋ ಮಾಡಿ!'

ಯುವಕರನ್ನು ಸೆಳೆಯಲು ಸಿಎಂ ಡಿ.ಕೆ. ಶಿವಕುಮಾರ್ ಅವರು ತರಲು ಉದ್ದೇಶಿಸಿರುವ ‘ಭಾರತ್ ಜೋಡೋ ಯುವಕ ಸಂಘ’ದ ಬಗ್ಗೆಯೂ ಅಶೋಕ್ ಸಖತ್ ಆಗಿ ಟ್ರೋಲ್ ಮಾಡಿದ್ದಾರೆ.

"ಡಿಕೆಶಿ ಅಣ್ಣ, ಭಾರತ ಬಹಳ ದೊಡ್ಡದಿದೆ, ಅದರ ಜೋಡಣೆ ಆಮೇಲೆ ಮಾಡರಂತೆ. ಮೊದಲು ನಮ್ಮ ‘ಕರ್ನಾಟಕ ಜೋಡೋ’ ಮಾಡಿ! ಈ ಭಾರತ್ ಜೋಡೋ ಸಂಘ ಬೇರೇನೂ ಅಲ್ಲ, ಇದು ಕಾಂಗ್ರೆಸ್‌ನಲ್ಲಿ ಸೀಟು ಸಿಗದೆ ಉಳಿದಿರೋ ನಿರಾಶ್ರಿತರ ಪುನರ್ವಸತಿ ಕೇಂದ್ರ ಅಷ್ಟೇ. ಈಗ ಡಿಕೆಶಿ ಬಂದು ಯುವಕರನ್ನು ಜೋಡಿಸ್ತೀನಿ ಅಂತಿದ್ದಾರೆ. ಹಾಗಾದ್ರೆ ಇಷ್ಟು ದಿನ ಮಾಜಿ ಸಿಎಂ ಸಿದ್ದರಾಮಯ್ಯ ಯುವಕರನ್ನೆಲ್ಲಾ ಹಾಳು ಮಾಡಿದ್ದರಾ? ಇದು ಕಾಂಗ್ರೆಸ್‌ನ ನಿರುದ್ಯೋಗಿಗಳಿಗೆ ಕೊಡ್ತಿರೋ ಪಿಂಚಣಿ ಯೋಜನೆ ತರಹ ಇದೆ."

'ನೇಮಕಾತಿ ಮಾಡೋಕೆ ಸರ್ಕಾರದ ಹತ್ರ ದುಡ್ಡ ಎಲ್ಲಿದೆ?'

ಹೊಸದಾಗಿ ಸರ್ಕಾರಿ ನೌಕರರ ನೇಮಕಾತಿ ಮಾಡಿಕೊಳ್ಳುವುದಾಗಿ ಸಿಎಂ ಹೇಳಿರುವುದಕ್ಕೆ ಅಶೋಕ್ ಕಠಿಣ ಪ್ರಶ್ನೆ ಎಸೆದಿದ್ದಾರೆ. "ಹಿಂದಿನ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಹೆಸರಾಗಿತ್ತು. ಅಸಮರ್ಥ ಸಚಿವರಿಂದಾಗಿ ರಾಜ್ಯ ಈಗಾಗಲೇ 3 ಲಕ್ಷ ಕೋಟಿ ರೂಪಾಯಿ ಸಾಲದಲ್ಲಿದೆ. ಮೂರು ವರ್ಷದಿಂದ ಖೋತಾ ಬಜೆಟ್ ಮಂಡಿಸಿ, ಜನರ ಮೇಲೆ ಸಾಲು ಸಾಲು ತೆರಿಗೆ ಹಾಕಿ ಜೀವ ಹಿಂಡಿದ್ದಾರೆ. ಇವತ್ತು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಮದ್ದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅನೌನ್ಸ್ ಮಾಡಿದ್ದ ಯೋಜನೆಗಳಿಗೇ ದುಡ್ಡು ಇಟ್ಟಿರಲಿಲ್ಲ. ಹೀಗಿರುವಾಗ ಹೊಸದಾಗಿ ನೇಮಕಾತಿ ಮಾಡಿಕೊಳ್ಳಲು ಇವರ ಹತ್ತಿರ ದುಡ್ಡೆಲ್ಲಿದೆ? ಇದೆಲ್ಲಾ ಬರೀ ಬೋಗಸ್ ಮತ್ತು ಪ್ರಚಾರದ ಗಿಮಿಕ್," ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಪುಟದಲ್ಲಿ ಮಹಿಳೆಯರಿಗಿಲ್ಲ ಸ್ಥಾನ, ಜನರ ಕಷ್ಟ ಕೇಳೋರಿಲ್ಲ!

ಹೊಸ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲದಿರುವುದನ್ನು ಅಶೋಕ್ ಪ್ರಶ್ನಿಸಿದ್ದಾರೆ. "ಡಿಕೆಶಿ ಹಿಂದೆ ಬ್ಯಾಂಡ್ ಬಾರಿಸಿಕೊಂಡು ತಿರುಗಾಡುತ್ತಿದ್ದವರಿಗೇ ಇಲ್ಲಿ ಮಂತ್ರಿ ಸ್ಥಾನ ಸಿಕ್ಕಿಲ್ಲ, ಇನ್ನು ಮಹಿಳೆಯರಿಗೆ ಎಲ್ಲಿ ಕೊಡ್ತಾರೆ?" ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದ ಸದ್ಯದ ದುಸ್ಥಿತಿಯನ್ನು ಬಿಚ್ಚಿಟ್ಟ ಅಶೋಕ್, "ಇವತ್ತು ರಾಜ್ಯದಲ್ಲಿ ಜನ ಬರಗಾಲದಿಂದ ಕಂಗಾಲಾಗಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಜನರು ಸಾಯುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳ ತುಂಬೆಲ್ಲಾ ಗುಂಡಿಗಳಿದ್ದು, ದಿನನಿತ್ಯ ಅಪಘಾತಗಳಾಗುತ್ತಿವೆ. ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಾವು, ಬಾಣಂತಿಯರ ಸಾವು, ಆಸ್ಪತ್ರೆ ಗೋಡೆ ಕುಸಿದು ಸಾವು.. ಹೀಗೆ ಜನರ ಮನಸ್ಸಿನಲ್ಲಿ ಹತ್ತಾರು ಆರದ ಗಾಯಗಳಿವೆ. ಜನ ಕೇಳಿದ್ದು ಒಳ್ಳೆ ಆಡಳಿತ, ಆದ್ರೆ ಇವರು ಮಾಡಿದ್ದು ಬರೀ ಕುರ್ಚಿ ಬದಲಾವಣೆ," ಎಂದು ಆರ್. ಅಶೋಕ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Latest News

Related News