Apr 29, 2026 Languages : ಕನ್ನಡ | English

700 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ವಶ - ಅಂತರಾಜ್ಯ ಕಳ್ಳರ ಗ್ಯಾಂಗ್ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ಗದಗ ಪೊಲೀಸರು!!

ಗದಗ ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದ್ದ ಮುಸುಕುದಾರಿ ಕಳ್ಳರ ಗ್ಯಾಂಗ್ ಈಗ ಪೊಲೀಸ್ ಅತಿಥಿಗಳಾಗಿದ್ದಾರೆ. ಬರೋಬ್ಬರಿ 1 ಕೋಟಿ 26 ಲಕ್ಷದ 53 ಸಾವಿರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯೊಂದಿಗೆ 11 ಮಂದಿ ಅಂತರಾಜ್ಯ ಖದೀಮರನ್ನು ಗದಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ನಗರದಲ್ಲಿ ನಡೆದಿದ್ದ 14 ದೊಡ್ಡ ಕಳ್ಳತನ ಪ್ರಕರಣಗಳು ಒಂದೇ ಏಟಿಗೆ ಸುಖಾಂತ್ಯ ಕಂಡಿವೆ.

ಸಿಸಿಟಿವಿಯಲ್ಲಿ ಮುಖ ಕಾಣದಿದ್ದರೂ ಸಿಕ್ಕಿಬಿದ್ದ ಕಿಲಾಡಿ ಕಳ್ಳರು
ಸಿಸಿಟಿವಿಯಲ್ಲಿ ಮುಖ ಕಾಣದಿದ್ದರೂ ಸಿಕ್ಕಿಬಿದ್ದ ಕಿಲಾಡಿ ಕಳ್ಳರು

ಪ್ಲಾಸ್ಟಿಕ್ ಆಯುವ ನೆಪ.. ರೈಲ್ವೇ ಟ್ರ್ಯಾಕ್ ಮೂಲಕ ಎಂಟ್ರಿ!

ಈ ಕಳ್ಳರ ಐಡಿಯಾ ಕೇಳಿದ್ರೆ ನೀವು ದಂಗಾಗ್ತೀರಾ. ಇವರು ಸಿಟಿಗೆ ಎಂಟ್ರಿ ಕೊಡುತ್ತಿದ್ದುದ್ದೇ ಹೈಟೆಕ್ ಮತ್ತು ಖತರ್ನಾಕ್ ಶೈಲಿಯಲ್ಲಿ:

ಪ್ಲಾನ್ ಏನು?: ಹಗಲು ಹೊತ್ತಿನಲ್ಲಿ ಪ್ಲಾಸ್ಟಿಕ್ ಮತ್ತು ಚಿಂದಿ ಆಯುವವರಂತೆ ನಟಿಸಿ, ಬೀಗ ಹಾಕಿದ ಮನೆಗಳನ್ನು ಗುರುತು ಮಾಡುತ್ತಿದ್ದರು.

ಎಂಟ್ರಿ ಹೇಗೆ?: ಪೊಲೀಸರ ಕಣ್ಣು ತಪ್ಪಿಸಲು ಇವರು ರಸ್ತೆಯಲ್ಲಿ ಬರುತ್ತಿರಲಿಲ್ಲ. ಸಿಟಿಯ ಹೊರವಲಯದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ರೈಲ್ವೇ ಟ್ರ್ಯಾಕ್ ಮೂಲಕ ನಡೆದುಕೊಂಡು ಬಂದು ಸಿಟಿ ಎಂಟ್ರಿ ಕೊಡುತ್ತಿದ್ದರು.

ಪಕ್ಕಾ ಪ್ರೊಫೆಷನಲ್ಸ್: ಸಿಸಿ ಕ್ಯಾಮರಾದಲ್ಲಿ ಮುಖ ಕಾಣಬಾರದೆಂದು ಮುಸುಕು ಧರಿಸುತ್ತಿದ್ದರು. ಬೆರಳಚ್ಚು ಸಿಗಬಾರದೆಂದು ಹ್ಯಾಂಡ್ ಗ್ಲೌಸ್ ಮತ್ತು ಶೂಗಳನ್ನು ಕಡ್ಡಾಯವಾಗಿ ಬಳಸುತ್ತಿದ್ದರು.

ಆ ಒಂದು ಟೀ ಶರ್ಟ್ ಮಾಡಿದ್ದೇನು?

ಎಷ್ಟೇ ಜಾಣತನ ತೋರಿಸಿದರೂ ಕಳ್ಳ ಒಂದಲ್ಲ ಒಂದು ದಿನ ಸಿಕ್ಕಿಬೀಳಲೇಬೇಕು ಅನ್ನೋದಕ್ಕೆ ಈ ಕೇಸ್ ಸಾಕ್ಷಿ. ಸಿಸಿಟಿವಿಯಲ್ಲಿ ಮುಖ ಕಾಣದಿದ್ದರೂ, ಓರ್ವ ಆರೋಪಿ ಹಾಕಿದ್ದ ವಿಶಿಷ್ಟವಾದ ಟೀ ಶರ್ಟ್ ಪೊಲೀಸರ ಕಣ್ಣಿಗೆ ಬಿದ್ದಿದೆ. ಅದೇ ಸುಳಿವನ್ನಿಟ್ಟುಕೊಂಡು ಹಗಲಿರುಳು ಕಾರ್ಯಾಚರಣೆ ನಡೆಸಿದ ಗದಗ ಶಹರ ಮತ್ತು ಬೆಟಗೇರಿ ಪೊಲೀಸರು, ಕೊನೆಗೂ ಈ ಕಿಲಾಡಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಕ್ಕಿರುವ ಮುದ್ದೆಮಾಲು ಎಷ್ಟು?

ಬಂಧಿತರಿಂದ ಪೊಲೀಸರು ವಶಪಡಿಸಿಕೊಂಡಿರುವ ಸೊತ್ತುಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ:

ಬಂಗಾರ: 703 ಗ್ರಾಂ ತೂಕದ ಆಭರಣಗಳು.

ಬೆಳ್ಳಿ: 4 ಕೆಜಿ 337 ಗ್ರಾಂ ಬೆಳ್ಳಿ ಸಾಮಾನುಗಳು.

ವಾಹನಗಳು: ಕಳ್ಳತನಕ್ಕೆ ಬಳಸುತ್ತಿದ್ದ ಬೈಕ್, ಕಾರ್ ಮತ್ತು ಗೂಡ್ಸ್ ವಾಹನಗಳನ್ನು ಸೀಜ್ ಮಾಡಲಾಗಿದೆ.

ಗದಗ ಶಹರ, ಬೆಟಗೇರಿ ಮತ್ತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಳ್ಳರು ಕೈಚಳಕ ತೋರಿಸಿದ್ದರು. ಇವರು ಕೇವಲ ಗದಗ ಮಾತ್ರವಲ್ಲದೆ ಅಂತರಾಜ್ಯ ಮಟ್ಟದಲ್ಲಿ ಕಳ್ಳತನ ಮಾಡುವ ಗ್ಯಾಂಗ್ ಆಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಸತತ ಒಂದು ವರ್ಷದಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಗ್ಯಾಂಗ್ ಅನ್ನು ಹಿಡಿದ ಗದಗ ಪೊಲೀಸರಿಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ಹರಿಯುತ್ತಿದೆ. ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಗದಗ ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Latest News