ಗದಗ ಜಿಲ್ಲೆಯ ಪಾಪನಾಶಿ ಟೋಲ್ ನಾಕಾ ಬಳಿ ಮಹಿಳಾ ಕಂಡಕ್ಟರ್ ಮೇಲೆ ಕೈ ಮಾಡಿದ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಸರ್ಕಾರಿ ಬಸ್‌ನಲ್ಲಿ ಹತ್ತಿದ್ದ ಬಾಲಕಿಯನ್ನು ಇಳಿಸಿದ್ದಕ್ಕೆ ಕೋಪಗೊಂಡ ಪೋಷಕರಿಂದ ಈ ಕೃತ್ಯ ನಡೆದಿದೆ. ಬಸ್‌ನಲ್ಲಿದ್ದ ಕರ್ತವ್ಯ ನಿರತ ಮಹಿಳಾ ಕಂಡಕ್ಟರ್ ನೇತ್ರಾವತಿ ಪತ್ರಿಮಠ ಅವರ ಮೇಲೆ ಕೈ ಮಾಡಿರೋದಾಗಿ ಕಂಡು ಬಂದಿದೆ. ಬಸ್ಸನ್ನು ಟೋಲ್ ನಾಕಾ ಬಳಿ ನಿಲ್ಲಿಸಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿನಿಯೊಬ್ಬಳನ್ನು ಹತ್ತಿಸದೇ ಕೆಳಗಿಳಿಸಿದ್ದರು.
ಇದರಿಂದ ಕೋಪಗೊಂಡ ಬಾಲಕಿಯ ತಂದೆ ಹಾಗೂ ಇನ್ನೊಬ್ಬ ವ್ಯಕ್ತಿ ಬಸ್ ನಿಲ್ಲಿಸಿ ಗಲಾಟೆ ನಡೆಸಿದರು. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಪ್ರಕಾಶ ಲಕ್ಷ್ಮಣ ಸಂಕಣ್ಣವರ ಹಾಗೂ ಶಿಂಗಟರಾಯನಕೇರಿಯ ನೀಲಪ್ಪ ಮುತ್ತಣ್ಣ ಹುಚ್ಚಪ್ಪ ಜಂತ್ರಿ ಎಂಬ ಇಬ್ಬರು ವ್ಯಕ್ತಿಗಳು ಮಹಿಳಾ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಕಪಾಳಕ್ಕೆ ಹೊಡೆದು ಕೈ ಮಾಡಿ ದರ್ಪ ತೋರಿಸಿದ್ದರು. ಪೆಟ್ಟು ತಿಂದ ನೇತ್ರಾವತಿ ಅವ್ರು ತಕ್ಷಣವೇ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಅತ್ತ ಗದಗ ಗ್ರಾಮೀಣ ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ. ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಕಾನೂನುಬಾಹಿರವಾಗಿದ್ದು, ಇಂತಹ ಘಟನೆಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ. ಈ ಘಟನೆ ಮಹಿಳಾ ಸುರಕ್ಷತೆ ಕುರಿತಂತೆ ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿರುವಾಗ ಅವರಿಗೆ ಸುರಕ್ಷತೆ ಒದಗಿಸುವುದು ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳ ಜವಾಬ್ದಾರಿಯಾಗಿದೆ.
ಒಟ್ಟಾರೆ ಹೇಳಬೇಕು ಅಂದರೆ, ಗದಗದಲ್ಲಿ ನಡೆದ ಈ ಘಟನೆ ಸಾರ್ವಜನಿಕ ಸಾರಿಗೆ ಸಿಬ್ಬಂದಿ ಸುರಕ್ಷತೆಯ ಮಹತ್ವವನ್ನು ನೆನಪಿಸುತ್ತಿದೆ. ಹಾಗೆ . ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಬಹದು. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಕಂಡಕ್ಟರ್ ಒತ್ತಾಯಿಸುತ್ತಿದ್ದಾರೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ತಿಳಿಸಿ, ಮಹಿಳಾ ಕಂಡಕ್ಟರ್ ಮೇಲೆ ಕೈ ಮಾಡಿದ್ದೂ ಎಷ್ಟು ಸರಿ ನೀವೇ ಹೇಳಿ.