“ಡಿಕೆಶಿ ಪಟ್ಟ ಜನರ ಭಿಕ್ಷೆ” - ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಭರ್ಜರಿ ವಾರ್ನಿಂಗ್!!

ಬಿಡದಿ ಟೌನ್‌ಶಿಪ್ ಮತ್ತು ಸರ್ಕಾರದ ಸಾಧನಾ ಸಮಾವೇಶಗಳ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಯುವ ಜನತಾದಳದ ನಾಯಕ ನಿಖಿಲ್ ಕುಮಾರಸ್ವಾಮಿ ಕಡಕ್ ಆಗಿ ಗುಡುಗಿದ್ದಾರೆ. "ಜೆಡಿಎಸ್ ಕೇವಲ 17 ಸೀಟ್ ಗೆದ್ದಿದೆ ಅಂತ ಲಘುವಾಗಿ ಮಾತನಾಡೋ ಡಿ.ಕೆ. ಸಾಹೇಬರೇ, ಮಾತಾಡೋ ಮುನ್ನ ಎಚ್ಚರಿಕೆ ಇರಲಿ. ಈ ದುರಹಂಕಾರದ ಅಧಿಕಾರ ಯಾರಿಗೂ ಶಾಶ್ವತ ಅಲ್ಲ," ಎಂದು ನಿಖಿಲ್ ಭರ್ಜರಿ ವಾರ್ನಿಂಗ್ ಕೊಟ್ಟಿದ್ದಾರೆ.

2028ಕ್ಕೆ ಡಿ.ಕೆ. ಶಿವಕುಮಾರ್ ಹಾಲಿ ಇರಲ್ಲ, ಮಾಜಿ ಆಗ್ತಾರೆ
2028ಕ್ಕೆ ಡಿ.ಕೆ. ಶಿವಕುಮಾರ್ ಹಾಲಿ ಇರಲ್ಲ, ಮಾಜಿ ಆಗ್ತಾರೆ

"ಡಿಸಿಎಂ ಪಟ್ಟ ನಾಡಿನ ಜನರ ಭಿಕ್ಷೆ, ದುರಹಂಕಾರ ಬೇಡ!"

ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ಸ್ಥಾನಗಳ ಬಗ್ಗೆ ಲೇವಡಿ ಮಾಡಿದ್ದರು. ಇದಕ್ಕೆ ಚನ್ನರಾಯಪಟ್ಟಣದಲ್ಲಿ ಸರಿಯಾಗಿಯೇ ಕೌಂಟರ್ ಕೊಟ್ಟ ನಿಖಿಲ್, "ಜೆಡಿಎಸ್ ಕೇವಲ 17 ಸ್ಥಾನ ಪಡೆದು ಕಡಿಮೆ ಸಂಖ್ಯೆಗೆ ಇಳಿದಿದೆ ಎಂದು ಮಿಸ್ಟರ್ ಶಿವಕುಮಾರ್ ಮಾತನಾಡಿದ್ದಾರೆ. ನನ್ನ ಸ್ಟೇಟಸ್ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಆದರೆ ಅವರು ಒಂದನ್ನು ನೆನಪಿಟ್ಟುಕೊಳ್ಳಲಿ, ಇವತ್ತು ಅವರು ಅನುಭವಿಸುತ್ತಿರುವ ಡಿಸಿಎಂ ಸ್ಟೇಟಸ್ ಇದೆಯಲ್ಲ, ಅದು ಈ ನಾಡಿನ ಜನ ಕೊಟ್ಟಿರುವ ಭಿಕ್ಷೆ!" ಎಂದು ನೇರವಾಗಿಯೇ ತಿವಿದಿದ್ದಾರೆ.

ದುಡ್ಡಿನ ಮದ ತಲೆಗೆ ಏರದಿರಲಿ:

"ಜನ ಕೊಟ್ಟಿರೋ ಪಟ್ಟವನ್ನು ಕಣ್ಣಿಗೆ ಒತ್ತಿಕೊಂಡು, ದುರಹಂಕಾರ ಪಡದೆ ಅಧಿಕಾರ ನಡೆಸುವುದನ್ನು ಕಲಿಯಿರಿ. ದುಡ್ಡಿನ ಮದ ಮತ್ತು ಅಧಿಕಾರದ ಗತ್ತು ತಲೆಗೆ ಏರಿ ಇಷ್ಟಬಂದ ಹಾಗೆ ಜಾಸ್ತಿ ಮಾತನಾಡಬೇಡಿ. ತಲೆ ತಗ್ಗಿಸಿ ಜನರಿಗೆ ಗೌರವದಿಂದ ದುಡಿಯೋ ಕೆಲಸ ಮಾಡಿ," ಅಂತ ನಿಖಿಲ್ ಕುಮಾರಸ್ವಾಮಿ ಡಿ.ಕೆ. ಶಿವಕುಮಾರ್‌ಗೆ ಕ್ಲಾಸ್ ತಗೊಂಡಿದ್ದಾರೆ.

‘ಡಿಸೈನ್ ಬಾಕ್ಸ್’ ಟೀಂ ಹಾಗೂ ‘ಕೂಲಿ’ ವಿಚಾರಕ್ಕೆ ಭರ್ಜರಿ ಲೇವಡಿ!

ಇದೇ ವೇಳೆ ಕಾಂಗ್ರೆಸ್‌ನ ಸೋಶಿಯಲ್ ಮೀಡಿಯಾ ಪ್ರಚಾರ ಮತ್ತು ಸಿಎಂ ಕುರ್ಚಿ ಫೈಟ್ ಬಗ್ಗೆ ನಿಖಿಲ್ ಸಖತ್ ಫನ್ನಿಯಾಗಿ ಕಾಲೆಳೆದಿದ್ದಾರೆ.

"ಅದೆಂತದೋ ಒಂದು ಡಿಸೈನ್ ಬಾಕ್ಸ್ ಅಂತಾ ಟೀಂ ಇಟ್ಟುಕೊಂಡಿದ್ದಾರಲ್ಲ ಪಾಪಾ ಡಿಕೆ ಸಾಹೇಬರು! ಅದರಲ್ಲಿ ‘ಡಿ.ಕೆ. ಶಿವಕುಮಾರ್ ಎಂಬ ನಾನು’ ಅಂತ ದೊಡ್ಡದಾಗಿ ಹಾಕಿಕೊಂಡಿದ್ದಾರೆ. ಆದರೆ ಇವರು ಮುಂದೆ ಹೋದಮೇಲೆ ಏನಾಗ್ತಾರೆ ಅಂತ ಜನರಿಗೆ ಇನ್ನೂ ಗೊತ್ತಾಗ್ತಾ ಇಲ್ಲ. ಮೊದಲು ನಮ್ಮ ಪಕ್ಷದ ಬಗ್ಗೆ ಚಿಂತೆ ಮಾಡೋದನ್ನ ಬಿಟ್ಟು, ಸ್ವಂತ ಪಕ್ಷದ ಒಳಜಗಳವನ್ನು ಬಗೆಹರಿಸಿಕೊಳ್ಳಲಿ," ಎಂದಿದ್ದಾರೆ.

ಅಷ್ಟೇ ಅಲ್ಲದೆ, ಡಿಕೆಶಿ ಅವರ "ಕೂಲಿ" ಸ್ಟೇಟ್‌ಮೆಂಟ್‌ಗೆ ತಿರುಗೇಟು ನೀಡಿದ ನಿಖಿಲ್, "ಮಾತೆತ್ತಿದರೆ ಸಾಕು, ನಮ್ಮ ಸಹೋದರ ಪಾಪಾ ಕಷ್ಟಪಟ್ಟು ದುಡಿದಿದ್ದಾರೆ, ಅದಕ್ಕೆ ತಕ್ಕ ಕೂಲಿ ಸಿಕ್ಕಿಲ್ಲ ಅಂತ ಇವರ ಬೆಂಬಲಿಗರು ಬೀದಿಯಲ್ಲಿ ಬಾಯಿ ಬಡಿದುಕೊಂಡು ಓಡಾಡ್ತಾರೆ, ದೆಹಲಿಗೂ ಹೋಗ್ತಾರೆ. ಇಷ್ಟು ದಿನ ಇವರಿಬ್ಬರ (ಸಿಎಂ-ಡಿಸಿಎಂ) ಕುರ್ಚಿಯ ಕಿತ್ತಾಟ, ಬಡಿದಾಟ ಮತ್ತು ರಂಪಾಟ ನೋಡಿ ಇಡೀ ರಾಜ್ಯದ ಜನ ನಗುವ ಪರಿಸ್ಥಿತಿ ಬಂದಿದೆ. ಇಷ್ಟೊಂದು ದುಡಿದಿದ್ದೀನಿ ಅಂತಾರಲ್ಲ, ಮೊದಲು ದೆಹಲಿಗೆ ಹೋಗಿ ಹೈಕಮಾಂಡ್ ಹತ್ತಿರ ಆ ಕೂಲಿಯನ್ನ ತಗೊಂಡು ಬರಲಿ ನೋಡೋಣ!" ಅಂತ ಸವಾಲು ಹಾಕಿದ್ದಾರೆ.

"ಕುಣಿಯಲಾರದವಳು ನೆಲ ಡೊಂಕು ಅಂದಳಂತೆ!"

ಕಾಂಗ್ರೆಸ್‌ನ 136 ಸೀಟುಗಳ ಅಹಂಕಾರದ ಬಗ್ಗೆ ಮಾತನಾಡಿದ ನಿಖಿಲ್, "ಜನ ಇವರಿಗೆ 136 ಸೀಟ್ ಗೆಲ್ಲಿಸಿಕೊಟ್ಟಿದ್ದಾರೆ ಹೌದು. ಆದರೆ ಇವರ ಆಡಳಿತ ನೋಡಿದರೆ ‘ಕುಣಿಯಲಾರದವಳು ನೆಲ ಡೊಂಕು ಅಂದ ಹಾಗೆ’ ಇದೆ. ಗ್ಯಾರಂಟಿಗಳನ್ನು ತಂದು ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಈಗ ಅಭಿವೃದ್ಧಿ ಮಾಡಲು ದುಡ್ಡಿಲ್ಲದೆ ಹತಾಶರಾಗಿ ನಮ್ಮ ಮೇಲೆ, ನಿಖಿಲ್ ಮೇಲೆ ಹೀಗೆ ಲಘುವಾಗಿ ಮಾತಾಡ್ತಾ ಇದ್ದಾರೆ. ನನ್ನ ಬಗ್ಗೆ ಚರ್ಚೆ ಮಾಡೋದು ಅವರಿಗೆ ಬೇಡ," ಅಂತ ಕಿಡಿಕಾರಿದ್ದಾರೆ.

"2028 ಕ್ಕೆ ಡಿ.ಕೆ ಶಿವಕುಮಾರ್ ಹಾಲಿ ಇರಲ್ಲ, ಮಾಜಿ ಆಗ್ತಾರೆ!"

ಕೊನೆಯದಾಗಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿರುವ ನಿಖಿಲ್, ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ನೆನಪಿಸಿದ್ದಾರೆ.

"ಮಿಸ್ಟರ್ ಶಿವಕುಮಾರ್ ಅವರೇ, ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬಿಡಿ. ನಿಖಿಲ್ ಕುಮಾರಸ್ವಾಮಿ ಏನು ಅನ್ನೋದನ್ನ ಮುಂದಿನ ದಿನಗಳಲ್ಲಿ ಇದೇ ಜನ ನಿಮಗೆ ತೋರಿಸಿಕೊಡ್ತಾರೆ. ನೆನಪಿರಲಿ, ಇನ್ನು ಕೇವಲ ಎರಡು ವರ್ಷ ಅಷ್ಟೇ. 2028ರ ಮುಂದಿನ ಅಸೆಂಬ್ಲಿ ಎಲೆಕ್ಷನ್ ಮುಗಿಯುತ್ತಿದ್ದಂತೆ ಇದೇ ಡಿ ಕೆ ಶಿವಕುಮಾರ್ ಮಾಜಿ ಆಗ್ತಾರೆ! ಆಮೇಲೆ ಅವರು ಹಾಲಿಯಾಗಿ ಇರಲ್ಲ. ಯಾರಿಗೆ ಆಗಲಿ ಅಧಿಕಾರ ಶಾಶ್ವತ ಅಲ್ಲ, ಮಾತನಾಡುವ ಮುನ್ನ ಎಚ್ಚರಿಕೆ ಇರಲಿ," ಎಂದು ಗುಡುಗಿದ್ದಾರೆ.

Latest News