Mar 25, 2026 Languages : ಕನ್ನಡ | English

ನಮ್ಮ ರಾಜ್ಯದ ಹಣ ನೆರೆ ರಾಜ್ಯಕ್ಕೇಕೆ? ಸಿದ್ದರಾಮಯ್ಯ ಸರ್ಕಾರದ ನಡೆಗೆ ನಿಖಿಲ್ ಕುಮಾರಸ್ವಾಮಿ ನೇರ ಪ್ರಶ್ನೆ!!

ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಲವು ಪ್ರಮುಖ ರಾಜಕೀಯ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ರಾಜ್ಯದ ಎರಡು ಬೈಎಲೆಕ್ಷನ್‌ಗಳಲ್ಲಿ ಜೆಡಿಎಸ್ ಉತ್ತಮ ಅಂತರ ಕಾಯ್ದುಕೊಂಡಿರುವ ವಿಚಾರವನ್ನು ಉಲ್ಲೇಖಿಸಿ ಎರಡೂ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಸಕ್ರಿಯವಾಗಿ ಭಾಗವಹಿಸಿದ್ದನ್ನು ಹೇಳಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿದ್ದು, ಅದು ಮುಗಿದ ಬಳಿಕ ಕುಮಾರಸ್ವಾಮಿಯವರು ಕೂಡ ಬೈಎಲೆಕ್ಷನ್ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಕೇರಳ ಅನುದಾನ ವಿವಾದ;
ಕೇರಳ ಅನುದಾನ ವಿವಾದ;

ಇನ್ನೊಂದು ಪ್ರಮುಖ ವಿಚಾರವಾಗಿ ಕೇರಳಕ್ಕೆ ರಾಜ್ಯ ಸರ್ಕಾರ 10 ಕೋಟಿ ಅನುದಾನ ನೀಡಿದ ಬಗ್ಗೆ ನಿಖಿಲ್ ಕುಮಾರಸ್ವಾಮಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ  ಕೇರಳದ ಮುಖ್ಯಮಂತ್ರಿ ಅಥವಾ ಕರ್ನಾಟಕ ಮುಖ್ಯಮಂತ್ರಿ ಎಂಬ ಪ್ರಶ್ನೆಯನ್ನು ಎತ್ತಿದ ಅವರು, ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಕೂಗು ಸರ್ಕಾರಕ್ಕೆ ಕೇಳಿಸಲಿಲ್ಲ ಎಂದು ಆರೋಪಿಸಿದ್ದಾರೆ. ಕೇರಳದಲ್ಲಿ ಭೂಕುಸಿತದಿಂದ ಜನರಿಗೆ ತೊಂದರೆ ಉಂಟಾದರೆ ಅಲ್ಲಿನ ಸರ್ಕಾರವೇ ಪರಿಹಾರ ನೀಡಬೇಕು, ಆದರೆ ತಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯದ ಹಣವನ್ನು ಬಳಸಲಾಗಿದೆ ಎಂದು ಆರೋಪಿಸಿದರು.

ಜಿಟಿ ದೇವೇಗೌಡರು ಮತ್ತೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಿಖಿಲ್, ಕಳೆದ ಬಾರಿ ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ, ಮುಂದಿನ ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೆ ಮರುಜೀವ ನೀಡಲು ದೇವೇಗೌಡರು ಸದನದಲ್ಲಿ ಮನವಿ ಮಾಡಿದ್ದು, ಕೇಂದ್ರ ಸರ್ಕಾರದಿಂದ ಅದಕ್ಕೆ ಸ್ಪಂದನೆ ದೊರೆತಿದೆ ಎಂದು ತಿಳಿಸಿದ್ದಾರೆ. ಮೇಕೆದಾಟು ಯೋಜನೆಗೂ ಕೇಂದ್ರದ ಅನುಮತಿ ಪಡೆಯಲು ದೇವೇಗೌಡರು ಮತ್ತು ಕುಮಾರಸ್ವಾಮಿ ಬದ್ಧರಾಗಿದ್ದಾರೆ. ಆದರೆ ತಮಿಳುನಾಡು ಸಿಎಂ ಸ್ಟಾಲಿನ್ ಅವರಿಂದ ಡಿಸಿಎಂ ಡಿಕೆ ಶಿವಕುಮಾರ್ NOC ಪಡೆದು ಬರಬೇಕು, ಬಳಿಕ ಕೇಂದ್ರ ಅನುಮತಿಗಾಗಿ ಹೋರಾಟ ಮುಂದುವರಿಸಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಹೆಚ್‌ಡಿ ದೇವೇಗೌಡರನ್ನು ರಾಜ್ಯಸಭೆಗೆ ಎನ್‌ಡಿಎ ನೇರವಾಗಿ ಆಯ್ಕೆ ಮಾಡುವ ವಿಚಾರದ ಬಗ್ಗೆ ಮಾತನಾಡಿ ಈ ಕುರಿತು ಯಾವುದೇ ಮಾಹಿತಿ ಇಲ್ಲ, ಇದು ಕೇಂದ್ರದ ನಾಯಕರಿಗೆ ಸಂಬಂಧಿಸಿದ ವಿಷಯವಾಗಿದ್ದು, ಪಕ್ಷದ ಒಳಗೆ ಕೂಡ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಮನಗರ ತಾಲೂಕಿನ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ನೀಡಿದ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

Latest News