Apr 28, 2026 Languages : ಕನ್ನಡ | English

"ಮೂರು ಬಾರಿ ಸೋತವರಿಗೆ ಯೋಗ್ಯತೆ ಇದೆಯೇ?" ನಿಖಿಲ್ ವಾಗ್ದಾಳಿಗೆ ಚೇತನ್ ಕೆಂಡಾಮಂಡಲ ರಾಜಕೀಯ ಅಖಾಡಕ್ಕಿಳಿದ 'ಸ್ಮಾರಕ' ವಿವಾದ!!

ಕರ್ನಾಟಕದಲ್ಲಿ ಈಗ 'ಸ್ಮಾರಕ' ಪಾಲಿಟಿಕ್ಸ್ ಸಖತ್ ಸೌಂಡ್ ಮಾಡ್ತಿದೆ. ನಟ ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಜಾಗದ ಬಗ್ಗೆ ನಟ ಚೇತನ್ ಅಹಿಂಸಾ ಎತ್ತಿರುವ ಪ್ರಶ್ನೆ ಈಗ ದೊಡ್ಡ ವಿವಾದವಾಗಿ ರೂಪಾಂತರಗೊಂಡಿದೆ. ಒಂದು ಕಡೆ ಅಣ್ಣಾವ್ರ ಅಭಿಮಾನಿಗಳು ಕೆರಳಿದ್ರೆ, ಇನ್ನೊಂದೆಡೆ ರಾಜಕೀಯ ನಾಯಕರು ಚೇತನ್ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಅಣ್ಣಾವ್ರ ಸ್ಮಾರಕ ವಿವಾದ | Photo Credit: Nikhil_Kumar_k | chetanahimsa
ಅಣ್ಣಾವ್ರ ಸ್ಮಾರಕ ವಿವಾದ | Photo Credit: Nikhil_Kumar_k | chetanahimsa

ನಿಖಿಲ್ ಕುಮಾರಸ್ವಾಮಿ 'ಯೋಗ್ಯತೆ'ಯ ಪ್ರಶ್ನೆ

ಈ ವಿವಾದದ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಚೇತನ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. "ಅಣ್ಣಾವ್ರ ಬಗ್ಗೆ ಮಾತನಾಡಲು ಚೇತನ್ ಅವರಿಗೆ ಯಾವುದೇ ಯೋಗ್ಯತೆ ಇಲ್ಲ. ಅವರು ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಡಾ. ರಾಜ್‌ಕುಮಾರ್ ಅವರು ಏನನ್ನೂ ಬಯಸದ ಮಹಾನ್ ವ್ಯಕ್ತಿ, ಅಂಥವರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ" ಎಂದು ನಿಖಿಲ್ ಗುಡುಗಿದ್ದಾರೆ. ಅಣ್ಣಾವ್ರ ಹೆಸರು ಹೇಳುವ ಮೊದಲೇ ಚೇತನ್ ಹತ್ತು ಬಾರಿ ಯೋಚಿಸಬೇಕು ಎಂಬುದು ನಿಖಿಲ್ ವಾದ.

ಚೇತನ್ ಕೊಟ್ಟ 'ಜಬರ್ದಸ್ತ್' ಟಾಂಗ್

ನಿಖಿಲ್ ಹೇಳಿಕೆಗೆ ಸುಮ್ಮನಿರದ ಚೇತನ್, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ದೊಡ್ಡ ಪೋಸ್ಟ್ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ. "ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಯಾರು ಯೋಗ್ಯರು?" ಎಂದು ಪ್ರಶ್ನಿಸಿರುವ ಚೇತನ್, ನೇರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನಿಖಿಲ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಅಸ್ತ್ರ: 2006ರಲ್ಲಿ ಅಣ್ಣಾವ್ರು ನಿಧನರಾದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಆಗ 'ಸ್ಮಾರಕ ಪಾಲಿಟಿಕ್ಸ್' ಶುರು ಮಾಡಿ ಅಭಿಮಾನಿಗಳ ನಡುವೆ 'ಫ್ಯಾನ್ ವಾರ್'ಗೆ ಕಾರಣವಾದವರು ಮಾತನಾಡಲು ಯೋಗ್ಯರಾ? ಎಂದು ಚೇತನ್ ಕೇಳಿದ್ದಾರೆ.

ನಿಖಿಲ್‌ಗೆ ವ್ಯಂಗ್ಯ: "ಮೂರು ಬಾರಿ ಚುನಾವಣೆಯಲ್ಲಿ ಸೋತವರು, ಸ್ವಜನಪಕ್ಷಪಾತ ಬಿಟ್ಟು ಬೇರೇನೂ ಸಾಧನೆ ಇಲ್ಲದವರು ಮಾತನಾಡಲು ಯೋಗ್ಯರಾ?" ಎಂದು ಚೇತನ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನಿಖಿಲ್ ಟ್ವೀಟ್ ಮರ್ಮ: 'ಹೆಸರಲ್ಲಿ ಮಾತ್ರ ಅಹಿಂಸೆ'
ಚೇತನ್ ಅವರ ಈ ಕೌಂಟರ್ ಪೋಸ್ಟ್ ಜೆಡಿಎಸ್ ಬೆಂಬಲಿಗರನ್ನು ಕೆರಳಿಸಿದೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಟ್ವೀಟ್ ಮಾಡುವ ಮೂಲಕ ಚೇತನ್‌ಗೆ ಇತಿಹಾಸದ ಪಾಠ ಮಾಡಿದ್ದಾರೆ. "ರಾಜ್‌ಕುಮಾರ್ ಅವರು ಬರೀ ನಟನಲ್ಲ, ಆರು ಕೋಟಿ ಕನ್ನಡಿಗರ ಭಾವನೆ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಶಕ್ತಿ ತುಂಬಿದವರ ಬಗ್ಗೆ ಇತಿಹಾಸ ತಿಳಿಯದೆ ಮಾತನಾಡುವುದು ನಿಮ್ಮ ಅಹಂಕಾರ. ನಿಮ್ಮ ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಮಾತುಗಳು ಕನ್ನಡಿಗರ ಭಾವನೆಗಳಿಗೆ ಹಿಂಸೆ ನೀಡುತ್ತಿವೆ" ಎಂದು ನಿಖಿಲ್ ತಿವಿದಿದ್ದಾರೆ.

ಸಾರ್ವಜನಿಕರ ಆಕ್ರೋಶ ಮತ್ತು ಸೋಷಿಯಲ್ ಮೀಡಿಯಾ ಕಾಳಗ

ಸದ್ಯ ಈ ವಿಚಾರದಲ್ಲಿ ಸಾರ್ವಜನಿಕರು ಚೇತನ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. "ಇನ್ನಾದರೂ ನಿಮ್ಮ ತಪ್ಪು ತಿದ್ದಿಕೊಳ್ಳಿ, ಅಣ್ಣಾವ್ರ ವಿಚಾರದಲ್ಲಿ ರಾಜಕೀಯ ಮಾಡಬೇಡಿ" ಎಂದು ಜನರು ಚೇತನ್ ಅವರ ಪೋಸ್ಟ್ ಕೆಳಗೆ ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡಪರ ಸಂಘಟನೆಗಳು ಚೇತನ್ ಕೂಡಲೇ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿವೆ.
 
ಒಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಚೇತನ್ ಪ್ರಶ್ನೆ ಮಾಡುತ್ತಿದ್ದರೆ, ಇನ್ನೊಂದೆಡೆ ಕನ್ನಡಿಗರ ಆರಾಧ್ಯ ದೈವದ ಬಗೆಗಿನ ಗೌರವದ ಪ್ರಶ್ನೆಯನ್ನು ನಿಖಿಲ್ ಎತ್ತಿದ್ದಾರೆ. ಈ 'ಮಾತುಗಳ ಸಮರ' ಸದ್ಯಕ್ಕಂತೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸ್ಮಾರಕದ ಜಾಗದ ವಿವಾದ ಈಗ ವೈಯಕ್ತಿಕ ಟೀಕೆಗಳ ಮಟ್ಟಕ್ಕೆ ತಲುಪಿದೆ.

 

Latest News