Jan 25, 2026 Languages : ಕನ್ನಡ | English

ರಸ್ತೆಯಲ್ಲಿ ಅಡ್ಡ ಬಂದನೆಂದು ಡೆಲಿವರಿ ಬಾಯ್ ಗೆ ಹೆಲ್ಮೆಟ್ ನಿಂದ ಹೊಡೆದ ಬೈಕ್ ಸವಾರ - ವಿಡಿಯೋ ವೈರಲ್

ಬೆಂಗಳೂರು ಮಹದೇವಪುರ ಮುಖ್ಯರಸ್ತೆಯಲ್ಲಿ ಜನವರಿ 4ರ ರಾತ್ರಿ 8 ಗಂಟೆ ಸುಮಾರಿಗೆ ನಡೆದ ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಹೌದು ನಡುರಸ್ತೆಯಲ್ಲಿ ನಡೆದ ಈ ಘಟನೆ, ಬೈಕ್ ಸವಾರರು ಮತ್ತು ಡೆಲಿವರಿ ಬಾಯ್ ನಡುವೆ ತೀವ್ರ ಘರ್ಷಣೆಗೆ ಕಾರಣವಾಯಿತು. ಡೆಲಿವರಿ ಬಾಯ್ ಒಬ್ಬ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ವೇಳೆಗೆ , ಬೈಕ್ ಸವಾರರಿಗೆ ಅಡ್ಡ ಬಂದಿದ್ದಾನೆಂಬ ಕಾರಣಕ್ಕೆ ನಿಯಂತ್ರಣ ತಪ್ಪಿ ಎದುರು ಬಂದ ಬೈಕ್ ಕೆಳಗೆ ಬಿದ್ದಿದೆ. ಇದರಿಂದ ಕೋಪಗೊಂಡ ಬೈಕ್ ಸವಾರರು, ಡೆಲಿವರಿ ಬಾಯ್ ಮೇಲೆ ಮನಸೋ ಇಚ್ಚೆ ದಾಳಿ  ನಡೆಸಿದ್ದಾರೆ. ಕಾಲಿನಿಂದ ಒದ್ದು, ಹೆಲ್ಮೆಟ್‌ನಿಂದ ಹೊಡೆದ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.  

ಸಿಸಿಟಿವಿಯಲ್ಲಿ ದಾಖಲಾಗಿದ ಮಹದೇವಪುರ ರಸ್ತೆ ಘಟನೆ – ಸ್ಥಳೀಯರಲ್ಲಿ ಆಕ್ರೋಶ
ಸಿಸಿಟಿವಿಯಲ್ಲಿ ದಾಖಲಾಗಿದ ಮಹದೇವಪುರ ರಸ್ತೆ ಘಟನೆ – ಸ್ಥಳೀಯರಲ್ಲಿ ಆಕ್ರೋಶ

ಘಟನೆಯ ವೇಳೆ ಸ್ಥಳೀಯರು ತಕ್ಷಣವೇ ಮಧ್ಯಪ್ರವೇಶಿಸಿ ಡೆಲಿವರಿ ಬಾಯ್‌ಗೆ ಸಹಾಯಕ್ಕೆ ಬಂದರು. ಬೈಕ್ ಸವಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅವರು ಹಿಂಸಾತ್ಮಕ ವರ್ತನೆ ಮುಂದುವರಿಸಿದ್ದಾರೆ. ಇದರಿಂದ ಕೋಪಗೊಂಡ ಸ್ಥಳೀಯರು ಬೈಕ್ ಸವಾರರಿಗೇ ಧರ್ಮದೇಟು ನೀಡಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ಸ್ಥಳೀಯರ ಗೂಸಾ ತೀವ್ರಗೊಂಡಂತೆ, ಬೈಕ್ ಸವಾರರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ಘಟನೆ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದೃಶ್ಯಾವಳಿಯಲ್ಲಿ ಬೈಕ್ ಸವಾರರು ಡೆಲಿವರಿ ಬಾಯ್ ಮೇಲೆ ಕೈ ಮಾಡಿ ಕಾಲಿನಿಂದ ಒದ್ದ ದೃಶ್ಯಗಳು ಹಾಗೆ ಈ ಕೃತ್ಯ ನಡೆಸಿದ ಕ್ಷಣಗಳು ಸ್ಪಷ್ಟವಾಗಿ ಕಾಣುತ್ತವೆ. ಸ್ಥಳೀಯರು ಪ್ರತಿಕ್ರಿಯಿಸಿದ ರೀತಿಯೂ ದೃಶ್ಯದಲ್ಲಿ ದಾಖಲಾಗಿದೆ.  

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಸ್ಥಳದಲ್ಲಿ ಹೊಡೆದ  ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಈ ಘಟನೆ ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ಶಿಸ್ತಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಡೆಲಿವರಿ ಬಾಯ್‌ಗಳು ತಮ್ಮ ಕೆಲಸದ ನಿಮಿತ್ತ ತುರ್ತುಗತಿಯಲ್ಲಿ ಸಂಚರಿಸುವ ಸಂದರ್ಭಗಳಲ್ಲಿ, ರಸ್ತೆ ನಿಯಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯ. ಅದೇ ರೀತಿ, ಬೈಕ್ ಸವಾರರು ಸಹ ನಿಯಂತ್ರಣ ಕಳೆದುಕೊಂಡಾಗ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಶಾಂತವಾಗಿರಬೇಕು.  

ಒಟ್ಟಿನಲ್ಲಿ, ಮಹದೇವಪುರದಲ್ಲಿ ನಡೆದ ಈ ಘಟನೆ, ಸಾರ್ವಜನಿಕ ಸ್ಥಳದಲ್ಲಿ ಹಿಂಸಾತ್ಮಕ ವರ್ತನೆ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸಿದೆ. ಸಿಸಿಟಿವಿ ದೃಶ್ಯಾವಳಿ ಈಗ ಪೊಲೀಸರ ಕೈಯಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಸಮಾಜದಲ್ಲಿ ಶಾಂತಿ ಮತ್ತು ಶಿಸ್ತನ್ನು ಕಾಪಾಡಲು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಅಗತ್ಯವಾಗಿದೆ.

Latest News