ಬೆಂಗಳೂರು ದಕ್ಷಿಣದ ಕೆ.ಎಸ್.ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಖಾಸಗಿ ಅಪಾರ್ಟ್‌ಮೆಂಟ್‌ಗೆ ಆಹಾರ ತಲುಪಿಸಲು ಹೋದ ಡೆಲಿವರಿ ಹುಡುಗನಿಗೆ ಸೆಕ್ಯೂರಿಟಿ ಗಾರ್ಡ್ ಅಸಭ್ಯ ಸನ್ನೆ ಮಾಡಿದ ಪ್ರಕರಣ ದಾಖಲಾಗಿದೆ. ಈ ಬಗ್ಗೆ NCR (Non-Cognizable Report) ದಾಖಲಾಗಿ, ಪ್ರಕರಣ ತನಿಖೆಯ ಹಂತದಲ್ಲಿದೆ.
ಮಂಗಳವಾರ ಡೆಲಿವರಿ ಹುಡುಗ ಖಾಸಗಿ ಅಪಾರ್ಟ್‌ಮೆಂಟ್‌ಗೆ ಆಹಾರ ತಲುಪಿಸಲು ಹೋಗಿದ್ದ. ಪಾರ್ಕಿಂಗ್ ವಿಚಾರದಲ್ಲಿ ಸೆಕ್ಯೂರಿಟಿ ಗಾರ್ಡ್ ಜೊತೆ ಕಿರಿಕ್ ನಡೆದಿದೆ. ಕನ್ನಡದಲ್ಲಿ ಮಾತನಾಡುತ್ತಿದ್ದ ಡೆಲಿವರಿ ಹುಡುಗನಿಗೆ ಹಿಂದಿ ಮಾತನಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ವಾಗ್ವಾದ ನಡೆಸಿ ಮಧ್ಯದ ಬೆರಳು ತೋರಿಸಿ ಅಸಭ್ಯ ವರ್ತನೆ ಪ್ರದರ್ಶಿಸಿದ.
ಈ ಘಟನೆ ಬಗ್ಗೆ ಸಂಘಟನೆಯೊಂದರ ಸದಸ್ಯರು ಪೊಲೀಸರಿಗೆ ದೂರು ಸಲ್ಲಿಸಿದರು. ಅಸಭ್ಯ ವರ್ತನೆ ಹಿನ್ನೆಲೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ನ್ನು ಕರೆಸಿ ಕ್ಷಮೆ ಕೇಳಿಸಬೇಕೆಂದು ದೂರು ನೀಡಲಾಗಿದೆ. ನಂತರ ಕೆ.ಎಸ್.ಲೇಔಟ್ ಪೊಲೀಸ್ ಠಾಣೆಯಲ್ಲಿ NCR ದಾಖಲಾಗಿ, ಡೆಲಿವರಿ ಹುಡುಗನನ್ನು ಕರೆಸಿ ಸ್ಟೇಟ್‌ಮೆಂಟ್ ದಾಖಲಿಸಲಾಗಿದೆ.
ಘಟನೆಯ ನಂತರ ಭಯದಿಂದ ಸೆಕ್ಯೂರಿಟಿ ಗಾರ್ಡ್ ಸ್ಥಳದಿಂದ ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. NCR ಪ್ರಕರಣ ಗಂಭೀರವಲ್ಲದ ಪ್ರಕರಣವಾಗಿದ್ದರೂ, ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಈ ಘಟನೆ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದ್ದು, ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವವರೊಂದಿಗೆ ಗೌರವದಿಂದ ವರ್ತಿಸುವ ಅಗತ್ಯವನ್ನು ನೆನಪಿಸಿದೆ. ಡೆಲಿವರಿ ಹುಡುಗರಿಗೆ ಗೌರವ ನೀಡಬೇಕೆಂಬ ಚರ್ಚೆ ನಡೆಯುತ್ತಿದ್ದು, ಸಮಾಜದಲ್ಲಿ ಅಸಭ್ಯ ವರ್ತನೆ ಅಸಹ್ಯಕರವೆಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.