ನೈಜೀರಿಯಾ - ಆಫ್ರಿಕಾ ಖಂಡದ ನೈಜೀರಿಯಾ ದೇಶದಲ್ಲಿ ಭದ್ರತಾ ಪರಿಸ್ಥಿತಿ ದಿನೇ ದಿನೇ ಭಯಾನಕವಾಗಿ ಹದಗೆಡುತ್ತಿದೆ. ಉಗ್ರಗಾಮಿ ದಾಳಿಗಳು, ಅಪಹರಣೆ, ಹ*ತ್ಯಾಕಾಂಡಗಳು ಸಾಮಾನ್ಯ ಘಟನೆಗಳಾಗಿದ್ದು, ಜನರ ಬದುಕು ನರಕಕ್ಕಿಂತಲೂ ಭಯಾನಕ ಸ್ಥಿತಿಗೆ ತಲುಪಿದೆ. ಇತ್ತೀಚೆಗೆ ಪಶ್ಚಿಮ ನೈಜೀರಿಯಾದ ಕ್ವಾರಾ ರಾಜ್ಯದಲ್ಲಿ ನಡೆದಿರುವ ಇಸ್ಲಾಮಿಕ್ ಭಯೋತ್ಪಾದಕರ ದಾಳಿ ದೇಶವನ್ನು ಬೆಚ್ಚಿಬೀಳುವಂತೆ ಮಾಡಿದೆ. ಕ್ವಾರಾ ರಾಜ್ಯದ ವೊರೊ ಮತ್ತು ನುಕು ಗ್ರಾಮಗಳನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಉಗ್ರಗಾಮಿಗಳು ಭೀಕರ ದಾಳಿ ನಡೆಸಿದ್ರು, ಇಲ್ಲಿಯವರೆಗೆ ಕನಿಷ್ಠ 162 ಮಂದಿ ನಿರ್ದಾಕ್ಷಿಣ್ಯವಾಗಿ ಹ*ತ್ಯೆಯಾಗಿದ್ದಾರೆ. ಇದು ಇತ್ತೀಚಿನ ತಿಂಗಳುಗಳಲ್ಲಿ ನೈಜೀರಿಯಾದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಹ*ತ್ಯಾಕಾಂಡಗಳಲ್ಲಿ ಒಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ ನಡೆದ ಈ ದಾಳಿಯಲ್ಲಿ, ಸಶಸ್ತ್ರ ಭಯೋತ್ಪಾದಕರು ಹಳ್ಳಿಗಳಿಗೆ ನುಗ್ಗಿ ಜನರ ಮನೆಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ. ಅದಲ್ಲದೆ, ಸ್ಥಳೀಯ ಅಂಗಡಿಗಳನ್ನು ಲೂಟಿ ಮಾಡಿ, ಆಹಾರ ಸಾಮಗ್ರಿ ಹಾಗೂ ಮೌಲ್ಯವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಗ್ರಾಮಸ್ಥರನ್ನು ಭೀತಿಗೊಳಿಸಲು ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದು, ದಾಳಿ ವೇಳೆ ಹಳ್ಳಿಗಳಲ್ಲಿ ಕೂಗು ಅಳಲು ಕೇಳಿ ಬಂದಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ದಾಳಿಯ ಅತ್ಯಂತ ಭೀಕರ ಅಂಶವೆಂದರೆ, ಹಲವು ಗ್ರಾಮಸ್ಥರನ್ನು ಕೈಕಾಲು ಕಟ್ಟಿಹಾಕಿ, ಒಬ್ಬೊಬ್ಬರನ್ನಾಗಿ ಹ*ತ್ಯೆ ಮಾಡಲಾಗಿದೆ ಎಂಬುದು, ಸ್ಥಳೀಯ ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾದ ದೃಶ್ಯಗಳಲ್ಲಿ, ನೆಲದ ಮೇಲೆ ಬಿದ್ದಿರುವ ಮೃತದೇಹಗಳು, ಕಟ್ಟಿಹಾಕಿರುವ ಕೈಗಳು ಹಾಗೂ ಉರಿಯುತ್ತಿರುವ ಮನೆಗಳು ಕಂಡುಬಂದಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಈ ಪ್ರದೇಶವನ್ನು ಪ್ರತಿನಿಧಿಸುವ ಶಾಸಕರಾದ ಮೊಹಮ್ಮದ್ ಉಮರ್ ಬಯೋ, ವೊರೊ ಮತ್ತು ನುಕು ಗ್ರಾಮಗಳಲ್ಲಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ. ಈ ಭೀಕರ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಉಗ್ರ ಸಂಘಟನೆ ಅಧಿಕೃತವಾಗಿ ಹೊತ್ತುಕೊಂಡಿಲ್ಲ. ಕ್ವಾರಾ ರಾಜ್ಯದ ರೆಡ್ ಕ್ರಾಸ್ ಕಾರ್ಯದರ್ಶಿ ಅಯೋಡೆಜಿ ಎಮ್ಯಾನುಯೆಲ್ ಬಬಾಮೊ ಮಾತನಾಡಿ, ದಾಳಿ ನಡೆದ ಗ್ರಾಮಗಳು ರಾಜಧಾನಿಯಿಂದ ಸುಮಾರು ಎಂಟು ಗಂಟೆಗಳ ದೂರದಲ್ಲಿದ್ದು, ನೈಜೀರಿಯಾ ಬೆನಿನ್ ಗಡಿಯ ಸಮೀಪವಿರುವುದರಿಂದ ರಕ್ಷಣಾ ಸಿಬ್ಬಂದಿ ಹಾಗೂ ರೆಡ್ ಕ್ರಾಸ್ ತಂಡಗಳು ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕಕಾರಿಯಾಗಿದೆ. ಇದಿಗ ನೈಜೀರಿಯಾದಲ್ಲಿ ಗಂಭೀರ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿದೆ ಎನ್ನಬಹುದು. ದೇಶದ ಈಶಾನ್ಯ ಭಾಗದಲ್ಲಿ ಇಸ್ಲಾಮಿಸ್ಟ್ ಉಗ್ರಗಾಮಿಗಳ ದಂಗೆ, ವಾಯುವ್ಯ ಮತ್ತು ಉತ್ತರ ಮಧ್ಯ ಪ್ರದೇಶಗಳಲ್ಲಿ ಬಂದೂಕುಧಾರಿಗಳಿಂದ ಅಪಹರಣೆ ಮತ್ತು ಸುಲಿಗೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಘಟನೆಯಲ್ಲಿ, ಕಟ್ಸಿನಾ ರಾಜ್ಯದ ಡೋಮಾ ಗ್ರಾಮದಲ್ಲಿ ಬಂದೂಕುಧಾರಿಗಳು ಕನಿಷ್ಠ 13 ಮಂದಿಯನ್ನು ಹ*ತ್ಯೆ ಮಾಡಿದ್ದಾರೆ ಎಂದು ಮಾಹಿತಿ ಪೊಲೀಸ್ ವಕ್ತಾರ ಅಬುಬಕರ್ ಸಾದಿಕ್ ಅಲಿಯು ಅವರು ತಿಳಿಸಿದ್ದಾರೆ. ಅಲ್ಲಿಯೂ ಸಹ ದಾಳಿಯ ಹೊಣೆ ಯಾರೂ ಹೊತ್ತುಕೊಂಡಿಲ್ಲ.
ಇದೇ ವೇಳೆ, ಸೇನಾ ನೆಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಗಳಲ್ಲಿ ಬೊಕೊ ಹರಾಮ್ ಉಗ್ರಗಾಮಿಗಳು ಕನಿಷ್ಠ 36 ಮಂದಿಯ ಜೀವಹಾನಿ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ನಿರಂತರ ಉಗ್ರ ದಾಳಿಗಳಿಂದ ನೈಜೀರಿಯಾದ ಸಾಮಾನ್ಯ ನಾಗರಿಕರು ಪ್ರತಿ ಕ್ಷಣವೂ ಮರಣ ಭೀತಿಯಲ್ಲಿ ಬದುಕುವಂತಾಗಿದೆ. ಸರ್ಕಾರದ ಭದ್ರತಾ ವೈಫಲ್ಯ ಮತ್ತು ಉಗ್ರಗಾಮಿಗಳ ಅಟ್ಟಹಾಸದ ನಡುವೆ, ದೇಶವು ಗಂಭೀರ ಮಾನವೀಯ ಸಂಕಷ್ಟದ ಅಂಚಿಗೆ ತಲುಪುತ್ತಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.