ಸರ್ಕಾರಿ ಕಚೇರಿಗಳಲ್ಲಿ ರೈತರು ಮತ್ತು ಸಾಮಾನ್ಯ ಜನರು ಅಲೆಯುವುದನ್ನು ತಪ್ಪಿಸಲು ಸರ್ಕಾರ ಜಾರಿಗೆ ತಂದಿರುವ 'ಭೂ ಸುರಕ್ಷಾ' ಯೋಜನೆ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಗಂಭೀರವಾಗಿದ್ದಾರೆ. ಶುಕ್ರವಾರ ವಿಕಾಸಸೌಧದಿಂದ ರಾಜ್ಯದ ಎಲ್ಲಾ ತಹಶೀಲ್ದಾರ್‌ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವರು, ಭೂ ದಾಖಲೆಗಳ ಸ್ಕ್ಯಾನಿಂಗ್ ಕೆಲಸದಲ್ಲಿ ಅಸಡ್ಡೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾರ್ಗೆಟ್ ತಲುಪದಿದ್ರೆ ಕ್ರಮ ಪಕ್ಕಾ!
ಭೂ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಬಗ್ಗೆ ಮಾತನಾಡಿದ ಸಚಿವರು, "ದಿನಕ್ಕೆ ಸರಾಸರಿ 12,000 ಪುಟಗಳನ್ನು ಸ್ಕ್ಯಾನ್ ಮಾಡಬೇಕೆಂದು ಗುರಿ ನೀಡಲಾಗಿದೆ. ಆದರೆ ಕೆಲವೊಂದು ತಾಲೂಕುಗಳಲ್ಲಿ ಇದು 8,000 ಕೂಡ ದಾಟುತ್ತಿಲ್ಲ. ಪ್ರತಿ ತಾಲೂಕಿಗೆ ಎಂಟು ಜನ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಕೊಟ್ಟಿದ್ದರೂ ಕೆಲಸ ಯಾಕೆ ನಿಧಾನವಾಗುತ್ತಿದೆ?" ಎಂದು ಪ್ರಶ್ನಿಸಿದರು. ಸರಿಯಾದ ಉತ್ತರ ನೀಡದ ಗದಗ ಜಿಲ್ಲೆಯ ಶಿರಹಟ್ಟಿ ತಹಶೀಲ್ದಾರ್‌ಗೆ ಸಚಿವರು ಸಭೆಯಲ್ಲೇ ಕ್ಲಾಸ್ ತೆಗೆದುಕೊಂಡರು.
ಮಲೆನಾಡಿನಲ್ಲಿ ಮುಗಿದ ಕೆಲಸ, ಮೈಸೂರು-ಬೆಂಗಳೂರಲ್ಲಿ ಯಾಕಿಲ್ಲ?
ಕಷ್ಟಕರವಾದ ಮಲೆನಾಡು ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿಯಲ್ಲಿ ಸ್ಕ್ಯಾನಿಂಗ್ ಕೆಲಸ ಶೇ.100 ರಷ್ಟು ಮುಗಿದಿದೆ. ಆದರೆ ಎಲ್ಲಾ ಸೌಲಭ್ಯಗಳಿರುವ ಬೆಂಗಳೂರು ನಗರ, ಮೈಸೂರು, ಶ್ರೀರಂಗಪಟ್ಟಣದಂತಹ ತಾಲೂಕುಗಳಲ್ಲಿ ಕೆಲಸ ಬಾಕಿ ಇರುವುದಕ್ಕೆ ಸಚಿವರು ಗರಂ ಆದರು. "ಕೆಲವರು ಚಾಲೆಂಜ್ ಆಗಿ ತಗೊಂಡು ಕೆಲಸ ಮುಗಿಸಿದ್ದಾರೆ, ನಿಮಗೇನು ಕಷ್ಟ?" ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಚೇರಿಗೆ ಬರಬೇಡಿ ಅಂತ ಜನರಿಗೆ ಹೇಳಿ!
"ಈಗಾಗಲೇ 19 ಲಕ್ಷಕ್ಕೂ ಅಧಿಕ ಜನ ಆನ್‌ಲೈನ್ ಮೂಲಕವೇ ಭೂ ದಾಖಲೆಗಳನ್ನು ಪಡೆದಿದ್ದಾರೆ. ದಾಖಲೆಗಳಿಗಾಗಿ ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ. ಅವರಿಗೆ ಅರಿವು ಮೂಡಿಸಿ. ಜನ ಕಚೇರಿಗೆ ಬರುವುದು ಕಡಿಮೆಯಾದಷ್ಟು ನಿಮ್ಮ ಕೆಲಸದ ಒತ್ತಡ ಮತ್ತು ಮಧ್ಯವರ್ತಿಗಳ ಹಾವಳಿ ಎರಡೂ ಕಮ್ಮಿಯಾಗುತ್ತದೆ" ಎಂದು ಸಚಿವರು ಕಿವಿಮಾತು ಹೇಳಿದರು.
ಇತರ ಪ್ರಮುಖ ಸೂಚನೆಗಳು
ಕೋರ್ಟ್ ಕೇಸ್: ತಹಶೀಲ್ದಾರ್ ಕೋರ್ಟ್‌ನಲ್ಲಿ 10,700 ರಷ್ಟಿದ್ದ ಕೇಸ್‌ಗಳನ್ನು 140ಕ್ಕೆ ಇಳಿಸಿರುವುದು ಒಳ್ಳೆಯ ಪ್ರಗತಿ. ಆದರೆ ಶಿಗ್ಗಾಂವ್, ಶಿರಾ, ಮುಳಬಾಗಿಲು ತಾಲೂಕುಗಳಲ್ಲಿ 90 ದಿನ ಮೀರಿದ ಕೇಸ್‌ಗಳು ಬಾಕಿ ಇವೆ, ಅವುಗಳನ್ನು ಶೀಘ್ರ ವಿಲೇವಾರಿ ಮಾಡಿ.
ಫೌತಿ ಖಾತೆ: ಕುಟುಂಬದಲ್ಲಿ ಗಲಾಟೆಗಳಿಲ್ಲದ ಆಸ್ತಿಗಳ ಫೌತಿ ಖಾತೆಯನ್ನು ತಕ್ಷಣ ಮಾಡಿಕೊಡಿ. ಬೆಂಗಳೂರು ಗ್ರಾಮಾಂತರ ಮತ್ತು ರಾಯಚೂರು ಭಾಗದಲ್ಲಿ ಈ ಕೆಲಸ ಬಾಕಿ ಇದೆ.
ಕಂದಾಯ ಗ್ರಾಮ: ಹನೂರು, ಕೊಳ್ಳೆಗಾಲ ಸೇರಿದಂತೆ ಹಲವು ತಾಲೂಕುಗಳಲ್ಲಿ ಕಂದಾಯ ಗ್ರಾಮಗಳ ನೋಂದಣಿ ಕಡಿಮೆಯಾಗಿದೆ. "ಇದು ಬಡವರ ಕೆಲಸ, ಇದನ್ನು ಅರ್ಧಂಬರ್ಧ ಮಾಡಿ ಜನರಿಗೆ ಅನ್ಯಾಯ ಮಾಡಬೇಡಿ" ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಡವರ ಮತ್ತು ರೈತರ ಕೆಲಸದಲ್ಲಿ ವಿಳಂಬ ಮಾಡುವ ಅಧಿಕಾರಿಗಳಿಗೆ ಸಚಿವರು "ಕೆಲಸ ಮಾಡಿ, ಇಲ್ಲವೇ ಕ್ರಮ ಎದುರಿಸಿ" ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.