ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ಪೊಲೀಸ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಕಾವ್ಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಜೊತೆಗೆ ಪೊಲೀಸರು ಹಾಗೂ ಪ್ರತಿವಾದಿ ಪ್ರೇಮಾ ಸೇರಿದಂತೆ ಇತರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಅರ್ಜಿದಾರರ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಂತೆ, ದೂರುದಾರರು ನೀಡಿರುವ ಆರೋಪಗಳು ತದ್ವಿರುದ್ಧವಾಗಿವೆ. ಜನವರಿ 26ರಂದು ಸಹೋದರರ ನಡುವೆ ನಡೆದ ಜಗಳದಲ್ಲಿ ದೂರುದಾರರೇ ಮೊದಲು ಹಲ್ಲೆ ನಡೆಸಿದ್ದಾರೆ ಎಂದು ವಾದಿಸಲಾಗಿದೆ. ಈ ಕುರಿತು ಫೋಟೋಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. ಜನವರಿ 27ರಂದು ಅರ್ಜಿದಾರರು ನೀಡಿದ ದೂರಿಗೆ ಪ್ರತಿಯಾಗಿ ಈ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ವಾದವೂ ಮುಂದಿಡಲಾಗಿದೆ.
ಇದಲ್ಲದೆ, ಎರಡನೇ ಅರ್ಜಿದಾರರಾದ ಸೋಮಶೇಖರ್ ಘಟನೆಯ ನಂತರ ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಮತ್ತು ನಂತರ ಮನೆಗೆ ಮರಳಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯವು ಮುಂದಿನ ವಿಚಾರಣೆ ದಿನಾಂಕದವರೆಗೆ ತನಿಖೆಗೆ ಮಧ್ಯಂತರ ತಡೆ ನೀಡಿದೆ.
ನಟಿ ಹಾಗೂ ಅವರ ಪತಿ ವಿರುದ್ಧ ಬಿಎನ್‌ಎಸ್‌ನ ವಿವಿಧ ಕಲಂಗಳು ಅನ್ವಯವಾಗಿದ್ದವು. ಅವುಗಳಲ್ಲಿ 115(1) (ಸ್ವಯಂ ಪ್ರೇರಿತವಾಗಿ ನೋವುಂಟು ಮಾಡುವುದು), 118(1) (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು), 3(5) (ಸಾಮಾನ್ಯ ಉದ್ದೇಶ), 351(2) (ಕ್ರಿಮಿನಲ್ ಬೆದರಿಕೆ) ಹಾಗೂ 352 (ಉದ್ದೇಶಪೂರ್ವಕ ಅವಮಾನ) ಸೇರಿವೆ. ಈ ಎಫ್‌ಐಆರ್ ಮತ್ತು ದೂರನ್ನು ರದ್ದುಗೊಳಿಸುವಂತೆ ಕೋರಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ ಏನು?
ಈ ಪ್ರಕರಣ ಕೌಟುಂಬಿಕ ಜಗಳದಿಂದ ಆರಂಭವಾಗಿದೆ. ಸೋಮಶೇಖರ್ ಹಾಗೂ ಅವರ ಅಣ್ಣ ನಂದೀಶ್ ಕುಮಾರ್ ಎನ್‌ಆರ್‌ಐ ಲೇಔಟ್, ಕಲ್ಕೆರೆ ಸಮೀಪದ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಕುಟುಂಬದ ವಿಚಾರವಾಗಿ ಸೋಮಶೇಖರ್–ಕಾವ್ಯಾ ಗೌಡ ದಂಪತಿ ಹಾಗೂ ನಂದೀಶ್ ಕುಮಾರ್–ಪ್ರೇಮಾ ದಂಪತಿ ನಡುವೆ ವಾಗ್ವಾದ ನಡೆದಿತ್ತು. ನಂತರ ಎರಡೂ ಕಡೆಯವರು ಪ್ರತ್ಯೇಕ ದೂರುಗಳನ್ನು ನೀಡಿದ್ದು, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿತ್ತು.
ಪ್ರಸ್ತುತ, ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಪ್ರಕರಣದ ತನಿಖೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡುತ್ತದೆ ಎಂಬುದು ಗಮನಾರ್ಹವಾಗಿದೆ.