Feb 16, 2026 Languages : ಕನ್ನಡ | English

ನಟಿ ಕಾವ್ಯ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ದಾಳಿ ಆರೋಪ – ಪ್ರಕರಣ ದಾಖಲು!!

ಕನ್ನಡ ಚಿತ್ರರಂಗದ ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ದಾಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸೋಮಶೇಖರ್ ಅವರ ಅತ್ತಿಗೆಯ ತಂದೆಯೇ ಈ ದಾಳಿಗೆ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾವ್ಯ ಗೌಡ ಅವರು ಗಳಿಸಿರುವ ಜನಪ್ರಿಯತೆಯನ್ನು ಸಹಿಸದೆ ಈ ದಾಳಿ ನಡೆದಿದೆ ಎಂಬ ಮಾಹಿತಿ ಹೊರಬಂದಿದೆ.

ಕಾವ್ಯ ಗೌಡ ದಾಳಿ ಪ್ರಕರಣ – ಅಭಿಮಾನಿಗಳಲ್ಲಿ ಆಘಾತ
ಕಾವ್ಯ ಗೌಡ ದಾಳಿ ಪ್ರಕರಣ – ಅಭಿಮಾನಿಗಳಲ್ಲಿ ಆಘಾತ

ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾವ್ಯ ಗೌಡ ಹಾಗೂ ಅವರ ಪತಿಯ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಕಾವ್ಯ ಗೌಡ ಅವರಿಗೆ ನೇರವಾಗಿ ಬೆದರಿಕೆ ಹಾಕಿ, “ನಿನ್ನನ್ನು ಮಾನಹಾನಿ ಮಾಡಿ ಬಿಡುತ್ತೇನೆ” ಎಂದು ಬೆದರಿಸಿದ ಆರೋಪ ದಾಖಲಾಗಿದೆ. ಪತಿ ಸೋಮಶೇಖರ್ ಅವರನ್ನು ಜೀವಹಾನಿ ಮಾಡೋದಾಗಿ ಬೆದರಿಸಲಾಗಿದೆ ಎಂಬ ಗಂಭೀರ ಆರೋಪವೂ ಹೊರಬಂದಿದೆ. ಈ ಘಟನೆ ನಂತರ ಸೋಮಶೇಖರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾವ್ಯ ಗೌಡ ಅವರ ಅಕ್ಕ ಭವ್ಯ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರುದಲ್ಲಿ ರವಿಕುಮಾರ್ ಎಂಬಾತನ ವಿರುದ್ಧ ಮಾನಹಾನಿ ಬೆದರಿಕೆ ಆರೋಪ ಮಾಡಲಾಗಿದೆ. ಜೊತೆಗೆ ಪ್ರೇಮ, ನಂದೀಶ್, ಪ್ರಿಯಾ ಹಾಗೂ ರವಿಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಅಭಿಮಾನಿಗಳ ಮನಸ್ಸಿನಲ್ಲಿ ಕಾವ್ಯ ಗೌಡ ಅವರು ಸದಾ ಸೌಮ್ಯ ಹಾಗೂ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇಂತಹ ಘಟನೆ ಅವರ ಜೀವನದಲ್ಲಿ ಸಂಭವಿಸಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ನಡೆದ ದಾಳಿ  ಪ್ರಕರಣವು ಸಾಮಾಜಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕೇವಲ ನಟಿ ಕಾವ್ಯ ಗೌಡ ಅವರ ಕುಟುಂಬಕ್ಕೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರಿಗೂ ಆತಂಕ ಮೂಡಿಸುವಂತದ್ದು. ಮಹಿಳೆಯರ ಮೇಲೆ ಬೆದರಿಕೆ, ದಾಳಿ ಹಾಗೂ ಅವಾಚ್ಯ ನಿಂದನೆಗಳು ಗಂಭೀರ ಅಪರಾಧಗಳಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮ ಕಠಿಣವಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. 

Latest News